Muda Case: ಪ್ರಾಸಿಕ್ಯೂಷನ್​: ಬೀಸುವ ದೊಣ್ಣೆಯಿಂದ ಸಿದ್ದರಾಮಯ್ಯ ಪಾರು!

| Updated By: ರಮೇಶ್ ಬಿ. ಜವಳಗೇರಾ

Updated on: Aug 19, 2024 | 5:12 PM

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ನೀಡಿರುವ ಅನುಮತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಯನ್ನು ಹೈಕೋರ್ಟ್​ ಮುಂದೂಡಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರು ಬೀಸುವ ದೊಣ್ಣೆಯಿಂದ ಪಾರಾದಂತಾಗಿದೆ.

Muda Case: ಪ್ರಾಸಿಕ್ಯೂಷನ್​: ಬೀಸುವ ದೊಣ್ಣೆಯಿಂದ ಸಿದ್ದರಾಮಯ್ಯ ಪಾರು!
ಮುಡಾ ಹಗರಣ
Follow us on

ಬೆಂಗಳೂರು, (ಆಗಸ್ಟ್ 19):  ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್, ಆಗಸ್ಟ್ 29ಕ್ಕೆ ಮುಂದೂಡಿದೆ. ಸಿಎಂ ಪರ ವಕೀಲರು ಇಂದು (ಆಗಸ್ಟ್​ 19) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಸುಮಾರು ಒಂದೂವರೆ ಗಂಟೆ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ವಿಚಾರಣೆಯನ್ನು  ಆಗಸ್ಟ್ 29 ಮಧ್ಯಾಹ್ನ 2.30ಕ್ಕೆ  ಅರ್ಜಿ ವಿಚಾರಣೆ ಮುಂದೂಡಿದೆ. ಅಲ್ಲದೇ ಜನಪ್ರತಿನಿಧಿಗಳ ಕೋರ್ಟ್​ನ ಆದೇಶವನ್ನು ಆ.29ಕ್ಕೆ ಮುಂದೂಡುವಂತೆ ಸೂಚಿಸಿದೆ. ಈ ಮೂಲಕ ಸಿದ್ದರಾಮಯ್ಯ ನಾಳಿನ ಬೀಸುವ ದೊಣ್ಣೆಯಿಂದ ಪಾರಾದಂತಾಗಿದೆ.

ಸ್ನೇಹಮಯಿ ಕೃಷ್ಣ ಹಾಗೂ ಟಿಜೆ ಅಬ್ರಹಾಂ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಿದ್ದರು ಈ. ಎರಡು ದೂರುಗಳ ವಿಚಾರಣೆ ನಡೆಸಬೇಕೋ ಬೇಡ್ವಾ ಎನ್ನುವ ಆದೇಶವನ್ನು ನಾಳೆ(ಆಗಸ್ಟ್ 20) ಕಾಯ್ದಿರಿಸಿತ್ತು. ಆದ್ರೆ, ಇದೀಗ ಹೈಕೋರ್ಟ್​ ಈ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್​ಗೆ ಸೂಚಿಸಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: ಮುಡಾ ಹಗರಣ: ಆದೇಶ ಕಾಯ್ದಿರಿಸಿದ ಕೋರ್ಟ್, ರಾಜ್ಯಪಾಲರ ನಡೆಯತ್ತ ಎಲ್ಲರ ಚಿತ್ತ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಪ್ರಾಸಿಕ್ಯೂಷನ್​ಗೆ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಇಂದು (ಆಗಸ್ಟ್ 19) ಹೈಕೋರ್ಟ್​ಗೆ  ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ನ್ಯಾಯಮೂರ್ತಿ  ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು. ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ವಾದ-ಪ್ರತಿವಾದ ಹೇಗಿತ್ತು ಎನ್ನುವ ವಿವರ ಈ ಕೆಳಗಿನಂತಿದೆ.

