13 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು -ಮಗಳಿಂದಲೇ ತಾಯಿಯ ಹತ್ಯೆ

| Updated By: ಸಾಧು ಶ್ರೀನಾಥ್​

Updated on: Jan 08, 2024 | 10:26 AM

ಮಗಳಿಂದಲೇ ತಾಯಿಯ ಹತ್ಯೆ, 13 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಸ್ಮಶಾನದಿಂದ ಮೃತದೇಹ ಹೊರಕ್ಕೆ ತೆಗೆಯಲು ಮುಂದಾದ ಪೊಲೀಸರು ಇದು ಮಂಡ್ಯ ತಾಲೂಕಿನ ಹೆಬ್ಬಾಕವಾಡಿ ಗ್ರಾಮದಲ್ಲಿ ನಡೆದಿರುವ ಘಟನೆ

13 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು -ಮಗಳಿಂದಲೇ ತಾಯಿಯ ಹತ್ಯೆ
13 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು -ಮಗಳಿಂದಲೇ ತಾಯಿಯ ಹತ್ಯೆ
Follow us on

ಆ ಅಮ್ಮ-ಮಗಳ ಬಾಂಧವ್ಯ ವಿಶೇಷವಾಗಿತ್ತು. ಆ ತಾಯಿ ಮಗಳನ್ನ ಕಷ್ಟಪಟ್ಟು ಬೆಳಿಸಿ ದೊಡ್ಡವಳನ್ನಾಗಿ ಮಾಡಿ ಮದುವೆ ಮಾಡಿಕೊಟ್ಟಿದ್ದಳು. ಆದರೆ ಆ ತಾಯಿಗೆ ಆಸರೆಯಾಗಬೇಕಾದ ಮಗಳು, ಹೆತ್ತ ತಾಯಿಯ ಉಸಿರನ್ನೇ ನಿಲ್ಲಿಸಿದ್ದಳು. ತಾಯಿಯನ್ನೇ ಕೊಲೆಗೈದು ರಾತ್ರೋರಾತ್ರಿ ಮಣ್ಣು ಮಾಡಿ ನಾಪತ್ತೆ ಬಣ್ಣ ಕಟ್ಟಿದ್ದಳು. ಆದರೆ ಕೊನೆಗೂ ಪೊಲೀಸರ ಕಾರ್ಯಾಚರಣೆಯಿಂದಾಗಿ ಕೊಲೆಯ ರಹಸ್ಯ 13 ತಿಂಗಳ ಬಳಿಕ ಬಯಲಾಗಿತ್ತು.

ಹೌದು ಕೊನೆಗೂ ತಾಯಿಯನ್ನ ಹತ್ಯೆ ಮಾಡಿ, ತಾಯಿ ನಾಪತ್ತೆ ಆಗಿದ್ದಾಳೆ ಎಂದು ಬಣ್ಣಕಟ್ಟಿದ್ದ ಮಗಳ ನಾಟಕ ಪೊಲೀಸರ ತನಿಖೆಯಿಂದ ಬಯಲಾಗಿದ್ದು, ಕೊಲೆ ರಹಸ್ಯ ಕೂಡ ಬೆಳಕಿಗೆ ಬಂದಿದೆ. ಅಂದಹಾಗೆ ಮಂಡ್ಯ ತಾಲೂಕಿನ ಹೆಬ್ಬಾಕವಾಡಿ ಗ್ರಾಮದ ಶಾರದಮ್ಮ (52) ಮಗಳಿಂದಲೇ ಕೊಲೆಯಾದ ದುರ್ದೈವಿ. ಅಂದಹಾಗೆ ಶಾರದಮ್ಮ ಕೆಲವು ವರ್ಷಗಳ ಕೆಳಗೆ ಗಂಡನನ್ನ ಕಳೆದುಕೊಂಡಿದ್ದಳು. ತನಗೆ ಇದ್ದ ಒಬ್ಬಳೇ ಮಗಳು ಅನುಷಾ ಎಂಬಾಕೆಯನ್ನ ಮೈಸೂರು ಜಿಲ್ಲೆಯ ಹಾರೋಹಳ್ಳಿ ನಿವಾಸಿ ದೇವರಾಜ್ ಎಂಬಾತನ ಜೊತೆ ವಿವಾಹ ಮಾಡಿಕೊಟ್ಟಿದ್ದಳು.

ಈ ಮಧ್ಯೆ ಕಣ್ಣಿನ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಅನುಷಾ ತನ್ನ ತಾಯಿಯನ್ನ ಮೈಸೂರಿಗೆ ಕರೆಸಿಕೊಂಡು ಕಣ್ಣಿನ ಚಿಕಿತ್ಸೆ ಮಾಡಿಸಿ ವಾಪಸ್ ಹೆಬ್ಬಕವಾಡಿ ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದಳು. ಆದರೆ ಚಿಕಿತ್ಸೆ ಕೊಡಿಸುವುದು ತಡವಾದ ಹಿನ್ನೆಲೆಯಲ್ಲಿ ತಾಯಿ ಮಗಳ ನಡುವೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಅನುಷಾ ತನ್ನ ಗಂಡನ ಜೊತೆ 2022 ರ ನವೆಂಬರ್ 22ರ ರಾತ್ರಿ ಹೆಬ್ಬಾಕವಾಡಿಗೆ ಬಂದಿದ್ದಳು.

