AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಬುಡಕ್ಕೆ ಇಡಿ: ಸಿಎಂ ಪತ್ನಿ ಪಡೆದಿದ್ದ 14 ಸೈಟ್ ರಹಸ್ಯ ಕೆದಕಿದ ಅಧಿಕಾರಿಗಳು

ಕ್ಲೀನ್ ಇಮೇಜ್ ಖ್ಯಾತಿಯ ಸಿದ್ದರಾಮಯ್ಯ ಬಿಟ್ಟು ಬಿಡದಂತೆ ಕಪ್ಪು ಚುಕ್ಕೆಯಾಗಿ ಕಾಡುತ್ತಿರುವ ಮೂಡಾ ಹಗರಣದಲ್ಲಿ ಇಡಿ ತನಿಖೆ ಚುರುಕುಗೊಳಿಸಿದ್ದು, ಮೊದಲಿಗೆ ಜಮೀನು‌ ಮಾಲೀಕ ಮತ್ತು ಮೂಡಾ ಕಚೇರಿ ಮೇಲೆ ದಾಳಿ ಮಾಡಿದೆ. ಇದೇ ವೇಳೆ ಸಿಎಂ ಪತ್ನಿ ಪಡೆದಿದ್ದ 14 ಸೈಟ್ ರಹಸ್ಯವನ್ನು ಕೆದಕಿದೆ. ಅಲ್ಲದೇ ಮುಡಾ ಆಯುಕ್ತರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 41 ಪ್ರಶ್ನೆಗಳನ್ನು ಕೇಳಿದೆ. ಆ 41 ಪ್ರಶ್ನೆಗಳು ಟಿವಿ9ಗೆ EXCLUSIVE ಲಭ್ಯವಾಗಿದೆ.

ಮುಡಾ ಬುಡಕ್ಕೆ ಇಡಿ: ಸಿಎಂ ಪತ್ನಿ ಪಡೆದಿದ್ದ 14 ಸೈಟ್ ರಹಸ್ಯ ಕೆದಕಿದ ಅಧಿಕಾರಿಗಳು
ಮುಡಾ ಹಗರಣ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Oct 18, 2024 | 7:08 PM

Share

ಮೈಸೂರು, (ಅಕ್ಟೋಬರ್ 18): ಮುಡಾ ಹಗರಣ ಮತ್ತೆ ಧಗಧಗ ಅಂತಿದೆ. ಒಂದ್ಕಡೆ ಲೋಕಾಯುಕ್ತ ತನಿಖೆ ಆಮೆಗತಿಯಲ್ಲಿ ಸಾಗುತ್ತಿದ್ದರೆ, ತಪ್ಪೇ ಮಾಡಿಲ್ಲ ಎಂದು ಅಚಲ ಹೆಜ್ಜೆ ಇಟ್ಟಿರುವ ಸಿಎಂ ಸಿದ್ದರಾಮಯ್ಯ, ಕಾನೂನು ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಹೀಗಿರುವಾಗ ಸೆಪ್ಟಂಬರ್ 30ರಂದು ECIR ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಇಂದು(ಅಕ್ಟೋಬರ್ 18) ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದು, ಮುಡಾ ಕಚೇರಿಯ ಇಂಚಿಂಚೂ ದಾಖಲೆಯನ್ನ ಶೋಧಿಸಿ ಅಕ್ರಮದ ಮೂಲವನ್ನು ಕೆದಕಿದ್ದಾರೆ.

ಮುಡಾ ಅಧಿಕಾರಿಗಳು ಕಚೇರಿಗೆ ಬಂದು ಒಂದೆರಡು ಗಂಟೆ ಆಗಿತ್ತೋ ಏನು? ಆಗ ಮುಡಾಗೆ ಎಂಟ್ರಿ ಕೊಟ್ಟಿದ್ದ 20 ಅಧಿಕಾರಿಗಳ ತಂಡ, ಕಚೇರಿಯ ಮುಖ್ಯದ್ವಾರಕ್ಕೆ ಬೀಗ ಜಡಿದು, ದಾಖಲೆ ಪರಿಶೀಲನೆ ಕೂತಿದೆ. ಮುಡಾದಲ್ಲಿ 1ಸಾವಿರ ಕೋಟಿಗೂ ಹೆಚ್ಚು ಆರ್ಥಿಕ ನಷ್ಟವಾಗಿದೆ ಎಂದು ಹಿಂದಿನ ಮುಡಾ ಆಯುಕ್ತ ಡಾ. ಕೆವಿ ರಾಜೇಂದ್ರ ಹಿಂದಿನ ಡಿಸಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ರು. 2023 ರಲ್ಲಿನ ಅದೇ ಪತ್ರ ಮುಂದಿಟ್ಟು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಇದನ್ನೂ ಓದಿ: ನಿಜವಾಯ್ತು ಟಿವಿ9 ಡಿಜಿಟಲ್​ ನುಡಿದಿದ್ದ ಭವಿಷ್ಯ; ಮುಡಾ ಕಚೇರಿ ಮೇಲೆ ಇಡಿ ದಾಳಿ, ಸಿದ್ದರಾಮಯ್ಯಗೆ ಹೆಚ್ಚಿದ ಸಂಕಷ್ಟ

