ಮುಡಾ ಹಗರಣ: ಲೋಕಾಯುಕ್ತಗೆ ಇಡಿ ಬರೆದ ಪತ್ರದಲ್ಲೇನಿದೆ? ಅದು ಸಿಎಂಗೆ ಹೇಗೆ ಸಂಕಷ್ಟ?

|

Updated on: Dec 04, 2024 | 6:56 PM

ಬೆಳಗಾವಿ ಅಧಿವೇಶನಕ್ಕೆ ಬೆರಳಣಿಕೆ ದಿನಗಳಷ್ಟೇ ಬಾಕಿ ಇರುವಾಗಲೇ ಜಾರಿ ನಿರ್ದೇಶನಲಯ(ಇಡಿ) ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಬಾಂಬ್ ಎಸೆದಿದೆ. ನೇರವಾಗಿ ಸಿಎಂ ಸಿದ್ದರಾಮಯ್ಯನವರನ್ನ ಗುರಿಯಾಗಿಸಿಕೊಂಡೇ ಎಸೆದಿರುವ ಲೆಟರ್ ಬಾಂಬ್ ರಾಜಕೀಯ ಚರ್ಚೆಯನ್ನ ಬೇರೆಡೆಗೆ ಶಿಫ್ಟ್ ಮಾಡಿದೆ. ಅಲ್ಲದೇ ಭಾರಿ ಚರ್ಚೆಗೆ ಕಾರಣವಾಗಿರುವ ಮುಡಾ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಂತಾಗಿದೆ. ಹಾಗಾದ್ರೆ, ಲೋಕಾಯುಕ್ತಕ್ಕೆ ಇಡಿ ಬರೆದ ಪತ್ರದಲ್ಲೇನಿದೆ? ಅದು ಹೇಗೆ ಸಿಎಂಗೆ ಸಂಕಷ್ಟವಾಗಬಹುದು.

ಮುಡಾ ಹಗರಣ: ಲೋಕಾಯುಕ್ತಗೆ ಇಡಿ ಬರೆದ ಪತ್ರದಲ್ಲೇನಿದೆ? ಅದು ಸಿಎಂಗೆ ಹೇಗೆ ಸಂಕಷ್ಟ?
ಇಡಿ, ಸಿದ್ದರಾಮಯ್ಯ
Follow us on

ಬೆಂಗಳೂರು, (ಡಿಸೆಂಬರ್ 04): ಮುಡಾ ಸೈಟ್ ಹಗರಣದ ತನಿಖೆ ನಡೆಸ್ತಿರುವ ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆದಿರುವ ಜಾರಿ ನಿರ್ದೇಶನಲಾಯ, ಮುಖ್ಯಮಂತ್ರಿ ಪತ್ನಿ ಪಾರ್ವತಿ ಅವರಿಗೆ ಹಂಚಿರುವ ಸೈಟ್​ಗಳೇ ಅಕ್ರಮವಾಗಿದ್ದು, ಈ ಸಂಬಂಧ ತಮ್ಮ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿವೆ. ಹಾಗೇ ಒಟ್ಟು ಮುಡಾ ವ್ಯಾಪ್ತಿಯಲ್ಲಿ ₹700 ಕೋಟಿ ಮೌಲ್ಯದ 1 ಸಾವಿರದ 95 ಸೈಟ್​ಗಳನ್ನ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಹಾಗೂ ಪ್ರಭಾವಿಗಳಿಗೆ ಅಕ್ರಮವಾಗಿ ಹಂಚಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು ಈ ಬಗ್ಗೆ ಕ್ರಮವಹಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಮನವಿ ಮಾಡಿದೆ. ಇಷ್ಟಕ್ಕೂ ಇಡಿ ಲೋಕಾಯುಕ್ತ ಪೊಲೀಸರಿಗೆ ಬರೆದಿರುವ ಪತ್ರದ ಸಾರಾಂಶದಲ್ಲಿ ಏನಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಲೋಕಾಯುಕ್ತಗೆ ಇಡಿ ಬರೆದ ಪತ್ರದ ಸಾರಾಂಶ 1

