ಮುಡಾ ಹಗರಣ: ಆದೇಶ ಕಾಯ್ದಿರಿಸಿದ ಕೋರ್ಟ್, ರಾಜ್ಯಪಾಲರ ನಡೆಯತ್ತ ಎಲ್ಲರ ಚಿತ್ತ
ಮುಡಾ ಹಗರಣದ ಸಂಕಷ್ಟ ಸದ್ಯ ಸಿಎಂ ಸಿದ್ದರಾಮಯ್ಯ ಬೆನ್ನು ಬಿಡುವಂತೆ ಕಾಣಿಸುಲ್ಲ. ರಾಜ್ಯಪಾಲರ ಅಂಗಳ, ಮೈಸೂರು ಪಾದಯಾತ್ರೆ ಅಂತಾ ಬೀದಿಬೀದಿಯಲ್ಲಿ ಸದ್ದು ಮಾಡುತ್ತಿದ್ದ ಪ್ರಕರಣ, ಇದೀಗ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಕೋರ್ಟ್ ಕಟಕಟೆವರೆಗೂ ಹೋಗಿದೆ. ಇಷ್ಟು ದಿನ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ ಎಂಬಂತೆ ಆಗಿದೆ. ಹಾಗಾದರೆ ಸಿದ್ದರಾಮಯ್ಯಗೆ ಸಂಕಷ್ಟ ದುಪ್ಪಟಾಗಿದೆಯಾ? ಕೋರ್ಟ್ನಲ್ಲಿ ನಡೆದ ವಿಚಾರಣೆ ಏನಾಯ್ತು? ಇಲ್ಲಿದೆ ವಿವರ.
ಬೆಂಗಳೂರು, ಆಗಸ್ಟ್ 14: ಮುಡಾ ಜಮೀನು ಡಿನೋಟಿಫಿಕೇಷನ್ ಮಾಡಿಸಿ ಅಕ್ರಮ ಲಾಭ ಪಡೆದ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯರ ನಿದ್ದೆಗೆಡಿಸಿದೆ. ಸಿಎಂಗೆ ರಾಜ್ಯ ಪಾಲರ ನೋಟಿಸ್ ಬೆನ್ನಲ್ಲೇ, ಬಿಜೆಪಿ ಜೆಡಿಎಸ್ ಪಾದಯಾತ್ರೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದ್ದವು. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹಾಗೂ ಟಿಜೆ ಅಬ್ರಹಾಂ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದಾರೆ. ಎರಡು ದೂರುಗಳ ವಿಚಾರಣೆ ಮಂಗಳವಾರ ನಡೆದಿದ್ದು, ಒಂದು ಪ್ರಕರಣದಲ್ಲಿ ಆದೇಶ ಕಾಯ್ದಿರಿಸಲಾಗಿದೆ. ವಿಚಾರಣೆ ವೇಳೆ ಕೋರ್ಟ್, ರಾಜ್ಯಪಾಲರ ಪೂರ್ವಾನುಮತಿ ಅಗತ್ಯತೆಯ ಪ್ರಶ್ನೆ ಎತ್ತಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಈಗ ರಾಜ್ಯಪಾಲರ ಮುಂದಿನ ನಡೆಯತ್ತ ನೆಟ್ಟಿದೆ.
ಟಿಜೆ ಅಬ್ರಹಾಂ ಸಲ್ಲಿಸಿರುವ ದೂರಿನಲ್ಲಿ ಏನಿದೆ?
