ಬಳ್ಳಾರಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹೆಚ್ಚಾಗಿ ಮಕ್ಕಳನ್ನು ಕಾಡುತ್ತಿದೆ. ಮೆಡಿಕಲ್ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಟಿವಿ9ಗೆ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಮಾಹಿತಿ ನೀಡಿದ್ದಾರೆ. 600ಕ್ಕೂ ಹೆಚ್ಚು ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ 24 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿರುವ ಬಾಲಕಿಯರ ಪ್ರೌಢಶಾಲೆಯ 4 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗುಲಿದ್ದು ಪ್ರೌಢಶಾಲೆಗೆ ರಜೆ ಘೋಷಿಸಿ ಉಳಿದ ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 32 ಜನರಿಗೆ ಕೊರೊನಾ ಸೋಂಕು ತಗುಲಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 32 ಜನರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ವಸತಿ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗಿದ್ದು ಸಂಜೆಯ ವೇಳೆಗೆ ಕೊವಿಡ್ ಟೆಸ್ಟ್ ವರದಿ ಬರುವ ಸಾಧ್ಯತೆ ಇದೆ.
ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಕೊರೊನಾ ಹೆಚ್ಚಾಗಿದೆ. ಸರ್ಕಾರಿ ಜೂನಿಯರ್ ಕಾಲೇಜಿನ 13 ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಹಾಗೂ ಕಾಳಿದಾಸ ಪ್ರೌಢಶಾಲೆ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು 37 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು ಎಲ್ಲ ಸೋಂಕಿತರನ್ನ ಹೋಂ ಕ್ವಾರಂಟೈನ್‌ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶಾಲೆಗಳನ್ನು ಬಂದ್ ಮಾಡಬೇಕು – ಶಾಸಕ ಸುರೇಶ್ ಗೌಡ
ಇನ್ನು ರಾಜ್ಯದಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಮಂಡ್ಯದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ, ಶಾಲೆಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ತಕ್ಷಣವೇ ಶಾಲೆಗಳನ್ನು ಬಂದ್ ಮಾಡಿ. ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸುತ್ತಿದೆ. ನನ್ನ ಕ್ಷೇತ್ರದ ಕಂಬದಹಳ್ಳಿಯ 20 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಸೋಂಕಿತ ಮಕ್ಕಳು ಮನೆಗೆ ಹೋದಾಗ ಪೋಷಕರಿಗೂ ಕೊರೊನಾ ಹರಡುತ್ತದೆ. 15 ವರ್ಷದೊಳಗಿನ ಮಕ್ಕಳ ಶಾಲೆಗಳನ್ನು ಬಂದ್ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಶಾಸಕ ಸುರೇಶ್‌ಗೌಡ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಲಾಕ್ಡೌನ್ ಅನಿವಾರ್ಯ ಎಂಬ ಪರಿಸ್ಥಿತಿ ಬಂದೇಬಿಡ್ತಾ? ಯಾವ ಯಾವ ಏರಿಯಾದಲ್ಲಿ ಕೋವಿಡ್ ಆರ್ಭಟ ಇದೆ? ವಿವರ ಇಲ್ಲಿದೆ
Published On - 9:11 am, Tue, 11 January 22