ಚಿರತೆ ಜೊತೆ ಸೆಣಸಾಡಿದವರಿಗೆ ಶೌರ್ಯಪ್ರಶಸ್ತಿ ಕೊಡಿ -ಚಿರತೆ ವಿರುದ್ಧ ಹೋರಾಡಿದ ವೀರರಿಗೆ ಶಾಸಕ ಶಿವಲಿಂಗೇಗೌಡರಿಂದ ಸನ್ಮಾನ

|

Updated on: Feb 25, 2021 | 11:02 PM

ಚಿರತೆ ಜೊತೆ ಸೆಣಸಾಡಿದವರಿಗೆ ಶೌರ್ಯಪ್ರಶಸ್ತಿ ಕೊಡಲಿ ಎಂದು ಹೇಳಿದರು. ಅಂದು ಚಿರತೆ ಕೊಂದಿದ್ದ ರಾಜಗೋಪಾಲ್​ಗೆ ಪ್ರಶಸ್ತಿ ಕೊಡಲಿ. ಚಿರತೆ ಜೊತೆ ಹೋರಾಡಿ ತಾಯಿಯನ್ನು ರಕ್ಷಿಸಿದ್ದ ಕಿರಣ್​ಗೂ ಕೊಡಲಿ ಎಂದು ಹೇಳಿದರು.

ಚಿರತೆ ಜೊತೆ ಸೆಣಸಾಡಿದವರಿಗೆ ಶೌರ್ಯಪ್ರಶಸ್ತಿ ಕೊಡಿ -ಚಿರತೆ ವಿರುದ್ಧ ಹೋರಾಡಿದ ವೀರರಿಗೆ ಶಾಸಕ ಶಿವಲಿಂಗೇಗೌಡರಿಂದ ಸನ್ಮಾನ
ಚಿರತೆ ವಿರುದ್ಧ ಹೋರಾಡಿದ ವೀರರಿಗೆ ಶಾಸಕ ಶಿವಲಿಂಗೇಗೌಡರಿಂದ ಸನ್ಮಾನ
Follow us on

ಹಾಸನ: ತಮ್ಮ ಕುಟುಂಬದವರ ಮೇಲೆ ದಾಳಿ ಮಾಡಿದ್ದ ಚಿರತೆಯ ಜೊತೆ ಸೆಣಸಾಡಿ ತಮ್ಮವರ ಪ್ರಾಣವನ್ನು ಉಳಿಸಿದ ವೀರರಿಗೆ ಇಂದು ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಸನ್ಮಾನ ಮಾಡಿದರು. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಇಂದು ಚಿರತೆ ವಿರುದ್ಧ ಹೋರಾಡಿದ್ದ ಇಬ್ಬರಿಗೆ ಸನ್ಮಾನಿಸಿದರು. ಸದ್ಯ, ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೀರರಾದ ಕಿರಣ್​ ಹಾಗೂ ರಾಜಗೋಪಾಲ್​ರ ಅರೋಗ್ಯ ವಿಚಾರಿಸಿದ ಶಾಸಕ ಶಿವಲಿಂಗೇಗೌಡ ನಂತರ ಅವರನ್ನು ಸನ್ಮಾನಿಸಿ ಅವರ ಧೈರ್ಯವನ್ನು ಶ್ಲಾಘಿಸಿದರು.

ಅಂದ ಹಾಗೆ, ಫೆಬ್ರವರಿ 22 ರಂದು ಚಿರತೆಯೊಂದು 6 ಜನರ ಮೇಲೆ ದಾಳಿ ಮಾಡಿತ್ತು. ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೈರಗೊಂಡನಹಳ್ಳಿ ಹಾಗು ಬೆಂಡೆಕೆರೆಯಲ್ಲಿ ದಾಳಿಮಾಡಿದ್ದ ಚಿರತೆ ಬೈರಗೊಂಡನಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿತ್ತು. ಈ ವೇಳೆ, ಅದರ ಜೊತೆ ಸೆಣಸಾಡಿ ತನ್ನ ತಾಯಿಯ ಪ್ರಾಣವನ್ನು ಕಿರಣ್ ಎಂಬ ಯುವಕ ಉಳಿಸಿದ್ದ.

