ಬೆಂಗಳೂರು, ಜುಲೈ 26: 2013ರ ಅಫಿಡವಿಟ್ನಲ್ಲಿ ಮೈಸೂರಿನ ಕೆಸರೆ ಆಸ್ತಿ (ಮುಡಾ ಹಗರಣದಲ್ಲಿ ಪ್ರತಿಪಕ್ಷಗಳು ಆರೋಪ ಮಾಡುತ್ತಿರುವ ಆಸ್ತಿ) ವಿವರ ಸಲ್ಲಿಕೆ ಮಾಡಿಲ್ಲ. ನನ್ನ ಕಣ್ಣು ತಪ್ಪಿನಿಂದ ಆ ಆಸ್ತಿ ವಿವರವನ್ನು ಸಲ್ಲಿಕೆ ಮಾಡಿರಲಿಲ್ಲ. ಆದರೆ ಲೋಕಾಯುಕ್ತಕ್ಕೆ ಆ ಆಸ್ತಿಯ ಕುರಿತಾದ ವಿವರವನ್ನು ಸಲ್ಲಿಕೆ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜನರ ಮನಸ್ಸಿನಲ್ಲಿ ಅನುಮಾನ ಬರಬಾರದು ಈ ವಿಚಾರ ಸ್ಪಷ್ಟಪಡಿಸುತ್ತಿದ್ದೇನೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಮ್ಮ ಜಮೀನನ್ನು ಮುಡಾ ಅಕ್ರಮವಾಗಿ ಬಳಸಿಕೊಂಡಿದ್ದೇ ತಪ್ಪು. ವಿಜಯನಗರ ಬಡಾವಣೆಯಲ್ಲಿ 125 ಸೈಟ್ಗಳನ್ನು ಹಂಚಿದ್ದಾರೆ. ಅದರಲ್ಲಿ ನಮಗೂ ನಿವೇಶನ ಕೊಟ್ಟಿದ್ದಾರೆ ಅಷ್ಟೇ ಎಂದರು.
ನನ್ನದಾಗಲಿ, ನನ್ನ ಪತ್ನಿಯದಾಗಲಿ, ಬಾಮೈದನ ಪಾತ್ರ ಇದೆಯಾ? 2014ರಲ್ಲಿ ನನ್ನ ಬಾಮೈದ ಜಮೀನು ಖರೀದಿ ಮಾಡಿರುವುದು. ಸಂಪೂರ್ಣವಾಗಿ ಕಾನೂನು ಪ್ರಕಾರ ಸೈಟ್ ಹಂಚಿಕೆ ಮಾಡಿದ್ದಾರೆ. ಆದರೆ, ಅಪ ಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ನಾನು ಎರಡನೇ ಬಾರಿಗೆ ಸಿಎಂ ಆಗಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಿವೃತ್ತ ನ್ಯಾ. ದೇಸಾಯಿ ಅಧ್ಯಕ್ಷತೆಯಲ್ಲಿ ತನಿಖೆ ಮಾಡಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಜೆಡಿಎಸ್ ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ಮಾಡಿದ್ದಾರಂತೆ. ಬಜೆಟ್ನಲ್ಲಿ ಅನ್ಯಾಯ ಆಗಿದೆ ಅದಕ್ಕೆ ಪ್ರತಿಭಟನೆ ಮಾಡಿದ್ದೀರಾ? 25 ಸಂಸದರು ಇದ್ದಾಗ ಒಂದು ದಿನವೂ ಮಾತನಾಡಲಿಲ್ಲ. ಈ ವಿಚಾರ ಪ್ರಸ್ತಾಪ ಮಾಡುವ ಎಂಪಿಗಳು ಕರ್ನಾಟಕಕ್ಕೆ ಅನ್ಯಾಯ ಆಗಿದ್ದನ್ನು ಪ್ರಶ್ನೆ ಮಾಡಲ್ಲ. ದಲಿತರಿಗೆ ಅನ್ಯಾಯ ಮಾಡಿದ್ದೇವೆ ಅಂತ ಬಿಂಬಿಸಲು ಈಗ ಸದ್ದು ಮಾಡುತ್ತಿದ್ದಾರೆ ಎಂದರು.