ಶ್ರೀಮತಿ ಬಿಎಂ ಪಾರ್ವತಿ ಅವರಿಗೆ ಹಂಚಿಕೆ ಮಾಡಲಾಗಿರುವ 14 ಸೈಟ್‌ಗಳನ್ನು ಸಂಸ್ಥೆಯ ಮಾರ್ಗಸೂಚಿ ಉಲ್ಲಂಘಿಸಿ, ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ, ಪ್ರಭಾವ ಬೀರಿರುವುದು ನಿಯಮಗಳನ್ನ ಉಲ್ಲಂಘಿಸಿರುವುದು, ಸಹಿ ನಕಲು ಮಾಡಿರುವುದು, ಸಾಕ್ಷಿಗಳನ್ನು ತಿದ್ದಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸಿದ್ದರಾಮಯ್ಯ ಮತ್ತು ಶ್ರೀಮತಿ ಬಿ ಎಂ ಪಾರ್ವತಿಯವರ ಪುತ್ರ ಡಾ. ಯತೀಂದ್ರರವರು ಮುಡಾ ಸದಸ್ಯರಾಗಿದ್ದ ಅವಧಿಯಲ್ಲೇ ಈ ಸೈಟ್‌ಗಳನ್ನು ಹಂಚಲಾಗಿದೆ. ಈ ಸಂದರ್ಭದಲ್ಲಿ, ಶ್ರೀ ಸಿದ್ದರಾಮಯ್ಯನವರು ಪ್ರತಿಪಕ್ಷ ನಾಯಕರಾಗಿದ್ದರು ಎಂಬುದು ಉಲ್ಲೇಖನೀಯ. ಈ ತನಿಖೆಯಿಂದ ಸ್ಪಷ್ಟವಾಗಿ ತಿಳಿದು ಬರುವುದು ಏನಂದರೆ, ಸಿದ್ದರಾಮಯ್ಯನವರ ಖಾಸಗಿ ಆಪ್ತ ಸಹಾಯಕರಾದ ಎಸ್‌ಟಿ ದಿನೇಶ್‌ಕುಮಾರ್‌ ಅಲಿಯಾಸ್‌ ಸಿಟಿ ಕುಮಾರ್‌ ಮುಡಾ ಕಚೇರಿ ಮೇಲೆ ಭಾರೀ ಪ್ರಭಾವ ಬೀರಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಸಹಿಯನ್ನು ನಕಲಿ ಮಾಡಿರುವುದರ ಜೊತೆಗೆ, ಶ್ರೀಮತಿ ಪಾರ್ವತಿಯವರ ಸೈಟ್‌ ಹಂಚಿಕೆಯಲ್ಲೂ ಪ್ರಭಾವ ಬೀರಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಮುಡಾ ಹಗರಣಕ್ಕೆ ಸಾಕ್ಷ್ಯ ನೀಡಿದ ಇಡಿ: ಸಿಎಂ ಸಿದ್ದರಾಮಯ್ಯಗೆ ಬಿಗಿಯಾದ ಉರುಳು

