ಎರಡು ಏಜೆನ್ಸಿಗಳು ಏಕಕಾಲದಲ್ಲಿ ತನಿಖೆ ಮಾಡಲು ಕಾನೂನಿನಲ್ಲಿ ಇಲ್ಲ: ಇಡಿ ವಿರುದ್ಧ ಕಾಂಗ್ರೆಸ್ ಕೆಂಡ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಮೇಲ್ವಿಚಾರಣೆ ನಾಳೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಈ ಮಧ್ಯೆ ಮುಡಾ ಪ್ರಕರಣದ ವಿಚಾರವಾಗಿ ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿದ್ದು, ಸಿದ್ದರಾಮಯ್ಯ ಪ್ರಭಾವವಿದೆ ಎಂದಿದೆ. ಸದ್ಯ ಕಾಂಗ್ರೆಸ್ ನಾಯಕರು ಇಡಿ ಕ್ರಮಕ್ಕೆ ಆಕ್ಷೇಪಿಸಿದ್ದು, ಇಡಿ ಕೇಂದ್ರ ಸರ್ಕಾರದ ಒತ್ತಡದಲ್ಲಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 04: ಮುಡಾ ಹಗರಣಕ್ಕೆ (muda scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಮೇಲ್ವಿಚಾರಣೆ ನಾಳೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಇದಕ್ಕೂ ಮುನ್ನವೇ ಇಡಿ, ಮುಡಾದಲ್ಲಿ ಅವ್ಯವಹಾರ ನಡೆದಿದ್ದು, ಇದರಲ್ಲಿ ಸಿಎಂ ಪ್ರಭಾವ ಇದೆ ಎಂದು ಲೋಕಾಯುಕ್ತಗೆ ಪತ್ರ ಬರೆದಿದೆ. ಇಡಿ ನಡೆಗೆ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡಿದ್ದಾರೆ.
ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಜಂಟಿ ಸುದ್ದಿಗೋಷ್ಠಿ ಮಾಡಿದ್ದಾರೆ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪಾರದರ್ಶಕ ತನಿಖೆ ಮುಂದುವರಿಸಿದ್ದಾರೆ. ಇಲ್ಲಿಯವರೆಗೂ ಕೋರ್ಟ್ಗೆ ಯಾವುದೇ ತನಿಖಾ ವರದಿ ಸಲ್ಲಿಕೆ ಮಾಡಿಲ್ಲ. ಈ ಸಂದರ್ಭದಲ್ಲಿ ಇಡಿ ಲೋಕಾಯುಕ್ತಕ್ಕೆ ಪತ್ರದ ಮೂಲಕ ಅನೇಕ ವಿಷಯ ಪ್ರಸ್ತಾಪ ಮಾಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣಕ್ಕೆ ಸಾಕ್ಷ್ಯ ನೀಡಿದ ಇಡಿ: ಸಿಎಂ ಸಿದ್ದರಾಮಯ್ಯಗೆ ಬಿಗಿಯಾದ ಉರುಳು
ಅವರು ತನಿಖೆ ಮಾಡಿರುವ ವಿಚಾರಗಳನ್ನೂ ಲೋಕಾಯುಕ್ತದವರಿಗೆ ಪ್ರಸ್ತಾಪ ಮಾಡಿದ್ದಾರೆ. ಒಂದೇ ವಿಷಯದ ಬಗ್ಗೆ ಎರಡು ಏಜೆನ್ಸಿಗಳು ಏಕಕಾಲದಲ್ಲಿ ತನಿಖೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇಡಿಯವರು ಪತ್ರದಲ್ಲಿ ಕೆಲವು ವಿಷಯಗಳನ್ನು ಅಂತಿಮ ನಿರ್ಧಾರದಂತೆ ಹೇಳಿದ್ದಾರೆ. ಎಲ್ಲೋ ಒಂದು ಕಡೆ ಇಡಿ ಲೋಕಾಯುಕ್ತದ ಮೇಲೆ ಪ್ರಭಾವ ಬೀರುತ್ತಿದ್ದೀರಾ? ಇಡಿ ಲೋಕಾಯುಕ್ತಕ್ಕೆ ಇಂತಹದ್ದೇ ರೀತಿ ತನಿಖೆ ಮಾಡಿ ಅಂತಾ ನಿರ್ದೇಶನ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಏನೇ ತಿಪ್ಪರಲಾಗ ಹಾಕಿದ್ರೂ 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಪ್ರಿಯಾಂಕ್ ಖರ್ಗೆ
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಿಜೆಪಿಯವರ ಹಗರಣಗಳನ್ನು ಮುಚ್ಚಿ ಹಾಕಲು ಪತ್ರ ಸೋರಿಕೆ ಮಾಡಲಾಗಿದೆ. ಇವರು ದೆಹಲಿಗೆ ಹೋಗಿದ್ದು ಭಿನ್ನಮತ ಸೆಟಲ್ ಮಾಡಲು ಅಲ್ಲ, ಹೈಕಮಾಂಡ್ ಕೈಕಾಲು ಹಿಡಿದು ಈ ಪತ್ರ ಲೀಕ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಡಿ ಪತ್ರವನ್ನು ನಾವು ಒಪ್ಪುವುದಿಲ್ಲ. ಈ ಪತ್ರದ ಬಗ್ಗೆಯೂ ಒಂದು ತನಿಖೆ ಆಗಬೇಕು. ಏನೇ ತಿಪ್ಪರಲಾಗ ಹಾಕಿದ್ರೂ 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಕಿಡಿಕಾರಿದ್ದಾರೆ.
