ಹಾವೇರಿ: ಬೆಳಗಾಗುತ್ತಲೆ ಪಾನ್ ಶಾಪ್​ಗೆ ಹಾಜರಾಗುವ ಕೆಂಪು ಮಂಗಗಳು: ಯಾಕೆ ಗೊತ್ತಾ?

sandhya thejappa

sandhya thejappa | Edited By: guruganesh bhat

Updated on: Apr 08, 2021 | 12:20 PM

ಪಿಡಬ್ಲ್ಯೂಡಿ ಕಚೇರಿ ಮುಂಭಾಗದಲ್ಲಿ ಸಣ್ಣದೊಂದು ಪಾನ್ ಶಾಪ್ ನಡೆಸುತ್ತಿರುವ ಶಿವಾಜಿರಾವ್ ಅಂಗಡಿಗೆ ಬರುವ ಕೆಂಪು ಮಂಗಗಳಿಗೆ ಅಂಗಡಿಯಲ್ಲಿನ ಶೇಂಗಾ ಚಿಕ್ಕಿ, ಬಾಳೆಹಣ್ಣು ಎಂದರೆ ಬಲು ಪ್ರೀತಿ. ಒಂದೊಂದಾಗಿ ಅಂಗಡಿಗೆ ಬರುವ ಮಂಗಣ್ಣಗಳು ಅಂಗಡಿಯಲ್ಲಿ ನೇತು ಹಾಕಿರುವ ಬಾಳೆ ಗೊನೆಯಲ್ಲಿ ಬಾಳೆಹಣ್ಣು ಕಿತ್ತುಕೊಂಡು ತಿನ್ನುತ್ತವೆ.

ಹಾವೇರಿ: ಬೆಳಗಾಗುತ್ತಲೆ ಪಾನ್ ಶಾಪ್​ಗೆ ಹಾಜರಾಗುವ ಕೆಂಪು ಮಂಗಗಳು: ಯಾಕೆ ಗೊತ್ತಾ?
ಪಾನ್​ ಶಾಪ್​ಗೆ ಬಂದು ಇಣುಕುತ್ತಿರುವ ಮಂಗ


ಹಾವೇರಿ: ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಪಕ್ಕದಲ್ಲಿರುವ ಶಿವಾಜಿರಾವ್ ಎಂಬುವರ ಪಾನ್ ​ಶಾಪ್​ಗೆ​ ಕೆಂಪು ಮಂಗಗಳು ಖಾಯಂ ಅತಿಥಿಗಳು. ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ಅಂಗಡಿ ಹಿಂದಿನ ಗಿಡ ಮರಗಳಲ್ಲಿ ವಾಸ ಮಾಡುವ ಕೆಂಪು ಮಂಗಗಳು ಶಿವಾಜಿರಾವ್ ಪಾನ್ ಶಾಪ್ ಬಾಗಿಲು ತೆರೆಯುತ್ತಿದ್ದಂತೆ ಅಂಗಡಿಗೆ ಹಾಜರಿ ಹಾಕುತ್ತವೆ. ಅಂಗಡಿ ಬಾಗಿಲು ತೆರೆಯುವುದು ತಡವಾದರೂ ಅಲ್ಲಿಯೇ ಕಾದು ಕುಳಿತು ಅಂಗಡಿ ತೆರೆದ ನಂತರ ತಮಗೆ ಬೇಕಾದ ತಿನಿಸುಗಳನ್ನು ತಿಂದು ಹೋಗುತ್ತವೆ.

