ಕೊನೆಗೂ ಕಾರ್ಯಾರಂಭ ಮಾಡಿದ ಮುಡಾ: ಬಿಟ್ ಆಫ್ ಲ್ಯಾಂಡ್ ಮಾರಾಟ ಹಾಗೂ ಮಂಜೂರಾತಿಗೆ ಆದೇಶ
ಮೈಸೂರು ಮುಡಾ ಹಗರಣದ ನಂತರ, ಭೂಮಿ ಮಾರಾಟ ಮತ್ತು ಮಂಜೂರಾತಿಗೆ ಸಂಬಂಧಿಸಿದ ಕಾರ್ಯಗಳು ಪುನರಾರಂಭಗೊಂಡಿವೆ. ಮೂಲಕ ಜನರಿಗೆ ರಿಲೀಫ್ ಸಿಕ್ಕಿದ್ದು, ಖಾತೆ ಕಂದಾಯ ಸೇರಿದಂತೆ ಎಲ್ಲಾ ಕಾರ್ಯಗಳು ಈಗ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯಲಿವೆ. ಮುಡಾ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಮೈಸೂರು, ನವೆಂಬರ್ 30: ಮುಡಾ (muda) ಹಗರಣ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸುದ್ದು ಮಾಡಿದೆ. ಇದೇ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಸೇರಿದಂತೆ ಕುಟುಂಬದ ಮೇಲೆ ಆರೋಪ ಮಾಡಲಾಗಿದೆ. ಸದ್ಯ ತನಿಖೆ ಚುರುಕೊಂಡಿದೆ. ಈ ಮಧ್ಯೆ ಕೊನೆಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾರಂಭ ಮಾಡಿದ್ದು, ಬಿಟ್ ಆಫ್ ಲ್ಯಾಂಡ್ ಮಾರಾಟ ಹಾಗೂ ಮಂಜೂರಾತಿಗೆ ಕಾರ್ಯದರ್ಶಿ ಪ್ರಸನ್ನಕುಮಾರ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಪ್ರಾಧಿಕಾರದಿಂದ ರಚಿಸಲಾದ ಬಡಾವಣೆಗಳಲ್ಲಿ ತುಂಡು ಭೂಮಿ ಅಥವಾ ಉಳಿದಿರುವ ಭೂಮಿ ವಿಲೇವಾರಿ ಮಾಡುವ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ. ತಮ್ಮ ನಿವೇಶನ, ಮನೆಗಳಿಗೆ ಹೊಂದಿಕೊಂಡಂತೆ ತುಂಡು ಜಾಗ ಲಭ್ಯವಿದ್ದಲ್ಲಿ ಅಂತಹ ತುಂಡು ಜಾಗವನ್ನು ಮಂಜೂರು ಮಾಡುವ ಸಂಬಂಧ ಆದೇಶಿಸಲಾಗಿದೆ. ಈ ಪ್ರಕಟಣೆ ಹೊರಡಿಸಿದ 15 ದಿನದಲ್ಲಿ ಮೂಡಾಗೆ ಅರ್ಜಿ ಸಲ್ಲಿಸಬೇಕು. ನಂತರ ಸರ್ಕಾರದ ಮಾರ್ಗಸೂಚಿಯಂತೆ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು.
ಇದನ್ನೂ ಓದಿ: ಮುಡಾ ಹಗರಣ ನಡುವೆಯೇ 300 ಹೊಸ ಖಾಸಗಿ ಲೇಔಟ್ಗಳಿಗೆ ಅನುಮತಿ: ಶಾಸಕ ಶ್ರೀವತ್ಸ ಹೇಳಿದ್ದಿಷ್ಟು
ಇನ್ನು ಇತ್ತೀಚೆಗೆ ಮುಡಾದಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಆಗದೆ ಪರದಾಡುತ್ತಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಿತ್ತು. ಹಗರಣದಿಂದಾಗಿ ಸಾರ್ವಜನಿಕರ ಕೆಲಸವನ್ನ ಸಂಪೂರ್ಣವಾಗಿ ನಿಲ್ಲಿಸಿದ್ದ ಮುಡಾದಿಂದ ಆ ಕೆಲಸವನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಇನ್ನು ಮುಡಾದಲ್ಲಿ ಆಗುತ್ತಿದ್ದ ಖಾತೆ ಕಂದಾಯ ಎಲ್ಲವೂ ಸ್ಥಳೀಯ ಸಂಸ್ಥೆಗಳಲ್ಲಿ ಆಗಲಿದೆ.
ಖಾತೆ ಕಂದಾಯ ಸೇರಿದಂತೆ ಯಾವುದೇ ಕೆಲಸಗಳು ಆಗುತ್ತಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಮುಡಾದ ಕೆಲಸವನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: ಹಗರಣ: ಮುಡಾ ಸೇವೆಗಳು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿ ಡಿಸಿ ಆದೇಶ
ಜಿಲ್ಲಾಧಿಕಾರಿಗಳು ಖಾತೆ ಕಂದಾಯ ಮಾಡುವ ಜವಾಬ್ದಾರಿಯನ್ನು ಮೈಸೂರು ಮಹಾನಗರ ಪಾಲಿಕೆ ನಗರ ಸಭೆ ಪುರಸಭೆ ಪಂಚಾಯ್ತಿಗಳಿಗೆ ಹಸ್ತಾಂತರಿಸುವಂತೆ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆದಿದ್ದು ಹಸ್ತಾಂತರದ ಮಾಹಿತಿಗಳನ್ನೊಳಗಿಂಡ ಪಟ್ಟಿ ಟಿವಿ9 ಗೆ ಲಭ್ಯವಾಗಿತ್ತು.
ಇನ್ನು ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಮಾಡಲಾಗಿದೆ. ಮುಡಾ ಪ್ರಭಾರ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ಮಾಡಲಾಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಭಾಗಿಯಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.