ವಾದ ಪ್ರತಿವಾದ ಹೇಗಿತ್ತು ನೋಡಿ

ರಾಜ್ಯಪಾಲರ ಪರ ವಕೀಲ: ಪ್ರಾಸಿಕ್ಯೂಷನ್​ಗೆ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್​​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ನಡೆಸಿದ್ದು, ಆರಂಭದಲ್ಲೇ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ವಾದ ಆರಂಭಿಸಿದ್ದು, ವಿಚಾರಣೆ ನಾಳೆಗೆ ನಿಗದಿಪಡಿಸಲು ಮನವಿ ಮಾಡಿದರು. ಇಂದು ಬೆಳಗ್ಗೆ ಅರ್ಜಿಯ ಪ್ರತಿ ರಾಜ್ಯಪಾಲರಿಗೆ ನೀಡಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಗೆ ಕಾಲಾವಕಾಶಕ್ಕೆ ಮನವಿ ಮಾಡಿದರು.

ಸಿಎಂ ಪರ ವಕೀಲ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ಇದೆ. ಮಧ್ಯಂತರ ಆದೇಶ ಬೇಕಿರುವುದರಿಂದ ಇಂದೇ ವಿಚಾರಣೆ ನಡೆಸಬೇಕು/ ರಾಜ್ಯಪಾಲರ ಕಚೇರಿಗೆ ಅರ್ಜಿಯ ಪ್ರತಿ ನೀಡಿದ ಮಾತ್ರಕ್ಕೆ ಅವರ ವಾದ ಕೇಳಬೇಕೆಂದಿಲ್ಲ ಎಂದರು.

ಸಿಎಂ ಪರ ವಕೀಲ: ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ಉತ್ತರ ನೀಡಲಾಗಿತ್ತು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ದೂರುಗಳು ದುರುದ್ದೇಶಪೂರಿತ. ಹೀಗಾಗಿ ಶೋಕಾಸ್‌ ನೋಟಿಸ್ ಹಿಂಪಡೆಯುವಂತೆ ಕ್ಯಾಬಿನೆಟ್ ಸಲಹೆ ನೀಡಿದೆ. ಕ್ಯಾಬಿನೆಟ್ ಸಲಹೆ ಪರಿಗಣಿಸದೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶಿಸಿದ್ದಾರೆ. ನೂರು ಪುಟಗಳ ಕ್ಯಾಬಿನೆಟ್ ಸಲಹೆಗೆ ಎರಡು ಪುಟಗಳ ಉತ್ತರ ನೀಡಿದ್ದಾರೆ. ರಾಜ್ಯಪಾಲರು ಒಂದೇ‌ ಒಂದು ಕಾನೂನಿನ ಅಂಶಕ್ಕೆ ಉತ್ತರಿಸಿಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇಕೆಂದು ಕಾರಣ ನೀಡಿಲ್ಲ ಎಂದರು.

ಸಿಎಂ ಪರ ವಕೀಲ: ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇಕೆಂದು ಕಾರಣ ನೀಡಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು ಇಂತಹ ಕ್ರಮವಾಗುತ್ತಿದೆ. ಸಿಎಂ ರಾಜೀನಾಮೆ ಪಡೆಯಲು ಈಗ ರಾಷ್ಟ್ರಪತಿ ಆಳ್ವಿಕೆ ಅಗತ್ಯವಿಲ್ಲ. ಕೇವಲ ಇಂತಹ ದೂರುಗಳ ಮೂಲಕ ಉದ್ದೇಶ ಈಡೇರುತ್ತಿದೆ. ಸರ್ಕಾರಿ ಸೇವಕನಾಗಿ ಸಿಎಂ ಯಾವುದೇ ಶಿಫಾರಸು ಮಾಡಿಲ್ಲ. ಮುಡಾ ಫೈಲ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಸಿಎಂ ಮಾಡಿಲ್ಲ.