ಲೋಕಾಯುಕ್ತಗೆ ಇಡಿ ಬರೆದ ಪತ್ರದ ಸಾರಾಂಶ 2

ಕೆಸರೆ‌ ಗ್ರಾಮದ ಸರ್ವೆ ನಂಬರ್ 464 ರ, 3.16 ಎಕರೆ ಭೂಮಿಯನ್ನ ಆರಂಭದಲ್ಲಿ, ₹3,24,700 ರೂಪಾಯಿಗೆ ಮುಡಾ ಭೂಸ್ವಾಧಿನ ಪಡಿಸಿಕೊಂಡಿತ್ತು. ಇದೇ ಭೂಮಿಯನ್ನ ಅಕ್ರಮವಾಗಿ ಮತ್ತು ತಪ್ಪು ಮಾಹಿತಿ ಆಧರಿಸಿ ಡಿನೋಟಿಫಿಕೇಷನ್ ಮಾಡಲಾಗಿತ್ತು. ಬಳಿಕ ಮುಡಾ ಸಂಸ್ಥೆ ಇದೇ ಭೂಮಿಯಲ್ಲಿ ನಿವೇಶನ ಅಭಿವೃದ್ಧಿ ಪಡಿಸಿದ್ದರೂ ಇದೇ ಭೂಮಿಯನ್ನು ಕೃಷಿ ಭೂಮಿ ಹೆಸರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಮುಡಾ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ ಅಥವಾ ಪರಿಹಾರಕ್ಕೆ ಬೇಡಿಕೆ ಇಟ್ಟಿಲ್ಲ. ಬಳಿಕ, ತಪ್ಪು ಸ್ಥಳ ಪರಿಶೀಲನಾ ವರದಿ ಮತ್ತು ಮುಡಾ ಎನ್‌ಒಸಿ ಆಧರಿಸಿ, ಜಮೀನನ್ನು ಕೃಷಿ ಭೂಮಿಯಿಂದ ವಸತಿ ಯೋಗ್ಯ ಭೂಮಿಯಾಗಿ ಪರಿವರ್ತಿಸಲಾಗಿದೆ. ಪ್ರತಿಷ್ಟಿತ ಬಡಾವಣೆಯಲ್ಲಿ ಈ ಭೂಮಿಗೆ ಅಂದಾಜು ₹56 ಕೋಟಿ ಮೌಲ್ಯದ ಪರಿಹಾರವನ್ನು ಪ್ರಭಾವ ಬಳಸಿ ನೀಡಲಾಗಿದೆ. ಈ ಅಕ್ರಮವಾಗಿ ಪಡೆದ ಸೈಟ್‌ಗಳನ್ನು ಪರಿಹಾರವೆಂದು ಬಿಂಬಿಸಲಾಗಿದೆ. ಸಂಪೂರ್ಣ ಸೈಟ್‌ ಹಂಚಿಕೆ ಪ್ರಕ್ರಿಯೆ ಪ್ರಭಾವಕ್ಕೆ ಒಳಗಾಗಿದೆ.

ಲೋಕಾಯುಕ್ತಗೆ ಇಡಿ ಬರೆದ ಪತ್ರದ ಸಾರಾಂಶ 3

50:50 ನಿಯಮದಡಿ, ಮುಡಾ ನೀಡಿರುವ ಪರಿಹಾರ ಸೈಟ್‌ಗಳ ಹಂಚಿಕೆಯಲ್ಲಿ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಒಟ್ಟು 490 ಕೋಟಿ ಗೈಡ್‌ಲೈನ್‌ ದರ ಮತ್ತು 700 ಕೋಟಿಯಷ್ಟು ಮಾರುಕಟ್ಟೆ ದರವುಳ್ಳ 1,095 ಸೈಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಬಹುತೇಕ ಸೈಟ್‌ಗಳನ್ನು ಬೇನಾಮಿ ವ್ಯಕ್ತಿಗಳಿಗೆ ಮತ್ತು ನಕಲಿ ವ್ಯಕ್ತಿಗಳಿಗೆ ಭೂ ವಂಚಿತರ ಹೆಸರಲ್ಲಿ ಅಕ್ರಮವಾಗಿ ಹಂಚಲಾಗಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಈ ಅಕ್ರಮ ಸೈಟ್‌ ಹಂಚಿಕೆಯ ಫಲಾನುಭವಿಗಳಾಗಿದ್ದಾರೆ. ಮುಡಾದ ಹಿಂದಿನ ಆಯುಕ್ತ, ಜಿಟಿ ದಿನೇಶ್‌ ಕುಮಾರ್‌ ಮತ್ತು ಇತರರು ಹಣಕ್ಕಾಗಿ ಆಸ್ತಿಗಾಗಿ ಮತ್ತು ವಾಹನಗಳಿಗಾಗಿ ಅಕ್ರಮ ಸೈಟ್‌ ಹಂಚಿಕೆ ಮಾಡಿದ್ದಾರೆ. ಈ ರೀತಿ ಅಕ್ರಮ ಎಸಗಿದ ಸೈಟ್‌ಗಳನ್ನು ಮಾರಿ ಬಂದಿರುವ ಹಣವನ್ನು, ಕಮಿಷನ್‌ ಅಥವಾ ಲಾಭ ಎಂದು ತೋರಿಸಿ ಶುದ್ಧವಾದ ಹಣ ಎಂದು ಬಿಂಬಿಸಲಾಗುತ್ತಿದೆ. ಅಥವಾ ಈ ಮೂಲಕ ಪಡೆದ ಹಣವನ್ನು ಸಂಬಂಧಿಕರು ಅಥವಾ ಬೇನಾಮಿ ಹೆಸರಿನಲ್ಲಿ ಕೂಡಿ ಇಡಲಾಗಿದೆ.

