ಬೆಂಗಳೂರು, (ಜುಲೈ 24): ಮುಂಗಾರ ಅಧಿವೇಶನ ಆರಂಭವಾಗುತ್ತಿದ್ದಂತೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಸ್ತಾಪಿಸಿ ಆಡಳಿತರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಸದನದಲ್ಲಿ ವಾಲ್ಮೀಕಿ ನಿಗಮ ಹಗರಣ ಸದ್ದು ಮಾಡಿತ್ತು. ಆದ್ರೆ, ಇಂದು (ಜುಲೈ 24) ಬಿಜೆಪಿ, ಸದನದಲ್ಲಿ ಮುಡಾ ಹಗರಣವನ್ನು ಕೈಗೆತ್ತಿಕೊಂಡಿದೆ. ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆಗೆ ಅವಕಾಶ ಕೊಡಿ ಎಂದು ಕೆಳಮನೆ ಮತ್ತು ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ. ಆದ್ರೆ, ಬಿಜೆಪಿ ಆಗ್ರಹಕ್ಕೆ ಒಪ್ಪದ ಸ್ಪೀಕರ್, ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆಗೆ ತೆಗೆದುಕೊಳ್ಳುವಂಥದ್ದು ಏನಿದೆ ಎಂದು ಪ್ರಶ್ನಿಸಿದ್ದು, ರಿಜೆಕ್ಟ್ ಮಾಡಿದನ್ನು ಮತ್ತೆ ಅವಕಾಶ ನೀಡಲ್ಲ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಬಿಜೆಪಿ, ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ಚರ್ಚೆಗೆ ಅವಕಾಶ ನೀಡಲು ಒಪ್ಪದ ಸ್ಪೀಕರ್ ನಡೆಯಿಂದ ಆಕ್ರೋಶಗೊಂಡ ಬಿಜೆಪಿ, ಜೆಡಿಎಸ್ ಸದಸ್ಯರು, ನೂರಾರು ಕೋಟಿ ಹಗರಣವಾಗಿದೆ, ಸಿಎಂ ಭಾಗಿಯಾಗಿದ್ದಾರೆ ಎಂದು ಪ್ರಸ್ತಾಪಿಸಿದರು. ಆದರೂ ಸಹ ಬಿಜೆಪಿ ಆಗ್ರಹಕ್ಕೆ ಮಣಿಯದ ಸ್ಪೀಕರ್, ನ್ಯಾಯಾಂಗ ತನಿಖೆ ನಡೆಯುತ್ತಿದೆ. ಅಲ್ಲಿ ಹೋಗಿ ದಾಖಲೆ ಕೊಡಿ ಎಂದು ಹೇಳಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು, ಅಲ್ಲಿಗೆ ಹೋಗಿ ದಾಖಲೆ ಕೊಡುವುದಾದರೆ ಸದನ ಏಕೆ ಬೇಕು ಎಂದು ಆಕ್ರೋಶ ಹೊರಹಾಕಿದರು. ಅಲ್ಲದೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ಘೋಷಣೆಗಳು ಮೊಳಗಿದವು. ಬಳಿಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪೋಸ್ಟರ್ ಗಳೊಂದಿಗೆ ಸದನದ ಬಾವಿಗೆ ಇಳಿದು ಧರಣಿ ಆರಂಭಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸ್ಪೀಕರ್, ಪೋಸ್ಟರ್ ತಂದರೆ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇದಕ್ಕೆ ಬಗ್ಗದ ವಿಪಕ್ಷಗಳ ಸದಸ್ಯರು ನಿಯಮಾವಳಿ ಪ್ರಕಾರ ಕ್ರಮಕ್ಕೆ ನಾವು ಸಿದ್ಧ ಎಂದಿದ್ದಾರೆ. ಅಲ್ಲದೇ ಖಾದರ್ ಸಾಹೇಬರು ಕೆಪಿಸಿಸಿ ಅಧ್ಯಕ್ಷರಾಗಲು ಲಾಯಕ್ ಎಂದ ವಿಪಕ್ಷ ನಾಯಕ ಅಶೋಕ್ ಗುಡುಗಿದ್ದು, ಸ್ಪೀಕರ್ ಗೆ ಕನ್ನಡ ಅರ್ಥ ಆಗಲ್ಲ, ತುಳುವಿನಲ್ಲಿ ಘೋಷಣೆ ಕೂಗಿ ಎಂದರು.
ಇದನ್ನೂ ಓದಿ: Assembly Session: ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗುತ್ತಿಲ್ಲವೆಂದು ಸದನದಲ್ಲಿ ಬಿಜೆಪಿ ನಾಯಕರ ಆಕ್ರೋಶ
ಇನ್ನು ಚರ್ಚೆಗೆ ಸ್ಪೀಕರ್ ಅವಕಾಶ ನೀಡದಿದ್ದರಿಂದ ರೊಚ್ಚಿಗೆದ್ದಿರುವ ಬಿಜೆಪಿ, ಜೆಡಿಎಸ್ ಸದಸ್ಯರು, ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದು, ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರು ಜಂಟಿ ಅಹೋರಾತ್ರಿ ಹೋರಾಟ ನಡೆಸಲಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಅಶೋಕ್, ಮೂಡ ಹಗರಣದಲ್ಲಿ ಸರ್ಕಾರ ಹೆದರಿ ಓಡಿ ಹೋಗಿದೆ. ಹೇಡಿಗಳಂತೆ ಸರ್ಕಾರದ ನಡೆದುಕೊಳ್ಳುತ್ತಿದೆ. 14 ಮೂಡ ಸೈಟ್ ನ್ಯಾಯವಾಗಿ ತೆಗೆದುಕೊಂಡಿದ್ದೆ ಎಂದು ಸಿಎಂ ಸದನದಲ್ಲಿ ಹೇಳಬೇಕು. ಕೇವಲ ಹೊರಗಡೆ ಸಿಎಂ ಹೇಳುವುದಲ್ಲ. ದಲಿತರ ಜಾಗವನ್ನ ಲೂಟಿ ಹೊಡೆಯುವ ಕೆಲಸ ಆಗಿದೆ. ಸಿದ್ದರಾಮಯ್ಯ ಡಿಸಿಎಂ, ಸಿಎಂ ಆಗಿದ್ದಾಗ ಮೂಡ ಹಗರಣ ಆಗಿದೆ. ದಲಿತರ ಜಮೀನು ಲೂಟಿ ಹೊಡೆದು ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ.
ಇಂತಹ ಹಗರಣ ಬಗ್ಗೆ ಧ್ವನಿ ಎತ್ತಲು ಅವಕಾಶ ಕೊಡುತ್ತಿಲ್ಲ. ಸ್ಪೀಕರ್ ಪೀಠಕ್ಕೆ ಅಗೌರವ ತೋರುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಸ್ಪೀಕರ್ ಮಾಡುತ್ತಿದ್ದಾರೆ. ಮೂಡ ಹಗರಣದ ಬಗ್ಗೆ ಮತನಾಡಿದ್ರೆ ಸಿಎಂ ಮಾನ ಮರ್ಯಾದೆ ಹೋಗುತ್ತೆ ಎಂದು ಸ್ಪೀಕರ್ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.