ಸಿಎಂ ಪರ ವಕೀಲ: ಹೊಸ ಬಿಎನ್ಎಸ್ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಮ್ಮ ಕರ್ತವ್ಯದ ಭಾಗವಾಗಿ ಸಿಎಂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೂ ವಿವೇಚನಾರಹಿತರಾಗಿ ರಾಜ್ಯಪಾಲರು ಅನುಮತಿ ನೀಡಿದ್ದಾರೆ.

ಸಿಎಂ ಪರ ವಕೀಲ: ತಮ್ಮ ಕರ್ತವ್ಯದ ಭಾಗವಾಗಿ ಸಿಎಂ ಯಾವ ತೀರ್ಮಾನ ಕೈಗೊಂಡಿಲ್ಲ/ ಆದರೂ ವಿವೇಚನಾರಹಿತರಾಗಿ ರಾಜ್ಯಪಾಲರು ಅನುಮತಿ ನೀಡಿದ್ದಾರೆ/ ಕ್ಯಾಬಿನೆಟ್ ಸಲಹೆ ತಿರಸ್ಕರಿಸಿ ರಾಜ್ಯಪಾಲರು ಆದೇಶ ನೀಡುವಂತಿಲ್ಲ. ಇದಕ್ಕೆ ವಿವರಣೆಯಾಗಿ ಮಧ್ಯಪ್ರದೇಶದ ಕೇಸ್ ತೀರ್ಪನ್ನು ಉಲ್ಲೇಖಿಸಿದರು.

ಸಿಎಂ ಪರ ವಕೀಲ:  ರಾಜ್ಯಪಾಲರ ಶೋಕಾಸ್ ನೋಟಿಸ್ ನಲ್ಲಿ ಸ್ನೇಹಪ್ರಿಯ ಕೃಷ್ಣ, ಪ್ರದೀಪ್ ಕುಮಾರ್ ದೂರಿನ ಪ್ರಸ್ತಾಪವಿಲ್ಲ. ಕೇವಲ ಟಿ.ಜೆ.ಅಬ್ರಹಾಂ ದೂರಿಗೆ ಸಂಬಂಧಿಸಿದಂತೆ ಮಾತ್ರ ಶೋಕಾಸ್ ನೋಟಿಸ್ ನೀಡಲಾಗಿದೆ. ಆಯ್ಕೆಯಾದ ಸರ್ಕಾರದ ವಿರುದ್ಧ ರಾಜ್ಯಪಾಲರು ಅಂದೇ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಬಾಕಿಯಿದ್ದ 12 ದೂರುಗಳ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ.

ರಾಜ್ಯಪಾಲರ ಪರ ವಕೀಲ: ಕ್ಯಾಬಿನೆಟ್ ನೀಡಿರುವ ಸಲಹೆ ತುಂಬಾ ಕಾನೂನಾತ್ಮಕವಾಗಿದೆ. ಎಲ್ಲಾ ಕಾನೂನಿನ ಪಾಂಡಿತ್ಯ ಇರುವ ಉತ್ತರ ನೀಡಲಾಗಿದೆ ಎಂದು ಸಿಎಂ ಪರ ವಕೀಲ ಸಿಂಘ್ವಿ ವಾದಕ್ಕೆ ತುಷಾರ್ ಮೆಹ್ತಾ ವ್ಯಂಗ್ಯವಾಡಿದ್ದು, ಮಧ್ಯಪ್ರದೇಶ ಕೇಸ್ ತೀರ್ಪನ್ನು ತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ ಎಂದರು.

ಸಿಎಂ ಪರ ವಕೀಲ: ಸಂವಿಧಾನದ ಆರ್ಟಿಕಲ್ 163ರಡಿ ಕ್ಯಾಬಿನೆಟ್ ತೀರ್ಮಾನ ಒಪ್ಪಬೇಕು. ಆದರೆ ಅದನ್ನು ಒಪ್ಪದೇ ರಾಜ್ಯಪಾಲರು ತೀರ್ಮಾನಿಸಿದ್ದಾರೆಂದೇ ನಂಬೋಣ. ಆದರೆ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಲು ಅವರು ಕಾರಣಗಳನ್ನೇ ನೀಡಿಲ್ಲ.