ಈ ವೇಳೆ ಗಲಾಟೆ ನಡೆದು ಮುದ್ದೆ ಹಿಟ್ಟಿನ ದೊಣ್ಣೆಯಿಂದ ಮಗಳಿಗೆ ಹೊಡೆಯಲು ಹೋದಾಗ ಅನುಷಾ ತಾಯಿಯನ್ನ ನೂಕಿದ್ದಳು. ಈ ವೇಳೆ ಕೆಳಗೆ ಬೀಳುವ ವೇಳೆ ಮಂಚಕ್ಕೆ ತಲೆ ತಗುಲಿ ಶಾರದಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಹೀಗಾಗಿ ಭಯದಿಂದಲೇ ಅನುಷಾ ಹಾಗೂ ಆಕೆಯ ಗಂಡ ದೇವರಾಜು ಇಬ್ಬರು ಸೇರಿಕೊಂಡು ಹೆಬ್ಬಾಕವಾಡಿ ಗ್ರಾಮದ ಮನೆಯ ಸಮೀಪವೇ ಇದ್ದ ಸ್ಮಶಾಣದಲ್ಲಿ ರಾತ್ರೋರಾತ್ರಿ ಗುಂಡಿ ತೆಗೆದು ಮೃತದೇಹವನ್ನ ಮಣ್ಣು ಮಾಡಿ ಹೋಗಿದ್ದರು. ಯಾರಿಗೂ ಅನುಮಾನ ಸಹ ಬಂದಿರಲಿಲ್ಲ. ಆನಂತರ ಸಂಬಂಧಿಕರು ಕೇಳಿದ್ರೆ ಯಾರೋ ಜೊತೆ ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದಳು.

Also Read: ಸಿಸಿಬಿ ದಾಳಿ ನಡೆಸಿದ ಸ್ಪಾ ಪ್ರಕರಣದ ಹಳೆದೊಂದು ಸಂಗತಿ ರಿವೈಲ್; ಸ್ಪಾ ಮಾಲೀಕನ ಮೇಲಿದೆ ಅತ್ಯಾಚಾರ ಕೇಸ್

ಒತ್ತಡ ಜಾಸ್ತಿ ಆದಾಗ ಮೈಸೂರಿನ ವರುಣಾ ಪೊಲೀಸ್ ಠಾಣೆಯಲ್ಲಿ 2023 ರ ಜೂನ್ ನಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲಕಾಲ ಹುಡುಕಾಟ ನಡೆಸಿ ಕೊನೆಗೂ ಇಬ್ಬರನ್ನೂ ತಮ್ಮ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿತ್ತು. ಅಂದಹಾಗೆ ಮೊದಲಿಗೆ ನಾಪತ್ತೆ ಪ್ರಕರಣ ಮೈಸೂರಿನ ವರುಣಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಆನಂತರ ಕೊಲೆ ರಹಸ್ಯ ಬೆಳಕಿಗೆ ಬಂದಿತ್ತು.

ಆದರೆ ಕೊಲೆ ನಡೆದ ಸ್ಥಳ ಹಾಗೂ ಮಣ್ಣು ಮಾಡಿದ ಸ್ಥಳ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಕವಾಡಿ ಗ್ರಾಮವಾಗಿದ್ದರಿಂದ ಇಂದು ಸ್ಮಶಾನದಿಂದ ತಹಶೀಲ್ದಾರ್ ಸಮ್ಮುಖದಲ್ಲಿ ಹೊರ ತೆಗೆಯುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದರು. ಇಡೀ ಪ್ರಕರಣ ಇದೀಗ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರಿಗೆ ವರ್ಗಾವಣೆ ಆಗಿದೆ. ಈ ನಿಟ್ಟಿನಲ್ಲಿ ಮೊನ್ನೆ ಶನಿವಾರ ಆರೋಪಿ ದೇವರಾಜ್ ತೋರಿಸಿದ ಜಾಗದಲ್ಲಿ ಮೃತದೇಹ ತೆಗೆಯಲು ಮುಂದಾದಾಗ ಮೃತದೇಹ ಸಿಗಲಿಲ್ಲ. ಹೀಗಾಗಿ ಮತ್ತೊಮ್ಮೆ ಬೇರೊಂದು ಜಾಗದಲ್ಲಿ ಮೃತದೇಹ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಒಟ್ಟಾರೆ ಹೆತ್ತ ತಾಯಿಯನ್ನೇ ಕ್ಷುಲ್ಲಕ ಕಾರಣಕ್ಕೆ ಕೊಲೆಗೈದಿದ್ದ ಮಗಳು ಹಾಗೂ ಆಕೆಯ ಗಂಡನನ್ನ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