ಮರಳು ವ್ಯಾಪಾರಿಗಳ ಕಿತ್ತಾಟ, ಸಂಬಳ ಕೇಳಿದವನಿಗೇ ಚಾಕುವಿನಿಂದ ಇರಿದ ಪುರಸಭೆ ಮಾಜಿ ಅಧ್ಯಕ್ಷ

| Updated By: ಆಯೇಷಾ ಬಾನು

Updated on: Jul 04, 2021 | 7:19 AM

ಒಂದು ಕಡೆ ಅಕ್ರಮ ಮರಳು ಸಾಗಾಟಗಾರರ ಕಾಟ. ಮತ್ತೊಂದೆಡೆ ಸಕ್ರಮವಾಗಿ ವ್ಯಾಪಾರ ನಡೆಸುವವರೂ ಪರಸ್ಪರ ಕಿತ್ತಾಡಿಕೊಳ್ತಿದ್ದಾರೆ. ಹಾಸನದಲ್ಲಿ ಹೀಗೆ ಮರಳು ಸಾಗಾಟಗಾರರ ಕಿತ್ತಾಟದಿಂದ ಒಬ್ಬನಿಗೆ ಚಾಕು ಇರಿತವಾಗಿದೆ. ಹಣದ ವಿಚಾರಕ್ಕೆ ಪುರಸಭೆಯ ಮಾಜಿ ಅಧ್ಯಕ್ಷನೇ ಚಾಕುವಿನಿಂದ ಇರಿದು ಜೈಲುಪಾಲಾಗಿದ್ದಾನೆ. ಇರಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ನರಳಾಡ್ತಿದ್ದಾನೆ.

ಮರಳು ವ್ಯಾಪಾರಿಗಳ ಕಿತ್ತಾಟ, ಸಂಬಳ ಕೇಳಿದವನಿಗೇ ಚಾಕುವಿನಿಂದ ಇರಿದ ಪುರಸಭೆ ಮಾಜಿ ಅಧ್ಯಕ್ಷ
ಸಾಂದರ್ಭಿಕ ಚಿತ್ರ
Follow us on

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಈ ನಡುವೆ ಅಧಿಕೃತವಾಗಿ ಮರಳು ಱಂಪ್ಗೆ ಅನುಮತಿ ಪಡೆದು ಗಣಿಗಾರಿಕೆ ನಡೆಸ್ತಿದ್ದವರ ನಡುವೆಯ ಹಣಕಾಸು ವಿಚಾರದಲ್ಲಿ ಗಲಾಟೆ ನಡೆದಿದೆ. ರಸ್ತೆಯಲ್ಲಿ ಚೂರಿಯಿಂದ ಇರಿದು ಸ್ನೇಹಿತನ್ನೇ ಕೊಲ್ಲೋ ಯತ್ನ ಮಾಡಲಾಗಿದೆ.

ಸಕಲೇಶಪುರ ಪುರಸಭೆಯ ಮಾಜಿ ಅಧ್ಯಕ್ಷ ಮುಫೀಝ್ ತನ್ನ ಆಪ್ತರ ಜೊತೆಗೆ ಬಂದು ಬಾಳೆಗದ್ದೆಯ ವಾಸಿಂ ಎಂಬಾತನಿಗೆ ಇರಿದಿದ್ದಾನೆ. ಸದ್ಯ ವಾಸಿಂ ಹಾಸನ ಜಿಲ್ಲಾಸ್ಪತ್ರೆಯಲ್ಲಿ, ಸಾವು ಬದುಕಿನ ನಡುವೆ ಹೋರಾಡ್ತಿದ್ದಾನೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಮುಫೀಜ್ ಜೊತೆಗೆ ವಾಸಿಂ ಮರಳು ಗಣಿಗಾರಿಕೆ ನಡೆಸ್ತಿದ್ದ. ಈ ನಡುವೆ ವಾಸಿಂ ಹಾಗು ಮುಫೀಝ್ ನಡುವೆ ಗಲಾಟೆಯಾಗಿದೆ. ಮೂರು ತಿಂಗಳಿನಿಂದ ಮಾಡಿದ ಕೆಲಸಕ್ಕೆ ಹಣ ಕೊಡು ಎಂದು ವಾಸಿಂ, ಮುಫೀಝ್ ಗೆ ಆವಾಜ್ ಹಾಕಿದ್ದನಂತೆ. ಇದ್ರಿಂದ ಮುಫೀಜ್ ಕಡೆಯವರು ವಾಸಿಂ ಮೇಲೆ ಅಟ್ಯಾಕ್ ಮಾಡಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಜೊತೆಯಾಗಿಯೇ ಕೆಲಸ ಮಾಡುತ್ತಿದ್ದ ಇಬ್ಬರು ಗೆಳೆಯರ ನಡುವೆ ಕೆಲಸದ ಹಣದ ವಿಚಾರದಲ್ಲಿ ಆಗಿದ್ದ ಜಗಳ ತಾರಕಕ್ಕೇರಿದೆ. ಹಣ ಕೇಳಿಕೊಂಡು ಫೋನ್ ಮಾಡಿದ್ದ ವಾಸಿಂ, ಮುಫೀಝ್ಗೆ ನಿಂದಿಸಿದ್ದ ಎನ್ನಲಾಗಿದೆ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು ತನ್ನ ಗೆಳೆಯರ ಜೊತೆಗೆ ವಾಸಿಂ ಮನೆ ಬಳಿ ಬಂದಿದ್ದ ಮುಫೀಝ್ ಕೊಲೆ ಯತ್ನಮಾಡಿದ್ದಾನೆ ಅನ್ನೋದು ಕುಟುಂಬಸ್ಥರ ಆರೋಪ. ಚಾಕುವಿನಿಂದ ಹೊಟ್ಟೆ, ಎದೆ, ಕುತ್ತಿಗೆಗೆ ಇರಿದಿದ್ದು ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಜೀವ ಹೋಗುತ್ತಿತ್ತು ಅಂತಾ ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಮರಳು ವಿಚಾರಕ್ಕೆ ಶುರುವಾದ ಸಣ್ಣ ಜಗಳವೊಂದು ಚೂರಿ ಇರಿತ, ಹತ್ಯೆ ಯತ್ನದವರೆಗೆ ಹೋಗಿದೆ. ಮರಳು ವ್ಯಾಪಾರಿಗಳ ಈ ಹಾದಿಬೀದಿ ಕಿತ್ತಾಟದಿಂದ ಸಾರ್ವಜನಿಕರು ಭೀತಿಯಿಂದ ಓಡಾಡುವಂತಾಗಿದೆ.

ಇದನ್ನೂ ಓದಿ: ಆಸ್ತಿಗಾಗಿ ತಾಯಿಯ ಕತ್ತು ಸೀಳಿದ ಮಗ: ಜೊತೆಗಿದ್ದ ನಾದಿನಿ ಮತ್ತು ತಮ್ಮನ ಮಗನಿಗೂ ಚಾಕು ಇರಿತ