ಬೆಂಗಳೂರು, ಆಗಸ್ಟ್ 11: ರಾಜ್ಯದಲ್ಲಿ 1,695 ಕ್ಕೂ ಹೆಚ್ಚು ಅಕ್ರಮ ಶಾಲೆಗಳಿದ್ದು (Illegal Schools), ಅಂತಹ ಶಾಲೆಗಳನ್ನು ಹಂತ-ಹಂತವಾಗಿ ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಶುಕ್ರವಾರ ಹೇಳಿದ್ದಾರೆ. ಅನುಮತಿಯಿಲ್ಲದೆ ಆರಂಭಿಸಲಾಗುವ ಹೊಸ ಶಾಲೆಗಳಿಗೆ ಬ್ಲಾಕ್ ಶಿಕ್ಷಣಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಪ್ರೈವೇಟ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನೊಂದಿಗೆ ನಡೆದ ಸಭೆಯ ನಂತರ ಬಂಗಾರಪ್ಪ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಖಾಸಗಿ ಶಾಲಾ ಸಂಘದ ಸದಸ್ಯರು ತಮ್ಮ ಕುಂದುಕೊರತೆಗಳ ಬಗ್ಗೆ ನನಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಶಾಲೆಗಳ ಬಗ್ಗೆ ದೂರು ನೀಡಿದ್ದಾರೆ. ಸಮಸ್ಯೆಯನ್ನು ಪರಿಹರಿಸಲು ನಾವು ವಿವಿಧ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ಶೀಘ್ರದಲ್ಲೇ ಅವುಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸುತ್ತೇವೆ ಎಂದು ಬಂಗಾರಪ್ಪ ಹೇಳಿದ್ದಾರೆ.
ಅಕ್ರಮ ಶಾಲೆಗಳನ್ನು ತಕ್ಷಣವೇ ಮುಚ್ಚಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಒಂದನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ತುಂಬಿರಬೇಕು; ರಾಜ್ಯ ಸರ್ಕಾರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್
ರಾಜ್ಯದಲ್ಲಿ 1,695 ಅಕ್ರಮ ಶಾಲೆಗಳಿವೆ. ಈ ಶಾಲೆಗಳಲ್ಲಿ ಸಾವಿರಾರು ಮಕ್ಕಳು ಓದುತ್ತಿರುವುದರಿಂದ ಅವುಗಳನ್ನು ತಕ್ಷಣವೇ ಮುಚ್ಚಲು ಸಾಧ್ಯವಿಲ್ಲ. ಹಲವಾರು ಶಾಲೆಗಳನ್ನು ಅನುಮತಿ ಪಡೆಯದೆ ಮೇಲ್ದರ್ಜೆಗೇರಿಸಲಾಗಿದೆ. 190 ಶಾಲೆಗಳು ಸೂಕ್ತ ಅನುಮತಿ ಪಡೆಯದೆ ಸ್ಥಳ ಬದಲಾಯಿಸಿವೆ. ಹಂತ ಹಂತವಾಗಿ ಎಲ್ಲಾ ಅಕ್ರಮ ಶಾಲೆಗಳನ್ನು ಮುಚ್ಚಲಾಗುವುದು. ಶೀಘ್ರದಲ್ಲೇ ಇಂತಹ ಅಕ್ರಮ ಶಾಲೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ ಎಂದು ಬಂಗಾರಪ್ಪ ಹೇಳಿದ್ದಾರೆ.
ಆಗಸ್ಟ್ 14 ರೊಳಗೆ ಅಕ್ರಮ ಶಾಲೆಗಳನ್ನು ಮುಚ್ಚುವಂತೆ ಶಿಕ್ಷಣ ಇಲಾಖೆಯು ಆಗಸ್ಟ್ 9 ರಂದು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