ಹೀಗೆಂದು ಇಡಿ ಪತ್ರ ಬರೆದಿದ್ದರೆ, ಇನ್ನೊಂದೆಡೆ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಪತ್ರದ ಟೈಮಿಂಗ್ ಅನ್ನ ಪ್ರಶ್ನಿಸಿದ್ದು, ED ರಾಜಕೀಯ ಪ್ರೇರಿತವಾಗಿ ಪತ್ರ ಬರೆದು, ಲೋಕಾಯುಕ್ತ ತನಿಖೆ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಪತ್ರ ಸಿಎಂಗೆ ಹೇಗೆ ಸಂಕಷ್ಟವಾಗಬಹುದು?

ಅತ್ತ ಸಿದ್ದರಾಮಯ್ಯ ಇಡಿ ನಡೆಯನ್ನ ಪ್ರಶ್ನಿಸುತ್ತಿದ್ದರೆ, .ಪಿಎಂಎಲ್ಎ ಕಾಯ್ದೆ ಸೆಕ್ಷನ್ 66(2) ಅಡಿ ಇಡಿಗೆ ಮಾಹಿತಿ ಹಂಚಿಕೆೊಳ್ಳುವ ಕಾನೂನಾತ್ಮಕ ಅಧಿಕಾರವಿದೆ. ತನಿಖೆ ವೇಳೆ ಇತರೆ ಕಾಯ್ದೆಗಳ ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳೊಂದಿಗೆ ಇಡಿ ಮಾಹಿತಿ ಹಂಚಿಕೊಳ್ಳಬಹುದು. ಹೀಗಾಗಿ ಮುಡಾ ಪ್ರಕರಣದ ಮಾಹಿತಿಯನ್ನ ಲೋಕಾಯುಕ್ತ ಬಳಿ ಹಂಚಿಕೊಂಡಿದೆ. ನಾಳೆ (ಡಿಸೆಂಬರ್ 05) ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಡಿಗೆ ಸಂಬಂಧಿಸಿದ ವಿಚಾರಣೆ ಇಲ್ಲ. ಇಷ್ಟಾದ್ರೂ ಇಡಿಯ ಪತ್ರವನ್ನೂ ಸಿಎಂ ಪರ ವಕೀಲರು ಪ್ರಸ್ತಾಪಿಸಬಹುದು. ಇಡಿ ನಡೆ ರಾಜಕೀಯ ಪ್ರೇರಿತವೆಂದು ಹೈಕೋರ್ಟ್ ನಲ್ಲಿ ಪ್ರಸ್ತಾಪಿಸಬಹುದು.

ಹಿಂದಿನ ಭೂಮಾಲೀಕ ದೇವರಾಜು ಕೂಡಾ ಮೇಲ್ಮನವಿ ಸಲ್ಲಿಸಿದ್ದು, ಅವರ ಪರ ವಕೀಲರೂ ಇಡಿ ಬರೆದಿರುವ ಪತ್ರವನ್ನು ಪ್ರಸ್ತಾಪಿಸಬಹುದು. ಆದರೆ ನಾಳಿನ ವಿಚಾರಣೆ ಮುಖ್ಯವಾಗಿ ರಾಜ್ಯಪಾಲರ ಕ್ರಮವನ್ನೇ ಆಧರಿಸಿರುತ್ತದೆ. ರಾಜ್ಯಪಾಲರು ಅನುಮತಿ ನೀಡಿದ್ದು ಸೂಕ್ತವೇ, ಅಲ್ಲವೇ ಎಂಬ ಬಗ್ಗೆ ವಾದಮಂಡನೆಯಾಗುವ ನಿರೀಕ್ಷೆ ಇದೆ. ಹೀಗಾಗಿ ನಾಳಿನ ವಿಚಾರಣೆ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ.ಆದರೆ ಸ್ನೇಹಮಯಿ ಕೃಷ್ಣ ಸಿಬಿಐ ತನಿಖೆ ಕೋರಿ ಸಲ್ಲಿಸುವ ಅರ್ಜಿ ವಿಚಾರಣೆ ವೇಳೆ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಆಗ ಇಡಿ ಪತ್ರ ಖಂಡಿತ ಮಹತ್ವ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಇಡಿ ಬರೆದಿರುವ ಪತ್ರದಿಂದ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