ಆಸ್ತಿಗಾಗಿ ತಾಯಿಯ ಕತ್ತು ಸೀಳಿದ ಮಗ: ಜೊತೆಗಿದ್ದ ನಾದಿನಿ ಮತ್ತು ತಮ್ಮನ ಮಗನಿಗೂ ಚಾಕು ಇರಿತ
ಕ್ಯಾಬ್ ಚಾಲಕನಾಗಿದ್ದ ಗೋಪಿಕೃಷ್ಣ ಲಾಕ್ ಡೌನ್ನಲ್ಲಿ ಸಾಕಷ್ಟು ಸಾಲಮಾಡಿಕೊಂಡಿದ್ದ, ಈ ಹಿನ್ನೆಲೆ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದು, ಡಾಲರ್ಸ್ ಕಾಲೋನಿಯ ಎರಡು ಅಂತಸ್ತಿನ ಮನೆಯನ್ನು ಭಾಗ ಮಾಡಿ ಪಾಲು ಕೊಡಿ ಎಂದು ಗೋಪಿ ಪೀಡಿಸುತ್ತಿದ್ದ.
ಬೆಂಗಳೂರು: ಆಸ್ತಿಗಾಗಿ ಹೆತ್ತ ತಾಯಿಯ ಕುತ್ತಿಗೆಯನ್ನು ಸೀಳಿದ್ದು, ತಾಯಿಯ ಜೊತೆಗಿದ್ದ ನಾದಿನಿ ಮತ್ತು ತಮ್ಮನ ಮಗನಿಗೂ ಚಾಕು ಇರಿದ ಘಟನೆ ಬೆಂಗಳೂರಿನ ಮಡಿವಾಳದ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ.
ಗೋಪಿಕೃಷ್ಣ ಎಂಬಾತ ಈ ಕೃತ್ಯ ಎಸಗಿದ್ದು, ತಂದೆ ಆಸ್ತಿಯಲ್ಲಿ ಪಾಲು ಕೇಳಿ ಪ್ರತಿನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದ. ಸ್ವಲ್ಪ ದಿನ ಇರು ಆಸ್ತಿ ಪಾಲು ಮಾಡುವ ಎಂದು ತಾಯಿ ಹೇಳಿದ್ದರೂ ಅದನ್ನು ಕಿವಿಗೆ ಹಾಕಿಕೊಳ್ಳದ ಗೋಪಿ ತನ್ನ ತಾಯಿ ಗುಣಮ್ಮ, ನಾದಿನಿ ಗಿರಿಜ ಹಾಗೂ ಮನೆಯಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಕಂದಮ್ಮಗೆ ಚಾಕು ಇರಿದಿದ್ದಾನೆ.
ಕ್ಯಾಬ್ ಚಾಲಕನಾಗಿದ್ದ ಗೋಪಿಕೃಷ್ಣ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸಾಲ ಮಾಡಿಕೊಂಡಿದ್ದ, ಈ ಹಿನ್ನೆಲೆ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದು, ಡಾಲರ್ಸ್ ಕಾಲೋನಿಯ ಎರಡು ಅಂತಸ್ತಿನ ಮನೆಯನ್ನು ಭಾಗ ಮಾಡಿ ಪಾಲು ಕೊಡಿ ಎಂದು ಗೋಪಿ ಪೀಡಿಸುತ್ತಿದ್ದ. ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಮಡಿವಾಳ ಮಾರ್ಕೇಟ್ನಲ್ಲಿ 55 ರೂಪಾಯಿಗೆ ಚಾಕು ತಂದಿದ್ದ ಗೋಪಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದು, ಅದೃಷ್ಟವಶಾತ್ ಗಾಯಗೊಂಡ ಎಲ್ಲರೂ ಬದುಕುಳಿದಿದ್ದಾರೆ. ಸದ್ಯ ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಆಸ್ತಿಗೋಸ್ಕರ ಅಮ್ಮನನ್ನ ಕೊಲ್ಲಲು ಸುಪಾರಿ ಕೊಟ್ಟ ಪಾಪಿ ಮಗ.. ಪುತ್ರನಿಗೆ ತಂದೆ ಸಾಥ್