ಶೇಂಗಾ ಚಿಕ್ಕಿ, ಬಾಳೆಹಣ್ಣು ಬಲು ಪ್ರೀತಿ
ಪಿಡಬ್ಲ್ಯೂಡಿ ಕಚೇರಿ ಮುಂಭಾಗದಲ್ಲಿ ಸಣ್ಣದೊಂದು ಪಾನ್ ಶಾಪ್ ನಡೆಸುತ್ತಿರುವ ಶಿವಾಜಿರಾವ್ ಅಂಗಡಿಗೆ ಬರುವ ಕೆಂಪು ಮಂಗಗಳಿಗೆ ಅಂಗಡಿಯಲ್ಲಿನ ಶೇಂಗಾ ಚಿಕ್ಕಿ, ಬಾಳೆಹಣ್ಣು ಎಂದರೆ ಬಲು ಪ್ರೀತಿ. ಒಂದೊಂದಾಗಿ ಅಂಗಡಿಗೆ ಬರುವ ಮಂಗಣ್ಣಗಳು ಅಂಗಡಿಯಲ್ಲಿ ನೇತು ಹಾಕಿರುವ ಬಾಳೆ ಗೊನೆಯಲ್ಲಿ ಬಾಳೆಹಣ್ಣು ಕಿತ್ತುಕೊಂಡು ತಿನ್ನುತ್ತವೆ. ಶೇಂಗಾ ಚಿಕ್ಕಿಯ ಡಬ್ಬಿ ತಾವೆ ಓಪನ್ ಮಾಡಿ ಶೇಂಗಾ ಚಿಕ್ಕಿಯನ್ನು ತಿನ್ನುತ್ತವೆ. ಶೇಂಗಾ ಚಿಕ್ಕಿ ಮತ್ತು ಬಾಳೆಹಣ್ಣು ಬಿಟ್ಟರೆ ಅಂಗಡಿಯಲ್ಲಿನ ಯಾವ ಪದಾರ್ಥಗಳನ್ನು ತಿನ್ನುವುದಿಲ್ಲ, ಹಾನಿ ಮಾಡುವುದಿಲ್ಲ.

ಯಾರಿಗೂ ಹೆದರುವುದಿಲ್ಲ, ಏನೂ ಮಾಡುವುದಿಲ್ಲ
ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ಶಿವಾಜಿರಾವ್​ನ ಪಾನ್ ಶಾಪ್​ಗೆ ಬರುವ ಕೆಂಪು ಮಂಗಗಳು ಅಂಗಡಿಯ ಮುಂದೆ ಜನರಿದ್ದರೂ ತಮಗೆ ಬೇಕಾದ್ದನ್ನು ತಿಂದು ಹೋಗುತ್ತವೆ. ಅಂಗಡಿಯ ಮೇಲೆ ಬಂದು ಕೂತು ಆ ಕಡೆ.. ಈ ಕಡೆಗೆ ನೋಡಿ ಅಂಗಡಿಗೆ ಬಂದು ತಮಗೆ ಬೇಕಾಗಿದ್ದನ್ನು ತಿಂದು ಹೋಗುತ್ತವೆ. ಒಂದೊಂದಾಗಿ ಅಂಗಡಿಗೆ ಬರುವ ಕೆಂಪು ಮಂಗಗಳು ಅಂಗಡಿ ನಡೆಸುವ ಶಿವಾಜಿರಾವ್​ಗಾಗಲೆ ಅಥವಾ ಅಂಗಡಿಯ ಮುಂದೆ ನಿಂತಿರುವ ಜನರಿಗಾಗಲಿ ಈವರೆಗೂ ಏನೂ ಮಾಡಿಲ್ಲ. ಯಾರಿಗೂ ಹೆದರದೆ ಅಂಗಡಿಗೆ ಬಂದು ತಮಗೆ ಬೇಕಾದ್ದನ್ನು ತಿಂದು ಹೋಗುತ್ತವೆ.

ಬಾಳೆ ಹಣ್ಣನ್ನು ತಿನ್ನುತ್ತಿರುವ ಮಂಗ

ಅಂಗಡಿಗೆ ಅದೃಷ್ಟದಂತಿವೆ
ಕಳೆದ ಕೆಲವು ವರ್ಷಗಳಿಂದ ಶಿವಾಜಿರಾವ್ ಪಾನ್ ಶಾಪ್ ಅಂಗಡಿ ನಡೆಸುತ್ತಿದ್ದಾರೆ. ಅಂಗಡಿ ಆರಂಭಿಸಿದ ಕೆಲವು ತಿಂಗಳುಗಳ ನಂತರದಿಂದ ಕೆಂಪು ಮಂಗಗಳು ಅಂಗಡಿಗೆ ಬರುತ್ತಿವೆ. ಅಂಗಡಿಗೆ ಮಂಗಗಳು ಬಂದಾಗೊಮ್ಮೆ ಹತ್ತರಿಂದ ಹದಿನೈದು ಬಾಳೆಹಣ್ಣು, ಎಂಟತ್ತು ಶೇಂಗಾ ಚಿಕ್ಕಿಗಳನ್ನು ತಿಂದು ಹೋಗುತ್ತವೆ. ಆದರೆ ಮಂಗಗಳು ಬಂದು ತಿಂದು ಹೋಗುವುದರಿಂದ ತಮಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಒಮ್ಮೊಮ್ಮೆ ಅಂಗಡಿಗೆ ಬಂದು ಸುಮ್ಮನೆ ಕೂರುತ್ತವೆ. ಆಗ ನಾನೇ ಮಂಗಗಳಿಗೆ ಅವುಗಳಿಗೆ ಪ್ರಿಯವಾದ ಬಾಳೆಹಣ್ಣು, ಶೇಂಗಾ ಚಿಕ್ಕಿ ಕೊಟ್ಟು ತಿನ್ನಿಸುತ್ತೇನೆ. ಇಪ್ಪತ್ತರಿಂದ ಮೂವತ್ತು ಮಂಗಗಳ ದೊಡ್ಡ ಹಿಂಡು ಇದೆ. ಅದರಲ್ಲಿ ಕೆಲವೊಂದು ಮಂಗಗಳು ಮಾತ್ರ ಖಾಯಂ ಆಗಿ ಅಂಗಡಿಗೆ ಬಂದು ಹೋಗುತ್ತವೆ. ಮಂಗಗಳು ಬಂದು ತಿಂದು ಹೋಗುವುದರಿಂದ ನನಗೆ ಒಳ್ಳೆಯದೆ ಆಗಿದೆ ಎನ್ನುತ್ತಾರೆ ಪಾನ್ ಶಾಪ್ ಅಂಗಡಿಯ ಶಿವಾಜಿರಾವ್.