2014ರಲ್ಲಿ ರಲ್ಲಿ ನಾನು ಸಿಎಂ. ನನ್ನ ಹೆಂಡತಿ 2014ರಲ್ಲಿ ಮುಡಾಗೆ ಅರ್ಜಿ ಕೊಟ್ಟಿದ್ದೇನೆ ಎಂದು ಅಂತ ಗಮನಕ್ಕೆ ತಂದಿದ್ದಳು. ನಾನು ಆಗಲೇ ಹೇಳಿದ್ದೆ ನಾನು ಸಿಎಂ ಆದಾಗ ಅದನ್ನು ನನ್ನ ಹತ್ರ ತರಬೇಡ ಎಂದಿದ್ದ ಎಂದು ಸಿದ್ದರಾಮಯ್ಯ ಹೇಳಿದರು.
2017ರಲ್ಲಿ ರಲ್ಲಿ ಮುಡಾ ನಿರ್ಣಯ ಮಾಡುತ್ತದೆ. ಮುಡಾ ತಪ್ಪು ಮಾಡಿದೆ ಎಂಬುದನ್ನು ಅವರೇ ಹೇಳಿದ್ದಾರೆ. ಸುಂದರಮ್ಮ ಎಂಬುವವರ ಜಮೀನನ್ನು ಮುಡಾದವರೇ ಸ್ವಾಧೀನ ಮಾಡಿಕೊಂಡಿದ್ದರು. ಹೈಕೋರ್ಟ್ನಲ್ಲಿ ಸುಂದರಮ್ಮ ಪ್ರಕರಣ ದಾಖಲಿಸುತ್ತಾರೆ. ಸುಂದರಮ್ಮಗೆ 2 ಎಕರೆ ಜಮೀನು ನೀಡಬೇಕೆಂದು ಕೋರ್ಟ್ ಆದೇಶ ನೀಡಿತ್ತು. ಇದೇ ಮಾದರಿಯಲ್ಲಿ ನಾವು ಮುಡಾಗೆ ಜಮೀನು ಬದಲಿಗೆ ಜಮೀನು ಕೇಳಿದ್ದೇವೆ. 50:50ರ ಅನುಪಾತದಲ್ಲಿ ಜಮೀನು ಕೇಳಿದ್ದೆವು. ನಾವು ಎಲ್ಲಿಯೂ ಇಂಥದ್ದೇ ಜಾಗದಲ್ಲಿ ಜಮೀನು ಕೊಡಿ ಅಂತ ಕೇಳಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವರ್ಗಾಯಿಸುವಂತೆ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಡ
ಮುಡಾ ಕಮಿಟಿಯಲ್ಲಿ ಸೈಟು ನೀಡುವಾಗ ಯಾರೆಲ್ಲ ಇದ್ದರು ಗೊತ್ತೇ? ಬಿಜೆಪಿಯ ರಾಮದಾಸ್, ಜೆಡಿಎಸ್ನ ಜಿಟಿ ದೇವೇಗೌಡ, ನಾಗೇಂದ್ರ ಇವರೆಲ್ಲ ಶಾಸಕರಾಗಿದ್ದರು. ಮುಡಾ ನಿರ್ಣಯದ ಪ್ರಕಾರ 909 ಸೈಟುಗಳು 50:50ರ ಅನುಪಾತದಲ್ಲಿ ಅನುಪಾತದಲ್ಲಿ ಹಂಚಿಕೆ ಆಗಿವೆ. ಇಂಥ ಜಾಗದಲ್ಲೇ ಕೊಡಿ ಅಂತ ನಾವು ಕೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