ಸ್ಪಾ ಸೆಂಟರ್ ಮೇಲೆ ಸಿಸಿಬಿ ದಾಳಿ ಪ್ರಕರಣ: ಸ್ಪಾ ಮಾಲೀಕನ ವಿರುದ್ಧ ಹಳೆಯ ಅತ್ಯಾಚಾರ ಪ್ರಕರಣ ಬಯಲು
ಸಿಸಿಬಿ ದಾಳಿ ಬಳಿಕ ಇತ್ತೀಚೆಗೆ ನಿರ್ವಾಣ ಇಂಟರ್ ನ್ಯಾಷನಲ್ ಸ್ಪಾ ಸೆಂಟರ್ನಲ್ಲಿ ನಡೆದ ಹಳೆಯದೊಂದು ಸಂಗತಿ ಬಯಲಾಗಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಸ್ಪಾ ಮಾಲೀಕನ ವಿರುದ್ಧ ಅತ್ಯಾಚಾರ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಇದೇ ಸ್ಪಾನಲ್ಲಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು.

ಬೆಂಗಳೂರು, ಜ.08: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಓಲ್ಡ್ ಮದ್ರಾಸ್ ರಸ್ತೆಯಲ್ಲಿರೋ ನಿರ್ವಾಣ ಇಂಟರ್ ನ್ಯಾಷನಲ್ ಸ್ಪಾ ಸೆಂಟರ್ (Nirvana International Spa) ಮೇಲೆ ದಾಳಿ ನಡೆಸಿ ಮಹಿಳೆಯರನ್ನು ರಕ್ಷಿಸಲಾಗಿತ್ತು. ಈ ಪ್ರಕರಣ ಸಂಬಂಧ ಸಿಸಿಬಿ (CCB) ದಾಳಿ ಬಳಿಕ ಇತ್ತೀಚೆಗೆ ಸ್ಪಾದಲ್ಲಿ ನಡೆದ ಹಳೆಯದೊಂದು ಸಂಗತಿ ಬಯಲಾಗಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಸ್ಪಾ ಮಾಲೀಕನ ವಿರುದ್ಧ ಅತ್ಯಾಚಾರ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಇದೇ ಸ್ಪಾನಲ್ಲಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಅತ್ಯಾಚಾರ ಪ್ರಕರಣದಲ್ಲಿ ತನಿಖೆ ಮಾಡಿದಾಗ ಅದು ಸ್ಪಾ ಸೆಂಟರ್ ರೀತಿಯೇ ಬಿಂಬಿಸಲಾಗಿತ್ತು. ಹೀಗಾಗಿ ಮಾಂಸದಂಧೆ ಪತ್ತೆಯಾಗಿರಲಿಲ್ಲ. ಇನ್ನು ಶಾಕಿಂಗ್ ಎಂದರೆ ನಿರ್ವಾಣ ಇಂಟರ್ ನ್ಯಾಷನಲ್ ಸ್ಪಾನಲ್ಲಿ ನಾಲ್ಕು ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ದೂರುದಾರ ಮಹಿಳೆ, ಮಧ್ಯ ಪ್ರದೇಶ ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋಪಿ. ಮಧ್ಯಪ್ರದೇಶ ಎಸ್ಐಟಿ ಸಹ ಆಕೆಯ ಬಂಧನ ಮಾಡಿತ್ತು. ಆದಾದ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿದ್ದ ಆ ಮಹಿಳೆ ಇದೇ ನಿರ್ವಾಣ ಸ್ಪಾ ಸೆಂಟರ್ನಲ್ಲಿ ಕೆಲಸ ಮಾಡುವಾಗ ಕಳ್ಳತನ ಆರೋಪದಲ್ಲಿ ಆಕೆಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನ ಮಸಾಜ್ ಪಾರ್ಲರ್ನಲ್ಲಿ ವೇಶ್ಯಾವಾಟಿಕೆ; 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ
ಇದಾದ ಬಳಿಕ ಜೈಲಿನಿಂದ ಹೊರಬಂದು ಮಾಲೀಕ ಅನಿಲ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದರು. ಗ್ಯಾಂಗ್ ರೇಪ್ ಮಾಡಿರುವುದಾಗಿ ದೂರು ನೀಡಿದ್ದರು. ಮಹಿಳೆ ದೂರು ಆದರಿಸಿ ಸ್ಪಾ ಮಾಲೀಕನ ಮೇಲೆ ಅತ್ಯಾಚಾರ ಜೊತೆ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ವೈಟ್ ಫೀಲ್ಡ್ ಎಸಿಪಿ ನೇತೃತ್ವದ ಪೊಲೀಸರು ಸ್ಪಾಗೆ ಹೋಗಿ ಮಹಜರು ಮಾಡಿದ್ದರು. ಸಿಸಿಟಿವಿ ಪರಿಶೀಲನೆ, ಅಲ್ಲಿಯ ಸಿಬಂದಿ ಹೇಳಿಕೆ ಸೇರಿ ಸ್ಥಳ ಮಹಜರು ನಡೆಸಿದ್ದರು. ತನಿಖೆಯ ನಂತರ ಯಾವುದೇ ದಂಧೆ ಅಥವಾ ಅತ್ಯಾಚಾರ ನಡೆದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದಾದ ಬಳಿಕ ವೇಶ್ಯವಾಟಿಕೆ ಅಡ್ಡೆ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿದ್ದು ಈ ಸಂಬಂಧ ಸಿಸಿಬಿ ಸಾಕ್ಷಿ ಸಂಗ್ರಹ ಮಾಡಿ ಸಾಕ್ಷಿಗಳು ಲಭ್ಯವಾದ ಬೆನ್ನಲ್ಲೇ ದಾಳಿ ನಡೆಸಿ ಅಕ್ರಮ ಬಯಲು ಮಾಡಿದೆ.
ನಿರ್ವಾಣ ಸ್ಪಾ ಬಗ್ಗೆ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರು ಮಾರತ್ ಹಳ್ಳಿ ಎಸಿಪಿ ಪ್ರಿಯದರ್ಶಿನಿಗೆ ಸೂಚನೆ ನೀಡಿದ್ದಾರೆ. ನಿರ್ವಾಣ ಸ್ಪಾ ಬಗ್ಗೆ ಸಂಪೂರ್ಣ ಮಾಹಿತಿ ಆಧರಿತ ವರದಿ ನೀಡುವಂತೆ ಸೂಚಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:42 am, Mon, 8 January 24