ಮೈಸೂರು, ಅಕ್ಟೋಬರ್ 19: ಮುಡಾ ಹಗರಣ ಸಂಬಂಧ ಮೈಸೂರಿನ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದು, ಎರಡನೇ ದಿನವಾದ ಶನಿವಾರವೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಮುಡಾ ಸಂಬಂಧ ದಾಖಲೆಯೊಂದಕ್ಕೆ ವೈಟ್ನರ್ ಹಾಕಿರುವುದು ಬೆಳಕಿಗೆ ಬಂದಿತ್ತು. ಇದೀಗ ಇಡಿ ಅಧಿಕಾರಿಗಳ ಗಮನ ಅತ್ತ ಸೆಳೆದಿದೆ. ಪರಿಣಾಮವಾಗಿ ವೈಟ್ನರ್ ವಿಚಾರ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆಯೇ ಎಂಬ ಅನುಮಾನ ಹೆಚ್ಚಾಗಿದೆ.
ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮುಡಾ ಕಚೇರಿಗೆ ಆಗಮಿಸಿದ ಇಡಿ ಅಧಿಕಾರಿಗಳ ಜತೆ ಎಫ್ಎಸ್‌ಎಲ್ ಅಧಿಕಾರಿ ಕೂಡ ಆಗಮಿಸಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾವರ್ತಿ ಮುಡಾಗೆ ನೀಡಿದ್ದ ಮನವಿ ಪತ್ರದಲ್ಲಿದ್ದ ವೈಟ್ನರ್ ವಿಚಾರವಾಗಿ ಅವರು ಪರಿಶೀಲನೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಮನವಿ ಪತ್ರದ ಎರಡನೇ ಪುಟದಲ್ಲಿದ್ದ ಖಾಲಿ ಜಾಗಕ್ಕೆ ವೈಟ್ನರ್ ಹಾಕಲಾಗಿತ್ತು. ಆ ಬಗ್ಗೆ ಚರ್ಚೆ ಆದಾಗ ಬಿಡುಗಡೆ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ, ಟಾರ್ಚ್ ಬಿಟ್ಟು ವೈಟ್ನರ್ ಹಿಂದೆ ಏನಿತ್ತು ಎಂಬುದನ್ನು ತೋರಿಸಲು ಯತ್ನಿಸಿದ್ದರು. ಈಗ ಅದೇ ದಾಖಲೆಯ ಅಸಲಿಯತ್ತು ಪತ್ತೆಗೆ ಇಡಿ ಮುಂದಾಗಿದೆ.
ವೈಟ್ನರ್ ಹಾಕಿದ್ದ ದಾಖಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಸಿಎಂ ಬಿಡುಗಡೆ ಮಾಡಿದ್ದ ದಾಖಲೆ, ಆರ್ಟಿಐ ಅಡಿ ಮುಡಾ ನೀಡಿದ್ದ ದಾಖಲೆ ಬೇರೆ ಬೇರೆಯಾಗಿರುವುದು ನಂತರ ಬೆಳಕಿಗೆ ಬಂದಿತ್ತು. 2 ದಾಖಲೆಗಳಲ್ಲಿ ಸಿಎಂ ಪತ್ನಿಯ ಸಹಿಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಷ್ಟೇ ಅಲ್ಲದೆ 2 ದಾಖಲೆಗಳಲ್ಲಿ ಹಲವು ವ್ಯತ್ಯಾಸಗಳು ಕಂಡು ಬಂದಿದ್ದವು. ಈ ಬಗ್ಗೆ ಮುಡಾ ಅಧಿಕಾರಿಗಳಿಗೆ ಹಲವು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಈಗಾಗಲೇ ಕೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಮನವಿ ಮಾಡಿ ಮುಡಾಗೆ ಸಲ್ಲಿಸಿರುವ ಪತ್ರಕ್ಕೆ ವೈಟ್ನರ್ ಹಾಕಿರುವುದು ಕೆಲವು ಸಮಯ ಹಿಂದೆ ಬೆಳಕಿಗೆ ಬಂದಿತ್ತು. ಇದರಿಂದಾಗಿ, ಹಗರಣದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲೇ ಅಧಿಕಾರಿಗಳು ದಾಖಲೆಯನ್ನು ತಿರುಚಿದ್ದಾರೆಯೇ ಎಂಬ ಅನುಮಾನ ಮೂಡಿತ್ತು. ವಿಜಯನಗರದ 2 ಮತ್ತು ಮೂರನೇ ಹಂತದಲ್ಲೇ ನಿವೇಶನ ಕೊಡುವಂತೆ ಸಿದ್ದರಾಮಯ್ಯ ಪತ್ನಿ ಕೇಳಿದ್ದರೇ ಎಂಬ ಪ್ರಶ್ನೆಯೂ ಈಗ ಉದ್ಭವಿಸಿದೆ. ವೈಟ್ನರ್ ಹಾಕಿ ಅಳಿಸಿರುವುದರಿಂದ ಈ ಪ್ರಶ್ನೆ ಮೂಡಿತ್ತು.
ನಂತರ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಇದನ್ನೇ ಮುಂದಿಟ್ಟುಕೊಂಡು ಸಿಎಂ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದವು. ನಂತರ ನಕಲಿ ಸಹಿ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿತ್ತು.
ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಬದಲಿ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಿದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ನಾಲ್ಕೈದು ಪದಗಳಿಗೆ ವೈಟ್ನರ್ ಹಾಕಿ, ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂಬ ಮನವಿ ಮಾಡಲಾಗಿತ್ತು ಎಂದಿದ್ದರು.
ಇದನ್ನೂ ಓದಿ: ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು? ಅನುಮಾನಕ್ಕೆ ಇದೆ ಕಾರಣ
ಇದೀಗ ವೈಟ್ನರ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಇಡಿ ಆ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸುತ್ತಿದೆ. ಇದಕ್ಕಾಗಿ ವಿಧಿವಿಜ್ಞಾನ ಪ್ರಯೋಗಾಯಲಯ ಅಧಿಕಾರಿಯ ನೆರವನ್ನೂ ಪಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