ತಮಗೆ ತಿನ್ನಲು ಬೇಕಾದ ವಸ್ತುಗಳನ್ನು ಮಾತ್ರ ತೆಗೆದುಕೊಂದು ಮಂಗ ವಾಪಸ್​ ಹೋಗುತ್ತದೆ

ಕಳೆದ ಕೆಲವು ವರ್ಷಗಳಿಂದ ಶಿವಾಜಿರಾವ್​ನ ಅಂಗಡಿಗಳಿಗೆ ಕೆಂಪು ಮಂಗಗಳು ಬರುತ್ತವೆ. ಅಂಗಡಿಯ ಬಳಿಯಲ್ಲೇ ಟ್ಯಾಕ್ಸಿ ನಿಲ್ದಾಣ ಇದೆ. ಸಾಕಷ್ಟು ಜನರಿರುತ್ತಾರೆ. ಆದರೂ ಮಂಗಗಳು ಯಾರಿಗೂ ಏನೂ ತೊಂದರೆ ಮಾಡದೆ ತಮ್ಮ ಪಾಡಿಗೆ ತಾವು ಬಂದು ಅಂಗಡಿಯಲ್ಲಿ ತಮಗೆ ಬೇಕಾದುದನ್ನು ತಿಂದು ಹೋಗುತ್ತವೆ. ಅಂಗಡಿಗೆ ಬರುವ ಮಂಗಗಳನ್ನು ಶಿವಾಜಿರಾವ್ ಹೊಡೆದು ಅಥವಾ ಗದರಿಸಿ ಓಡಿಸಿರುವುದನ್ನು ನಾವು ನೋಡಿಲ್ಲ. ಬದಲಾಗಿ ಶಿವಾಜಿರಾವ್ ಅವುಗಳಿಗೆ ತಿನ್ನಲು ಕೊಟ್ಟು ಕಳಿಸುತ್ತಾರೆ. ದುಡಿಮೆಯಲ್ಲಿನ ಸ್ವಲ್ಪ ಭಾಗವನ್ನು ಶಿವಾಜಿರಾವ್ ಮಂಗಗಳಿಗೆ ಮೀಸಲಿಟ್ಟಂತಾಗಿದೆ ಎಂದು ಟ್ಯಾಕ್ಸಿ ಚಾಲಕ ರಘು ತಿಳಿಸಿದರು.

(ವರದಿ: ಪ್ರಭುಗೌಡ.ಎನ್.ಪಾಟೀಲ -9980914107)

ಇದನ್ನೂ ಓದಿ

ಸಾರಿಗೆ ಮುಷ್ಕರ ಮುಂದುವರಿದರೆ ಜನರೇ ಬಸ್ ಖಾಸಗೀಕರಣದ ಧ್ವನಿ ಎತ್ತುತ್ತಾರೆ -ಸಂಸದ ಪ್ರತಾಪ್ ಸಿಂಹ ಗುಡುಗು

ಕೊರೊನಾ ಎರಡನೇ ಅಲೆ ಆತಂಕದ ಮಧ್ಯೆ.. ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದ ನ್ಯೂಜಿಲ್ಯಾಂಡ್

(Monkeys come to Pan Shop every day to eat banana fruit and Chikki at haveri)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada