ಬೆಂಗಳೂರು: ವರನಟ ಡಾ.ರಾಜ್ಕುಮಾರ್ ಅವರ ಪ್ರತಿಮೆ ವಿಚಾರದಲ್ಲಿ ಮಾತನಾಡಿದ್ದ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಈಗ ಯೂಟರ್ನ್ ತೆಗೆದುಕೊಂಡಿದ್ದಾರೆ. ನಾನು ಹಾಗೆ ಮಾತನಾಡೇ ಇಲ್ಲ. ಯಾರೋ ವಿಡಿಯೋವನ್ನು ಎಡಿಟ್ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೂಡ ಕೇಳುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಹ್ಯಾರಿಸ್, ರಾಜಕುಮಾರ್ ಬಗ್ಗೆ ನನಗೆ ಗೌರವ, ಅಭಿಮಾನ ಇದೆ. ಆದರೆ, ಯಾರೋ ಉದ್ದೇಶ ಪೂರ್ವಕವಾಗಿ ವಿಡಿಯೋವನ್ನು ಕಟ್ ಕಾಪಿ ಪೇಸ್ಟ್ ಮಾಡಿ ಅರ್ಥ ಬದಲಿಸಿದ್ದಾರೆ. ದೊಮ್ಮಲೂರು ಭಾಗದಲ್ಲಿ ಪ್ರತಿಮೆ ಕೆಲಸ ನಡೆಯುತಿತ್ತು. ಅದರ ವೀಕ್ಷಣೆಗೆ ಹೋಗಿದ್ದೆ. ಡಾ.ರಾಜಕುಮಾರ್ ಜತೆ ಡಾ. ಅಂಬೇಡ್ಕರ್ ಪ್ರತಿಮೆ ಕೂಡ ಇದೆ. ನಾವು ಅಲ್ಲಿ ಸ್ಟ್ಯಾಚ್ಯೂ ಕಾರ್ಯ ವೀಕ್ಷಣೆ ಮಾತ್ರ ಮಾಡಿ ಬಂದಿದ್ದೆವು ಎಂದಿದ್ದಾರೆ.
ರಾಜಕುಮಾರ್ ಅವರನ್ನು ಜೀವಂತವಾಗಿ ನೋಡಿ ಪ್ರೀತಿ ಹಂಚಿಕೊಳ್ಳುತ್ತಿದ್ದೆವು. ಅಣ್ಣಾವ್ರು ಇಡೀ ಮಾನವ ಕುಲಕ್ಕೆ ಸಂದೇಶ ಕೊಟ್ಟಿದ್ದಾರೆ. ಇವರ ಬಗ್ಗೆ ಯಾರಾದರೂ ಮಾತನಾಡಲು ಆಗುತ್ತದೆಯೇ? ಯಾರಾದರೂ ಇಂಟರ್ ನ್ಯಾಷನಲ್ ಅಣ್ಣಾವ್ರು ಅಂತ ಇದ್ದರೆ ಅದು ರಾಜಕುಮಾರ್ ಅವರೇ. ನಾನು ಅವಕಾಶ ಸಿಕ್ಕಾಗೆಲ್ಲ ವೇದಿಕೆ ಮೇಲೆ ಹುಟ್ಡಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಹಾಡು ಹೇಳುತ್ತೇನೆ ಎಂದು ರಾಜ್ಕುಮಾರ್ ಬಗ್ಗೆ ತಮಗೆ ಇರುವ ಗೌರವವನ್ನು ವ್ಯಕ್ತಪಡಿಸಿದರು.
ರಾಜ್ಕುಮಾರ್ ಪ್ರತಿಮೆ ಬರುವುದಕ್ಕೆ ನಾನೂ ಸಹ ಕಾರಣವೇ. ಅಣ್ಣಾವ್ರ ಬಗ್ಗೆ ನಾನು ಸಾಕಷ್ಟು ಗೌರವ ಹೊಂದಿದ್ದೇನೆ. ನನ್ನ ಮಾತಿನಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳು ತಲೆ ಮಾಂಸ, ಕುರಿ ಕೇಳುತ್ತಾರೆ ಎಂಬ ವಿವಾದ ತಣ್ಣಗಾಗಿಸಲು ಜಗ್ಗೇಶ್ ಟ್ವೀಟ್
ಹ್ಯಾರಿಸ್ ಹೇಳಿದ್ದೇನು?
ಹ್ಯಾರಿಸ್ ರಾಜ್ಕುಮಾರ್ ಪ್ರತಿಮೆ ನೋಡಲು ಹೋಗಿದ್ದರು. ಈ ವೇಳೆ ಮಾತನಾಡಿದ್ದ ಹ್ಯಾರಿಸ್, ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ. ಅದರಲ್ಲಿ ಆಫೀಸ್ ಬೇರೆ ಮಾಡಿಕೊಡುವುದಕ್ಕೆ ಆಗುತ್ತಾ? ಈ ಪ್ರತಿಮೆಗೆ ಕವರ್ ಏನು ಬೇಕಾಗುವುದಿಲ್ಲ. ಓಪನ್ ಆಗಿ ಇಡಿ. ಸ್ಟ್ಯಾಚ್ಯುಗೆಲ್ಲಾ ಕವರ್ ಯಾಕ್ ಬೇಕು? ಪ್ರೊಟೆಕ್ಷನ್ ಬೇಕಿದ್ದರೆ ಮನೆಯಲ್ಲೇ ಇಟ್ಟಿದ್ದರೆ ಆಗಿರುತ್ತಿತ್ತು. ರೋಡಲ್ಲಿ ಯಾಕೆ ಇಡುತ್ತಾರೆ? ಬುದ್ಧಿ ಇಲ್ಲ, ಏನ್ ಮಾಡೋದು? ಏನಾದರೂ ಹೇಳಿದರೆ ಅದನ್ನು ಬೇರೆ ರೀತಿಯಲ್ಲೇ ತೆಗೆದುಕೊಳ್ಳುತ್ತಾರೆ ಎಂದಿದ್ದರು.
Published On - 5:50 pm, Wed, 17 February 21