ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

ಮುಡಾ ಹಗರಣದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯಗೆ ಮತ್ತೆಮತ್ತೆ ಸಂಕಷ್ಟ ಎದುರಾಗುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರಾಜ್ಯಪಾಲರ ಹೆಸರಿನಲ್ಲಿ ಅಕ್ರಮ ಪರಿತ್ಯಾಜನ ಪತ್ರ ನೋಂದಣಿ ಮಾಡಿಕೊಂಡಿರುವ ಬಗ್ಗೆ ಇದೀಗ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಕುರಿತು ‘ಟಿವಿ9’ ವರದಿಗಾರ ಪ್ರದೀಪ್ ನೀಡಿರುವ ವರದಿ ಇಲ್ಲಿದೆ.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
ಸಿದ್ದರಾಮಯ್ಯ
Follow us
|

Updated on: Aug 13, 2024 | 12:16 PM

ಬೆಂಗಳೂರು, ಆಗಸ್ಟ್ 13: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಎಂಬವರು ದೂರು ಸಲ್ಲಿಕೆ ಮಾಡಿದ್ದು, ರಾಜ್ಯಪಾಲರ ಹೆಸರಿನಲ್ಲಿ ಅಕ್ರಮ ಪರಿತ್ಯಾಜನ ಪತ್ರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಕೆಸಿ ಉಮೇಶ್ ಎಂಬವರು ಪರಿತ್ಯಾಜನ ಪತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ. 464ರ 3.16 ಎಕರೆ ಜಮೀನು ಸಂಬಂಧ ಪರಿತ್ಯಾಜನ ಪತ್ರ ನೋಂದಣಿ ಮಾಡಲಾಗಿದೆ. 25-11-2021ರಲ್ಲಿ ಅಕ್ರಮವಾಗಿ ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರ ನೋಂದಣಿಯಾಗಿದೆ. ಪಾರ್ವತಿಯವರು ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರ ಮಾಡಿಕೊಟ್ಟಿದ್ದಾರೆ. ಕೂಡಲೇ ಉಮೇಶ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಸ್ನೇಹಮಹಿ ಕೃಷ್ಣ ನೀಡಿರುವ ದೂರನ್ನು ರಾಜ್ಯಪಾಲರ ಕಚೇರಿ ಸ್ವೀಕರಿಸಿದೆ. ರಾಜ್ಯಪಾಲರ ಮುಂದಿನ ನಡೆ ಏನೆಂಬ ಬಗ್ಗೆ ಕುತೂಹಲ ಮೂಡಿದೆ.

ಸ್ನೇಹಮಹಿ ಕೃಷ್ಣ ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಿದ್ದು ಸಾಲು ಸಾಲು ಆರೋಪ ಮಾಡಿದ್ದಾರೆ. ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬೇಕೇ ಎಂಬ ಬಗ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಯಾಧೀಶ ಸಂತೋಷ್ ಗಜಾನನ ಭಟ್ ಇನ್ನಷ್ಟೇ ಆದೇಶ ಪ್ರಕಟಿಸಬೇಕಿದೆ.

ಇದನ್ನೂ ಓದಿ: ಮುಡಾ ಹಗರಣ: ಮೊದಲ ಬಾರಿ ಶಾಸಕರಾಗಿದ್ದಾಗಲೇ ಬದಲಿ ನಿವೇಶನ ಪಡೆದಿದ್ದರೇ ಸಿದ್ದರಾಮಯ್ಯ? ಮನವಿ ಪತ್ರ ವೈರಲ್

ಈ ಮಧ್ಯೆ, ಮೊದಲ ಬಾರಿ ಶಾಸಕರಾಗಿದ್ದಾಗಲೇ ಸಿದ್ದರಾಮಯ್ಯ ಮುಡಾದಿಂದ ಬದಲಿ ನಿವೇಶನ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಮೊದಲ ಬಾರಿ ಶಾಸಕರಾಗಿದ್ದಾಗಲೇ ಸಿಎಂ ಸಿದ್ದರಾಮಯ್ಯ ಬದಲಿ ನಿವೇಶನ ಪಡೆದಿದ್ದರು. ಅದಕ್ಕಾಗಿ ಮನವಿ ಮಾಡಿದ್ದರು ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವರದಿ: ಪ್ರದೀಪ್, ಟಿವಿ9

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