ಇಡಿ, ಸಿಬಿಐ, ಐಟಿ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಬಿಜೆಪಿ ದುರ್ಬಲ ಇರುವ ರಾಜ್ಯಗಳಲ್ಲಿ ಸಿಬಿಐ, ಐಟಿ, ಇಡಿ ಅಧಿಕಾರಿಗಳನ್ನು ಛೂ ಬಿಡುತ್ತಾರೆ. ರಾಜ್ಯಪಾಲರ ಕಚೇರಿಯನ್ನೂ ದುರ್ಬಳಕೆ ಮಾಡಿದ್ದಾರೆ. ED ಕೇಂದ್ರ ಸರ್ಕಾರದ ಪೊಲಿಟಿಕಲ್ ಟೂಲ್. ED ಹಣದ ವ್ಯವಹಾರದ ಬಗ್ಗೆ ಮಾತ್ರ ತನಿಖೆ ಮಾಡುತ್ತೆ, ಆದರೆ ಮುಡಾ ಕೇಸ್ನಲ್ಲಿ ಲೋಕಾಯುಕ್ತ FIR ಅದ ಮರುದಿನವೇ ಇಸಿಐಆರ್ ದಾಖಲಿಸಿದೆ. ಬಿಜೆಪಿಯೇತರ ಆಡಳಿತವಿರುವ ಕಡೆ ಮಾತ್ರ ಈ ರೀತಿ ಮಾಡುತ್ತಾರೆ ಎಂದಿದ್ದಾರೆ.
ಲೋಕಾಯುಕ್ತ ಜಾರಿ ನಿರ್ದೇಶನಾಲಯದ ಸಹಾಯ ಕೇಳಿಲ್ಲ. ಸೈಟ್ ಹಿಂದಿರುಗಿಸಿರುವ ಕಾರಣ ಇಡಿ ವ್ಯಾಪ್ತಿಗೆ ಕೇಸ್ ಇಲ್ಲ. ಅದಕ್ಕೆ ಇಂತಹ ಪತ್ರಗಳನ್ನ ಅವರು ಸೋರಿಕೆ ಮಾಡ್ತಿದ್ದಾರೆ. ಲೋಕಾಯುಕ್ತಕ್ಕೆ ತನಿಖೆ ಬಗ್ಗೆ ನಿರ್ದೇಶನ ಮಾಡುತ್ತಿದ್ದಾರೆ. ಇಡಿಯವರೇ ಪತ್ರ ಸೋರಿಕೆ ಮಾಡಿದ್ದಾರೆ. ಇಡಿ ತನಿಖೆ ಆಂತರಿಕವಾಗಿ ಮಾಡಬೇಕಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಮುಡಾ ಪ್ರಕರಣಕ್ಕೂ ಇಡಿ ಮಾಡ್ತಿರುವ ತನಿಖೆಗೂ ಸಂಬಂಧ ಇಲ್ಲ: ಎ.ಎಸ್.ಪೊನ್ನಣ್ಣ
ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿಕೆ ನೀಡಿದ್ದು, ಮುಡಾ ಪ್ರಕರಣದಲ್ಲಿ ಇಡಿ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದೆ. ಸತ್ಯ ಹೊರಹಾಕಲು ಇಡಿ ತನಿಖೆ ಮಾಡ್ತಿಲ್ಲ. ಬಿಜೆಪಿ, ಜೆಡಿಎಸ್ಗೆ ಸಹಾಯವಾಗಲು ಇಡಿ ತನಿಖೆ ಮಾಡುತ್ತಿದ್ದಾರೆ. ಮುಡಾ ಪ್ರಕರಣಕ್ಕೂ ಇಡಿ ಮಾಡ್ತಿರುವ ತನಿಖೆಗೂ ಸಂಬಂಧ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿರುವ ಅರ್ಜಿ ವಿಚಾರಣೆಗೆ ಬರುತ್ತದೆ. ನ್ಯಾಯಾಧೀಶರ ಮೇಲೆ ಪ್ರಭಾವ ಬೀರುವ ರೀತಿ ಇಡಿಯವರು ಮಾಡ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಪೂರ್ವಾಗ್ರಹಪೀಡಿತರಾಗಿ ನಡೆದುಕೊಳ್ಳುತ್ತಿದ್ದಾರೆ. ಲೋಕಾಯುಕ್ತಕ್ಕೆ ಇಡಿ ಮಾಹಿತಿ ಕೊಡುವ ಪ್ರಶ್ನೆಯೇ ಉದ್ಭವಿಸಲ್ಲ. ಇಡಿ ಮಾಹಿತಿ ನೋಡಿದರೆ ಅದು ಆತಂಕಕಾರಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಮಹತ್ವದ ಬೆಳವಣಿಗೆ; ರಾತ್ರೋರಾತ್ರಿ 48 ಸೈಟ್ಗಳು ರದ್ದು
ಸೈಟ್ ಹಿಂದಿರುಗಿಸಲಾಗಿದೆ ಎಂದು ಎಲ್ಲೂ ಉಲ್ಲೇಖ ಮಾಡುವುದಿಲ್ಲ. ಸಿಎಂ ಪತ್ನಿ ಪಾರ್ವತಿ ಬಳಿ ಇಂದು ಜಮೀನೂ ಇಲ್ಲ, ಸೈಟ್ ಕೂಡಾ ಇಲ್ಲ. ಹೀಗಿರುವಾಗ ಇಡಿ ಏನು ತನಿಖೆ ಮಾಡುತ್ತೆ? ಲೋಕಾಯುಕ್ತ ಸಂಸ್ಥೆ ತನಿಖಾ ಪಾವಿತ್ರ್ಯತೆಯನ್ನು ಇಡಿ ಹಾಳುಮಾಡಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.