ಬೆಂಗಳೂರು, ಅಕ್ಟೋಬರ್ 1: ಮುಡಾ ಹಗರಣ ಸಂಬಂಧ ಒಂದೆಡೆ ಮೈಸೂರು ಲೋಕಾಯಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮತ್ತೊಂದೆಡೆ, ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮುಡಾ ನಿವೇಶನಗಳನ್ನು ವಾಪಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪತ್ರ ಬರೆದಿದ್ದಾರೆ. ಇದೀಗ ಇಡಿ ತನಿಖೆಯಲ್ಲಿ ಮೂರು ಅಂಶಗಳು ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.
ಮೊದಲನೆಯ ಅಂಶವೆಂದರೆ, ಇಡಿ ತನಿಖೆ ಮಾಡಬೇಕಿದ್ದರೆ ಮೊದಲಿಗೆ ಯಾವುದಾದರೂ ಒಂದು ತನಿಖಾ ಸಂಸ್ಥೆಯಲ್ಲಿ ಪ್ರಕರಣ ದಾಖಲಾಗಿರಬೇಕು. ಈಗ ಮೈಸೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಆಧಾರದಲ್ಲಿ ಇಡಿ ತನಿಖೆ ನಡೆಸಬಹುದಾಗಿದೆ. ಮೈಸೂರಿನಲ್ಲಿ ಬೇನಾಮಿ ಆಸ್ತಿ ಗಳಿಕೆ, ಭ್ರಷ್ಟಾಚಾರನಡೆದಿದೆ ಎಂಬ ಆರೋಪದ ಅಡಿಯಲ್ಲಿ ತನಿಖೆ ನಡೆಸುವ ಸಾಧ್ಯತೆ ಇದೆ.
ಎರಡನೇ ಅಂಶವೆಂದರೆ, ಮುಡಾದಲ್ಲಿದ್ದ 387 ಕೋಟಿ ರೂಪಾಯಿ ಹಣ ಬೇರೆ ಕ್ಷೇತ್ರಗಳ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ ಎಂಬ ಆರೋಪವಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಾಗಿದೆ. ಈಗಾಗಲೇ ಇಡಿ ಇಸಿಐಆರ್ ದಾಖಲಿಸಿದೆ. ವರುಣಾ, ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಪ್ರಭಾವ ಬಳಸಿ ಬಳಕೆ ಮಾಡಿದ ಆರೋಪ ಇದೆ. ಕಾನೂನು ಬಾಹಿರವಾಗಿ ಮುಡಾ ಹಣ ಬಳಕೆ ಮಾಡಲಾಗಿದೆ ಎಂಬ ಆರೋಪ ಇದ್ದು, ಇದರ ಬಗ್ಗೆಯೂ ತನಿಖೆ ಮಾಡುವ ಸಾಧ್ಯತೆ ಇದೆ.
2023ರ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಐಟಿ ದಾಳಿಯಾಗಿತ್ತು. ಆಗ ಉದ್ಯಮಿ ಹಾಗೂ ಗುತ್ತಿಗೆದಾರರ ಮನೆಗಳಲ್ಲಿ 40 ಕೋಟಿ ರೂಪಾಯಿಗೂ ಅಧಿಕ ಹಣ ಸಿಕ್ಕಿತ್ತು. ಅದು ಸಚಿವರೊಬ್ಬರಿಗೆ ಸೇರಿದ್ದು ಎನ್ನಲಾಗಿತ್ತು. ಮುಡಾಗೆ ಸಂಬಂಧಿಸಿದ ಹಣ ಎಂಬ ಗುಮಾನಿಯೂ ಇತ್ತು. ಇದಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ತನಿಖೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಮುಡಾ ಸೈಟ್ ವಾಪಸ್: ಸಂವಿಧಾನ ರಕ್ಷಿಸಲು ದಿಟ್ಟ ನಿರ್ಧಾರ ಕೈಗೊಂಡ ರಾಜ್ಯಪಾಲರಿಗೆ ಸಿಕ್ಕ ದೊಡ್ಡ ಜಯ ಎಂದ ಅಶೋಕ್
ಒಟ್ಟಿನಲ್ಲಿ ಈ ಎಲ್ಲ ಅಂಶಗಳು ಮುಡಾ ವಿಚಾರದಲ್ಲಿ ತನಿಖೆ ನಡೆಸಲಿರುವ ಇಡಿಗೆ ಮಹತ್ವದ್ದಾಗಲಿವೆ. ಸದ್ಯ ಲೋಕಾಯುಕ್ತ ತನಿಖೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಇಡಿ ಸಹ ತನಿಖೆ ಆರಂಭಿಸುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