ಮುಡಾದಿಂದ ಸ್ವಾಧೀನಗೊಂಡ ಬಳಿಕ ಕೃಷಿ ಜಮೀನು ಅಸ್ತಿತ್ವದಲ್ಲೇ ಇರಲಿಲ್ಲ. ನಿವೇಶನಗಳಾಗಿ ಹಂಚಲಾಗಿದ್ದ ಜಮೀನನ್ನು ಖರೀದಿಸಿದ್ದಲ್ಲದೇ ಕೃಷಿ ಜಮೀನೆಂದು ಬಿಂಬಿಸಿ ಭೂ ಪರಿವರ್ತನೆ ಮಾಡಿಸಿದ್ದಾರೆ. ಹೀಗಾಗಿ ಸಿಎಂ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು 55.80 ಕೋಟಿ ರೂಪಾಯಿ ಬೆಲೆ ಬಾಳುವ ನಿವೇಶನಗಳ ಹಂಚಿಕೆ ಪಡೆದು ಅಕ್ರಮ ಲಾಭ ಗಳಿಸಿದ್ದಾರೆ. ಮುಡಾ, ಜಮೀನಿಗೆ ಬದಲಾಗಿ ನಿವೇಶನಗಳನ್ನು ಹಂಚಿದಾಗ ಸಿಎಂ ಪುತ್ರ ಯತೀಂದ್ರ ಶಾಸಕರಾಗಿದ್ದು ಮುಡಾದ ಭಾಗವಾಗಿದ್ದರು. ಅಲ್ಲದೇ ಸಿದ್ದರಾಮಯ್ಯ ಲೋಕಾಯುಕ್ತರಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಈ ಜಮೀನುಗಳ ವಿವರ ನೀಡಿದ್ದರು. ಆದರೆ 2013 ರ ಚುನಾವಣಾ ಪ್ರಮಾಣಪತ್ರದಲ್ಲಿ ಈ ಜಮೀನಿರುವುದನ್ನು ಘೋಷಿಸದೇ ಜನಸಾಮಾನ್ಯರಿಂದ ಮರೆಮಾಚಿದ್ದಾರೆಂದು ಟಿಜೆ ಅಬ್ರಹಾಂ ಆರೋಪಿಸಿದ್ದಾರೆ.
ಸದ್ಯ ಈ ಕೇಸ್ನ ಮುಂದಿನ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 21ಕ್ಕೆ ಮುಂದೂಡಿದೆ. ಇನ್ನು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಡ್ಜ್ ಸಂತೋಷ್ ಗಜಾನನ ಭಟ್, ಪೂರ್ವಾನುಮತಿ ಪಡೆಯದೇ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬಹುದೇ ಎಂಬ ಪ್ರಶ್ನೆಯನ್ನು ಅರ್ಜಿದಾರರ ಮುಂದಿಟ್ಟಿದ್ದಾರೆ. ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲಾರದ ಲಕ್ಷ್ಮೀ ಅಯ್ಯಂಗಾರ್, ಈ ಹಂತದಲ್ಲಿ ಪೂರ್ವಾನುಮತಿ ಬೇಕಿಲ್ಲವೆಂದಿದ್ದಾರೆ. ಸ್ನೇಹಮಯಿ ಕೃಷ್ಣ ದೂರಿನ ವಿಚಾರವಾಗಿ, ಕೋರ್ಟ್ ಆಗಸ್ಟ್ 20 ರಂದು ಆದೇಶ ಪ್ರಕಟಿಸಲಿದೆ.
ಎಲ್ಲರ ಚಿತ್ತ ರಾಜ್ಯಪಾಲರ ಮುಂದಿನ ನಡೆಯತ್ತ
ಈ ಮಧ್ಯೆ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡದೇ ಸಿಎಂ ವಿರುದ್ಧ ಖಾಸಗಿ ದೂರನ್ನು ಸ್ವೀಕರಿಸಬಾರದೆಂದು ಅಲಂ ಪಾಷಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಪೂರ್ವಾನುಮತಿ ಪ್ರಶ್ನೆ ಇನ್ನೂ ಜೀವಂತವಿರುವುದರಿಂದ ಕೋರ್ಟ್ ಆಗಸ್ಟ್ 20 ರಂದು ನೀಡಬಹುದಾದ ಆದೇಶ ಮಹತ್ವ ಪಡೆದಿದೆ. ಅಷ್ಟರೊಳಗೆ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದರೆ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರ ಶೋಕಾಸ್ ನೋಟಿಸ್ ಖಂಡಿಸಿ ಚಾಮರಾಜನಗರದಲ್ಲಿ ಮಂಗಳವಾರ ಶ್ರಮಿಕ ವರ್ಗಗಳ ಒಕ್ಕೂಟ ಪ್ರತಿಭಟನೆ ನಡೆಸಿತು.
ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಭುಗಿಲೆದ್ದಿರುವ ಮುಡಾ ಹಗರಣ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