ನ್ಯಾಯಮೂರ್ತಿ: 17ಎ ಕೇವಲ ಅನುಮತಿ ಅಷ್ಟೇ, 19 ಅಡಿಯ ಸಮ್ಮತಿಯಲ್ಲ. ಭ್ರಷ್ಟಾಚಾರ ತಡೆ ಕಾಯ್ದೆಗೆ 17 ಎ ಯನ್ನು ಇತ್ತೀಚೆಗೆ ಸೇರಿಸಲಾಗಿದೆ. ನೀವು ಓದುತ್ತಿರುವ ತೀರ್ಪು ಬರುವಾಗ ಈ ತಿದ್ದುಪಡಿ ಆಗಿರಲಿಲ್ಲ ಎಂದು ಸಿಂಘ್ವಿ ವಾದಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪ್ರತಿಕ್ರಿಯಿಸಿದರು.

ಸಿಎಂ ಪರ ವಕೀಲ: ರಾಜ್ಯಪಾಲರು ತಮ್ಮ ವಿವೇಚನೆ ಉಪಯೋಗಿಸಿ ತೀರ್ಮಾನಿಸಬೇಕು. ಕ್ಯಾಬಿನೆಟ್ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿರಲಿಲ್ಲ. ಡಿಸಿಎಂ ನೇತೃತ್ವದಲ್ಲಿ ಬಹಳ ವಿವರವಾದ ಚರ್ಚೆ ನಡೆಸಲಾಗಿದೆ. ಶಂಷೇರ್ ಸಿಂಗ್ ಸೇರಿದಂತೆ ‘ಸುಪ್ರೀಂ’ ತೀರ್ಪುಗಳನ್ನು ಉಲ್ಲೇಖಿಸಿದರು. ಅಲ್ಲದೇ ಯಡಿಯೂರಪ್ಪ ಪ್ರಕರಣದಲ್ಲಿ ನೀಡಿದ್ದ ತೀರ್ಪು ಉಲ್ಲೇಖಿಸಿ ಸಿಂಘ್ವಿ ವಾದ ಮಂಡಿಸಿದರು.

ಸಿಎಂ ಪರ ವಕೀಲ:  1992 ರಲ್ಲಿ ಮುಡಾ ಸ್ವಾಧೀನ 1998 ಡಿನೋಟಿಫಿಕೇಷನ್ ಆಗಿದೆ. 2004ರಲ್ಲಿ ಸಿಎಂ ಮೈದುನನಿಗೆ ಮಾರಾಟವಾಗಿದೆ. 2005ರಲ್ಲಿ ಕೃಷಿ ಜಮೀನಾಗಿ ಪರಿವರ್ತಿಸಲಾಗಿದೆ. 2010 ರಂದು ಸಿಎಂ ಪತ್ನಿಗೆ ಸಹೋದರ ದಾನಪತ್ರ ನೀಡಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿರಲಿಲ್ಲ. ಯಾವುದೂ ತರಾತುರಿಯಲ್ಲಿ ಆಗಿಲ್ಲ‌. ರಾಜ್ಯಪಾಲರಂತೆ ತರಾತುರಿಯಲ್ಲಿ ಪ್ರಕ್ರಿಯೆ ನಡೆದಿಲ್ಲ. 2020 ರಲ್ಲಿ ಭೂಮಿಗೆ ಪರಿಹಾರವಾಗಿ ನಿವೇಶನ ಹಂಚಲಾಗಿದೆ. 2022 ರಲ್ಲಿ ನಿವೇಶನಗಳಿಗೆ ಕ್ರಯಪತ್ರವಾಗಿದೆ .

