ಮುಡಾ ಅಕ್ರಮ: ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಹೇಳಿದ್ದಿಷ್ಟು

| Updated By: Ganapathi Sharma

Updated on: Jul 04, 2024 | 1:03 PM

ಮುಡಾ ಅಕ್ರಮಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸಿದ್ದರಾಮಯ್ಯ ಕಾನುನು ಸಲಹೆಗಾರ ಎಎಸ್ ಪೊನ್ನಣ್ಣ, ಮುಡಾ ಸೈಟ್ ಹಂಚಿಕೆ ವಿಚಾರವಾಗಿ ದಾಖಲೆಗಳ ಸಮೇತ ಮಾಹಿತಿಯನ್ನು ಮಾಧ್ಯಮಗಳ ಮುಂದಿಟ್ಟಿದ್ದಾರೆ. ಆ ವಿವರ ಇಲ್ಲಿದೆ.

ಮುಡಾ ಅಕ್ರಮ: ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಹೇಳಿದ್ದಿಷ್ಟು
ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಸ್ಪಷ್ಟನೆ
Follow us on

ಬೆಂಗಳೂರು, ಜುಲೈ 4: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯರ ಕಾನೂನು ಸಲಹೆಗಾರ, ಶಾಸಕ ಎಎಸ್ ಪೊನ್ನಣ್ಣ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ‌ ಎರಡು ಮೂರು ದಿನಗಳಿಂದ ಪ್ರತಿಪಕ್ಷಗಳು ಮುಡಾ ಹಗರಣ ವಿಚಾರ ಪ್ರಸ್ತಾಪ ಮಾಡುತ್ತಿವೆ. ಸಿಎಂ ಧರ್ಮಪತ್ನಿಗೆ ಪರಿಹಾರ ನೀಡಿದ ವಿಚಾರದಲ್ಲಿ ಹಗರಣ ದೊಡ್ಡದಾಗಿದೆ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಮುಖ್ಯವಾಗಿ ಇದೊಂದು ಹಗರಣ ಎಂದು ತೋರಿಸುವ ಪ್ರಯತ್ನ ಆಗುತ್ತಿದೆ. ಬಿಜೆಪಿಯವರು ದುರುದ್ದೇಶದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾಗರೀಕರು ಆಸ್ತಿ ಕಳೆದುಕೊಂಡಾಗ ಅದಕ್ಕೆ ಪರಿಹಾರ ಪಡೆಯುವುದು ಮೂಲಭೂತ ಹಕ್ಕು. ಅದು ಸಿಎಂ ಧರ್ಮಪತ್ನಿಯೇ ಆಗಲಿ ಯಾರೇ ಆಗಲಿ, ಅವರು ಕಳೆದುಕೊಂಡ ಆಸ್ತಿಗೆ ಪರಿಹಾರ ಪಡೆಯಬಹುದು ಎಂದು ಪೊನ್ನಣ್ಣ ಹೇಳಿದರು.

1998 ರಲ್ಲಿ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿತ್ತು. ನಿಂಗಣ್ಣ ಎನ್ನುವವರಿಗೆ ಆ ಜಮೀನು ಸೇರಿತ್ತು. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಸೇಲ್ ಡೀಡ್ ಆಗಿತ್ತು. ಮಲ್ಲಿಕಾರ್ಜುನ ಸ್ವಾಮಿ ಸಿಎಂ ಸಿದ್ದರಾಮಯ್ಯರ ಧರ್ಮ ಪತ್ನಿಯ ಸಹೋದರ. 2005ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅದನ್ನು ವ್ಯವಸಾಯೇತರ ಜಮೀನಾಗಿ ಪರಿವರ್ತಿಸಿದ್ದರು. 2010ರಲ್ಲಿ ದಾನ ಪತ್ರದ ಮೂಲಕ ಅವರ ಸಹೋದರಿ ಪಾರ್ವತಿಯವರಿಗೆ ವರ್ಗಾವಣೆ ಆಗಿತ್ತು ಎಂದು ಪೊನ್ನಣ್ಣ ಮಾಹಿತಿ ನೀಡಿದರು.

2010 ರಲ್ಲಿ ಪಾರ್ವತಿಯವರಿಗೆ ಸೇರಿದ್ದ ಜಮೀನನ್ನು ಮುಡಾದವರು ನಿವೇಶನಕ್ಕಾಗಿ ಬಳಸಿಕೊಂಡಿರುತ್ತಾರೆ. 2014ರಲ್ಲಿ ಈ ಬಗ್ಗೆ ಮುಡಾ ದವರಿಗೆ ಪಾರ್ವತಿಯವರು ಪತ್ರ ಬರೆದಿದ್ದಾರೆ. ಮುಡಾದವರು ತಮ್ಮ ಜಮೀನು ಬಳಸಿಕೊಂಡಿದ್ದಾರೆ, ಅದಕ್ಕೆ ಪರಿಹಾರ ನೀಡಿ ಎಂದು ಕೇಳಿದ್ದಾರೆ. ಹೀಗಾಗಿ ಇದು ಬದಲಿ ನಿವೇಶನ ಅಲ್ಲ, ಇದು ಪರಿಹಾರ ರೂಪದ ನಿವೇಶನ. ಪರಿಹಾರದ ರೂಪದಲ್ಲಿ ಕೊಡಬೇಕಾದ ಹಣದ ಬದಲು ನಿವೇಶನ ನೀಡಲಾಗಿದೆ. 1-11-2014ರಲ್ಲಿ 50:50 ನಿಯಮ ಪ್ರಕಾರವೂ ಪರಿಹಾರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಏನಿದು ಮುಡಾ ಪ್ರಕರಣ? ಸಿದ್ದರಾಮಯ್ಯ ಪತ್ನಿಗೆ ಸೈಟ್ ಸಿಕ್ಕಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

ಮುಡಾ ಅಕ್ರಮ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಬಿಜೆಪಿ ಎಂಎಲ್​​ಸಿ ಸಿಟಿ ರವಿ ಕೂಡ ಸಿಂಗೆ ಟಾಂಗ್ ನೀಡಿದ್ದು, ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೆ ಸಾಲದು, ಆಡಳಿತವೂ ಶುದ್ಧವಾಗಿರಬೇಕು ಎಂದು ಟೀಕಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