ED ರೇಡ್ ನಂ.2 ಮೈಸೂರು ತಾಲೂಕು ಕಚೇರಿ

ಮೈಸೂರು ಮುಡಾ ಕಚೇರಿಯಲ್ಲಿ ರೇಡ್ ನಡೀತಿದ್ದಾಗಲೇ ಅತ್ತ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೇವಲ ಮುಡಾ ಅಧಿಕಾರಿಗಳಿಗೆ ಮಾತ್ರವಲ್ಲದೇ ಮುಡಾ ಹಗರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ದೇವರಾಜ್‌ಗೂ ಇಡಿ ಶಾಕ್ ಕೊಟ್ಟಿದೆ. ಜವರ ಅಲಿಯಾಸ್ ನಿಂಗ ಅನ್ನೋರಿಂದ ದೇವರಾಜುಗೆ ಜಮೀನು ಬಂದಿದ್ದು, ಇದೇ ಜಮೀನನ್ನ ದೇವರಾಜು, ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ರು. ಹೀಗಾಗಿ ಕೆಂಗೇರಿಯಲ್ಲಿರುವ ದೇವರಾಜು ನಿವಾಸಕ್ಕೆ ಎಂಟ್ರಿ ಕೊಟ್ಟ ನಾಲ್ವರು ಅಧಿಕಾರಿಗಳು ತಂಡ, ದೇವರಾಜು ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ಆದ್ರೆ ಇಡಿ ವಿಚಾರಣೆಗೆ ದೇವರಾಜು ಅಸಹಕಾರ ತೋರಿದ್ದ ಬಗ್ಗೆ ಮಾಹಿತಿ ಇದೆ.

ಮುಡಾ ಆಯುಕ್ತರಿಗೆ ಇಡಿ ಅಧಿಕಾರಿಗಳಿಂದ 41 ಪ್ರಶ್ನೆ

ಮುಡಾ ಕಚೇರಿ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಮುಡಾ ಅಕ್ರಮ, 14 ಸೈಟ್, ಅಧಿಸೂಚನೆ, ಡಿನೋಟಿಫಿಕೇಷನ್, ಭೂಸ್ವಾಧೀನ, ಪರಿಹಾರ, ಹಂಚಿಕೆ ಪತ್ರ, ಸಿಎಂ ಪತ್ನಿ ಪಡೆದಿದ್ದಾರೆ ಎನ್ನಲಾದ 14 ಸೈಟ್‌ಗಳು ಸೇರಿದಂತೆ ಇಡಿ ಮುಡಾದಲ್ಲಿ ನಡೆದಿರೋ ಹಗರಣದ ಬಗ್ಗೆ ಇಡಿ ಪ್ರಶ್ನೆ ಕೇಳಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 41 ಪ್ರಶ್ನೆಗಳ ಮುಡಾ ಆಯುಕ್ತರ ಮುಂದಿಟ್ಟಿದೆ. ಆ 41 ಪ್ರಶ್ನೆಗಳು ಟಿವಿ9ಗೆ EXCLUSIVE ಲಭ್ಯವಾಗಿದೆ.

ವೈಟ್ನರ್ ರಹಸ್ಯ ಕೇಳಿದ ಇಡಿ

ಇಡಿ ದಾಳಿ ವೇಳೆ ಅಧಿಕಾರಿಗಳು ಪಾರ್ವತಿ ಸಿದ್ದರಾಮಯ್ಯರಿಗೆ ಸಂಬಂಧಿಸಿದ ದಾಖಲೆ ಕೇಳಿದ್ದಾರೆ. ಈ ವೇಳೆ ನಕಲು ಪ್ರತಿ ಬೇಕಾ ಎಂದು ಮುಡಾ ಅಧಿಕಾರಿಗಳು ಹೇಳಿದ್ರಂತೆ. ಆಗ, ನಕಲು ಪ್ರತಿ ಬೇಡ, 2004ರಿಂದ 2023ರವರೆಗಿನ ಮೂಲ ದಾಖಖೆ ಕೊಡಿ ಎಂದಿದ್ದಾರೆ.

ಇಡಿ ಪ್ರಶ್ನೆ : ಸಿಎಂ ಪತ್ನಿ ಬರೆದ ಪತ್ರಕ್ಕೆ ವೈಟ್ನರ್ ಹಾಕಲಾಗಿದೆ. ಇದರ ಮೂಲ ಪ್ರತಿ ಯಾವುದು ? ಮೂಲ ಪ್ರತಿ ಎಲ್ಲಿದೆ? ಮೂಲ ಪ್ರತಿಗೆ ವೈಟ್ನರ್ ಬಂದಿದ್ದು ಹೇಗೆ? ವೈಟ್ನರ್ ಹಿಂದಿನ ಪದಗಳು ಯಾವುದು ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆಯುಕ್ತ ರಘುನಂದನ್‌ ಮುಡಾ ಪ್ರತಿಕ್ರಿಯಿಸಿ, ಎರಡು ತಿಂಗಳ ಹಿಂದೆ ನಾನು ಆಯುಕ್ತನಾಗಿ ಬಂದಿರುವುದು. ನಾನು ಬರುವುದಕ್ಕಿಂತ ಮುಂಚೆಯೇ ವೈಟ್ನರ್ ಹಾಕಲಾಗಿತ್ತು. ವೈಟ್ನರ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಎಬ್ಬಿಸಿದ್ದ ಮುಡಾ ಪ್ರಕರಣ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಶುರುವಾಗಿದೆ..ಹಗರಣದ ತನಿಖೆಗೆ ಅಧಿಕೃತವಾಗಿ ಇ.ಡಿ ಎಂಟ್ರಿ ಕೊಟ್ಟಿದ್ದು, ಅಕ್ರಮದ ದಾಖಲೆಗಳ ಬೆನ್ನು ಬಿದ್ದಿದ್ದಾರೆ.. ಹೀಗಾಗಿ ಯಾಱರಿಗೆ ಗಂಡಾಂತರ ಕಾದಿದ್ಯೋ ದೇವರೇ ಬಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