ಸಿಎಂ ಪರ ವಕೀಲ: ಜುಲೈ 14 ರಂದು ನ್ಯಾ. ಪಿ.ಎನ್. ದೇಸಾಯಿ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ಮುಡಾ ಸಂಬಂಧ ರಾಜ್ಯಪಾಲರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ‌. ದೂರುದಾರನ ಹಿನ್ನೆಲೆಯನ್ನು ಪರಿಶೀಲನೆ ಮಾಡಬೇಕಿತ್ತು. ಟಿ.ಜೆ. ಅಬ್ರಹಾಂ ಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ. ಈ ಎಲ್ಲವನ್ನೂ ಕ್ಯಾಬಿನೆಟ್ ರಾಜ್ಯಪಾಲರಿಗೆ ನೀಡಿದೆ. ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ. ಇವರ ಮೇಲಿನ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿಯನ್ನು ನೀಡಿಲ್ಲ. ಹೊಸ ಬಿಎನ್ ಎಸ್ ಕಾಯ್ದೆಯಡಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ.

ನ್ಯಾಯಮೂರ್ತಿ: ಹೊಸ ಕಾಯ್ದೆಯ ಒಂದು ಬದಲಾವಣೆ ಎಂದರೆ 420 ಈಗ ವಂಚನೆಯಲ್ಲ. ‌ಚಾರ್ ಸೋ ಬೀಸ್ ಅನ್ನು ಈಗ ನಿಂದನೆಯಾಗಿ ಪರಿಗಣಿಸುವಂತಿಲ್ಲ.

ಸಿಎಂ ಪರ ವಕೀಲ: ಸೆಕ್ಷನ್ 17ಎ ಅಡಿ ಪೊಲೀಸ್ ಅಧಿಕಾರಿ ಪ್ರಾಸಿಕ್ಯೂಷನ್​​ಗೆ ಅನುಮತಿ ಕೇಳಿಲ್ಲ. ಕರ್ತವ್ಯದ ಭಾಗವಾಗಿ ಸಿಎಂ ಮುಡಾ ನಿವೇಶನದ ತೀರ್ಮಾನ ಕೈಗೊಂಡಿಲ್ಲ. ವಿವೇಚನೆ ಬಳಸದೇ ರಾಜ್ಯಪಾಲರು ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯಪಾಲರು ಇತರೆ ದೂರುಗಳನ್ನು ಬಿಟ್ಟು ಇದನ್ನೇ ಆಯ್ಕೆ ಮಾಡಿದ್ದಾರೆ. ಸೆಲೆಕ್ಟೀವ್ ಆಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ.

ಸಿಎಂ ಪರ ವಕೀಲ :ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಭಾಗಿಯಾಗಿರಲಿಲ್ಲ. ಸಿಎಂ ವಿರುದ್ಧ ಆರೋಪ ಬಂದರೆ ಕ್ಯಾಬಿನೆಟ್ ಅನರ್ಹಗೊಳ್ಳುವುದಿಲ್ಲ. ಹೀಗಾಗಿ ಸಿಎಂ ಹೊರತಾದ ಸಂಪುಟದ ತೀರ್ಮಾನ ಒಪ್ಪಬೇಕಿತ್ತು. ರಾಜ್ಯಪಾಲರ ತೀರ್ಮಾನ ನ್ಯಾಯಾಂಗದ ಪರಾಮರ್ಶೆ ವ್ಯಾಪ್ತಿಯಲ್ಲಿದೆ. ನಬಮ್‌ರೇಬಿಯಾ ಪ್ರಕರಣದ ತೀರ್ಪು ಪರಿಗಣಿಸದೇ ಎಂಪಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸ್ ಪರಿಗಣಿಸಿದ್ದಾರೆ.

ರಾಜ್ಯಪಾಲರ ಪರ ವಕೀಲ: ಕ್ಯಾಬಿನೆಟ್ ನಿರ್ಣಯದ ಉದ್ದೇಶ ಸಿಎಂ ರಕ್ಷಿಸುವುದಾಗಿರಬಹುದು. ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ವಿಚಾರದಲ್ಲಿ ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರವಿದೆ. ಐವರು ನ್ಯಾಯಮೂರ್ತಿಗಳ ಪೀಠ ರಾಜ್ಯಪಾಲರ ಪರ ತೀರ್ಪು ನೀಡಿದೆ. ಎಲ್ಲ ಕಾರಣಗಳನ್ನು ನೀಡಿಯೇ ರಾಜ್ಯಪಾಲರು ತೀರ್ಮಾನಿಸಿದ್ದಾರೆ.. ಹೀಗಾಗಿ ಯಾವುದೇ ಮಧ್ಯಂತರ ತಡೆ‌ ನೀಡಬಾರದು. ನಾನು ನನ್ನ ವಾದ ಗುರುವಾರ ಮುಂದುವರಿಸುತ್ತೇನೆ.