ಇತ್ತ, ಅಲ್ಲಿಂದ ಪರಾರಿಯಾಗಿದ್ದ ಚಿರತೆ ಸಾಯಂಕಾಲ ತಮ್ಮ ಮಡದಿ ಹಾಗೂ ಮಗಳ ಜೊತೆ ತೆರಳುತ್ತಿದ್ದ ರಾಜಗೋಪಾಲ್ ಎಂಬುವವರ ಮೇಲೆ ದಾಳಿ ಮಾಡಿತ್ತು. ತನ್ನ ಪತ್ನಿ ಮತ್ತು ಪುತ್ರಿಯ ರಕ್ಷಣೆಗೆ ಮುಂದಾದ ರಾಜಗೋಪಾಲ್​ ಚಿರತೆಯ ಕತ್ತು ಹಿಸುಕಿ ಕೊಂದಿದ್ದರು. ಹೀಗಾಗಿ, ಇಂದು ಚಿರತೆ ವಿರುದ್ಧ ಹೋರಾಡಿದ ತಮ್ಮ ಕ್ಷೇತ್ರದ ವೀರರಿಗೆ ಶಾಸಕ ಶಿವಲಿಂಗೇಗೌಡ ಸನ್ಮಾನ ಮಾಡಿ ಗೌರವಿಸಿದರು.

‘ಚಿರತೆ ಜೊತೆ ಸೆಣಸಾಡಿದವರಿಗೆ ಶೌರ್ಯಪ್ರಶಸ್ತಿ ಕೊಡಲಿ’
ಈ ನಡುವೆ ಮಾತನಾಡಿದ ಶಾಸಕ ಶಿವಲಿಂಗೇಗೌಡ ಚಿರತೆ ಜೊತೆ ಸೆಣಸಾಡಿದವರಿಗೆ ಶೌರ್ಯಪ್ರಶಸ್ತಿ ಕೊಡಲಿ ಎಂದು ಹೇಳಿದರು. ಅಂದು ಚಿರತೆ ಕೊಂದಿದ್ದ ರಾಜಗೋಪಾಲ್​ಗೆ ಪ್ರಶಸ್ತಿ ಕೊಡಲಿ. ಚಿರತೆ ಜೊತೆ ಹೋರಾಡಿ ತಾಯಿಯನ್ನು ರಕ್ಷಿಸಿದ್ದ ಕಿರಣ್​ಗೂ ಕೊಡಲಿ ಎಂದು ಹೇಳಿದರು.

ಅವರು ಚಿರತೆ ಹಿಡಿದು ಉಸಿರುಗಟ್ಟಿಸಿ ಕೊಂದಿದ್ದಾರೆ. ಅವರ ಸಾಧನೆಗೆ ಸರ್ಕಾರವೇ ಶೌರ್ಯ ಪ್ರಶಸ್ತಿ ಕೊಡಬೇಕು. ಸರ್ಕಾರದವರು ಪ್ರಶಸ್ತಿ ಕೊಡದಿದ್ದರೆ ನಾವೇ ಕೊಡುತ್ತೇವೆ ಎಂದು ಅರಸೀಕೆರೆ JDS ಶಾಸಕ ಶಿವಲಿಂಗೇಗೌಡ ಹೇಳಿದರು.

ಗಾಯಾಳುಗಳನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ

ಗಾಯಾಳುಗಳನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ
ಇತ್ತ, ಚಿರತೆ ದಾಳಿಯಲ್ಲಿ ಗಾಯಗೊಂಡವರನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿಮಾಡಿ ಆರೋಗ್ಯ ವಿಚಾರಿಸಿದರು. ಚಿರತೆ ಕೊಂದ ರಾಜಗೋಪಾಲ್ ಮತ್ತು ಚಿರತೆ ವಿರುದ್ಧ ಹೋರಾಡಿದ್ದ ಕಿರಣ್ ಸೇರಿ ಇತರ ಗಾಯಾಳುಗಳನ್ನು ಸಚಿವರು ಭೇಟಿಮಾಡಿದರು. HIMSಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ‌ ಗಾಯಾಳುಗಳನ್ನು ಭೇಟಿಯಾದ ಸಚಿವರು ರಾಜಗೋಪಾಲ್ ಹಾಗೂ ಕಿರಣ್ ಕುಟುಂಬಕ್ಕೆ ತಲಾ 25 ಸಾವಿರ ರೂಪಾಯಿ ನೆರವು ನೀಡಿದರು. ಇದಲ್ಲದೆ, ಗಾಯಾಳುಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು.