ನ್ಯಾಯಮೂರ್ತಿ: ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಲಿದೆ. ಆ‌ ಕೋರ್ಟ್ ಆದೇಶ‌ ನೀಡಿದರೆ ಸಮಸ್ಯೆ ಆಗಬಹುದಲ್ಲವೇ?

ನ್ಯಾಯಮೂರ್ತಿ: ಸೂಕ್ತ ಮಧ್ಯಂತರ ಆದೇಶ ನೀಡಲಾಗುವುದು. ಎಲ್ಲಾ ಪ್ರತಿವಾದಿಗಳೂ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಿ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪ್ರಕ್ರಿಯೆ ಹೈಕೋರ್ಟ್ ವಿಚಾರಣೆಗೆ ಅಡ್ಡಿಯಾಗಬಾರದು.

ದೂರುದಾರರ ಪರ ಪ್ರಭುಲಿಂಗ್ ನಾವದಗಿ: ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಸತ್ಯನಾರಾಯಣ ಶರ್ಮಾ ಕೇಸ್ ಉಲ್ಲೇಖಿಸಿ ವಾದಮಂಡನೆ ಮಾಡಿದರು.

ಸಿಎಂ ಪರ ವಕೀಲ : ನಾಳೆ ಕೋರ್ಟ್ ಆದೇಶ ನೀಡಿದರೆ ಸಮಸ್ಯೆ ಆಗಲಿದೆ. ರಾಜ್ಯಪಾಲರ ಅನುಮತಿ ಬಗ್ಗೆ ವಿಚಾರಣಾ ನ್ಯಾಯಾಲಯ ತೀರ್ಮಾನಿಸಲಿ ಎಂದರು.

ದೂರುದಾರರ ಪರ ವಕೀಲೆ ಲಕ್ಷ್ಮೀ ಅಯ್ಯಂಗಾರ್: ರಾಜ್ಯಪಾಲರ ಆದೇಶದ ಬಗ್ಗೆ ಜಿಲ್ಲಾ ಕೋರ್ಟ್​​ ತೀರ್ಮಾನಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನ್ಯಾಯಮೂರ್ತಿ:  ಸಾಂವಿಧಾನಿಕ ಕೋರ್ಟ್ ಆದ ಹೈಕೋರ್ಟ್ ತೀರ್ಮಾನಿಸಬೇಕಲ್ಲವೇ?

ಸಿಎಂ ಪರ ವಕೀಲ : ವಿಚಾರಣೆ ಆಗಸ್ಟ್ 29 ಕ್ಕೆ ಮುಂದೂಡಲು ಮನವಿ ಮಾಡಿದರು.

ನ್ಯಾಯಮೂರ್ತಿ:  ಎಲ್ಲರ ವಾದಗಳನ್ನು ಆಲಿಸಿದ್ದೇನೆ. ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಲಿದೆ. ನಾಳೆ ಆದೇಶ ನೀಡಿದರೆ ಹೈಕೋರ್ಟ್ ಪ್ರಕ್ರಿಯೆ ನಿಷ್ಪಲವಾಗಲಿದೆ. ಹೀಗಾಗಿ ಆಗಸ್ಟ್ 29 ರವರೆಗೆ ವಿಚಾರಣೆ ಮುಂದೂಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹೈಕೋರ್ಟ್​​ ಸೂಚನೆ ನೀಡಿದೆ.

Published On - 4:42 pm, Mon, 19 August 24