ಚಿರತೆ ದಾಳಿಯಿಂದ ಪಾರಾಗಿ ಜೀವ ಉಳಿಸಿಕೊಂಡ ಬಾಲಕ
ಇತ್ತ, ಚಿರತೆ ದಾಳಿಯಿಂದ ಪಾರಾಗಿ ಬಾಲಕನೊಬ್ಬ ಜೀವ ಉಳಿಸಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಕಡಕೊಳದ ಬೀರೆಗೌಡನ ಹುಂಡಿಯ ತೋಟದಲ್ಲಿ ಕಳೆದ ಶನಿವಾರ ನಡೆದಿದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಬಾಲಕ ನಂದನ್​ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಬಾಲಕನ‌ ಕತ್ತು ಹಾಗೂ ದೇಹದ ಮೇಲೆ 20ಕ್ಕೂ ಹೆಚ್ಚು ಹೊಲಿಗೆಯನ್ನು ಹಾಕಲಾಗಿದೆ.

ಸಾವಿನ ದವಡೆಯಿಂದ ಪಾರಾದ ಬಾಲಕ ನಂದನ್​

ಏನಿದು ಪ್ರಕರಣ?
ಕಡಕೊಳದ‌ ನಿವಾಸಿಯಾದ ನಂದನ್​ ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕ. ತೋಟದಲ್ಲಿ ಹಸುಗಳಿಗೆ ಹುಲ್ಲನ್ನು ತರಲು ಹೋಗಿದ್ದಾಗ ಏಕಾಏಕಿ ಹಿಂದೆಯಿಂದ ದಾಳಿ ಮಾಡಿದ್ದ ಚಿರತೆ ಆತನನ್ನು ಎಳೆದೊಯ್ಯಲು ಮುಂದಾಗಿತ್ತು. ಈ ವೇಳೆ, ತನ್ನ ಪ್ರಾಣ ಉಳಿಸಿಕೊಳ್ಳಲು ನಂದನ್​ ಹೋರಾಟ ಮಾಡಿದ್ದ. ಚಿರತೆ ಕಣ್ಣಿಗೆ ತನ್ನ ಬೆರಳಿನಿಂದ ತಿವಿದು ಪ್ರಾಣಾಪಾಯದಿಂದ ಪಾರಾಗಿದ್ದ. ಇದೇ ವೇಳೆ, ಆತನ ತಂದೆ ಅಲ್ಲಿಗೆ ಬಂದು ಚಿರತೆಯನ್ನು ಓಡಿಸಿದ್ದರು.

ನನ್ನ ತಂದೆ ಸ್ಥಳದಲ್ಲಿ ಇಲ್ಲದಿದ್ದರೆ ನನ್ನ ಪ್ರಾಣ ಹೋಗುತ್ತಿತ್ತು. ಚಿರತೆ ನನ್ನನ್ನು ಕೆಲ ದೂರ ಎಳೆದೊಯ್ದಿತ್ತು. ತಂದೆ ಬಂದು ಚಿರತೆ ಓಡಿಸಿದರು ಎಂದು ಸಾವಿನ ದವಡೆಯಿಂದ ಪಾರಾದ ನಂದನ್​ ಧೈರ್ಯದಿಂದ ಹೇಳಿದನು.

ಪೋಷಕರ ಜೊತೆ ನಂದನ್​

ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ
ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಂಪುಹೊಳೆ ಬಳಿ ನಡೆದಿದೆ. ಕೆಂಪುಹೊಳೆ ಬಳಿ ಲಾರಿ ಚಾಲಕ ವಾಕಿಲ್(26) ಎಂಬಾತನನ್ನು ಆನೆ ದಾಳಿ ಮಾಡಿ ಕೊಂದಿದೆ.

ಹರಿಯಾಣ ಮೂಲದ ಲಾರಿ ಚಾಲಕ ವಾಕಿಲ್​ನನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ಒಂಟಿ ಸಲಗ ತುಳಿದು ಸಾಯಿಸಿದೆ. ವಾಕಿಲ್​ ಮಂಗಳೂರಿನಿಂದ ಬೆಂಗಳೂರಿನತ್ತ ಲಾರಿಯಲ್ಲಿ ತೆರಳುತ್ತಿದ್ದ. ದಾರಿ ಮಧ್ಯೆ ಲಾರಿ ನಿಲ್ಲಿಸಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಲಾರಿ ಚಾಲಕನನ್ನು ಸಲಗ ತುಳಿದು ಕೊಂದಿದೆ. ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ  ಓದಿ: ‘ಇದು ಮಾಡು ಇಲ್ಲವೇ ಮಡಿ ಹೋರಾಟ.. ಮಾರ್ಚ್​ 5ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’