ಬೆಂಗಳೂರು: ತುಂಗಭದ್ರಾ ಜಲಾಶಯ ಭರ್ತಿ (Tungabhadra River) ಹಿನ್ನಲೆ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕಂಪ್ಲಿಯ ಕೋಟೆ ಪ್ರದೇಶದಲ್ಲಿನ ಹೊಳೆ ಆಂಜನೇಯ ದೇವಸ್ಥಾನ ಜಲಾವೃತವಾಗಿದ್ದು, ದೇವಸ್ಥಾನದ ಆವರಣದೊಳಗೆಲ್ಲಾ ನೀರು ನುಗ್ಗಿದೆ. ಕಂಪ್ಲಿಯ ಕೋಟೆ ಪ್ರದೇಶದ ಹಲವು ಮನೆಗಳು ಸಹ ಜಲಾವೃತವಾಗಿವೆ. ತುಂಗಭದ್ರಾ ಡ್ಯಾಂನಿಂದ ಹರಿಬಿಟ್ಟ ಅಪಾರ ನೀರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ. ಒಳ ಹರಿವು ಪ್ರಮಾಣದಲ್ಲಿ ಮತ್ತೆ ಭಾರಿ ಏರಿಕೆಯಾಗಿದ್ದು, ಒಳಹರಿವು 89,205 ಕ್ಯೂಸೆಕ್. 19 ಗೇಟ್ಗಳ ಮೂಲಕ 89,205 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಗದಗ ಜಿಲ್ಲೆಯ ತುಂಗಭದ್ರಾ ನದಿ ಪಾತ್ರದ ಗ್ರಾಮಗಳ ಜನರಿಗೆ ಆತಂಕ ಹೆಚ್ಚಿದೆ. ಅದೇ ರೀತಿಯಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಹರಿಹರ ತಾಲೂಕಿನ ಗ್ರಾಮಗಳು ಪ್ರವಾಹದ ಭೀತಿಯಲ್ಲಿದ್ದು, ಹತ್ತು ಮೀಟರ್ಗೂ ಹೆಚ್ಚು ತುಂಗಭದ್ರ ನೀರು, ಹೊನ್ನಾಳಿಯ ಪಟ್ಟಣದ ಬಾಲರಾಜ್ ಘಾಟ್ ಹಾಗೂ ಮೇದಾರ ಗಲ್ಲಿಗೆ ನುಗ್ಗುವ ಭೀತಿ ಎದುರಾಗಿದೆ. ಶಾಸಕ ಎಂ.ಪಿ.ರೇಣುಕಾಚಾರ್ಯಗೆ ನದಿಪಾತ್ರದ ಜನ ಹಿಡಿ ಶಾಪ ಹಾಕಿದ್ದು, ಪ್ರವಾಹ ಬಂದಾಗೊಮ್ಮೆ ಬಂದು ಭೇಟಿ ಕೊಡುವುದನ್ನ ಬಿಟ್ಟರೇ ಬೇರೆ ಎನು ಮಾಡಿಲ್ಲ. ಸ್ಥಳಾಂತರ ಮಾಡಿದ್ರೆ ಸೈಟ್ ಮನೆ ಕೊಡಬೇಕು. ಆದರೆ ಕೊಟ್ಟಿದ್ದೇವೆ ಎಂದು ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ; ಹವಾಮಾನ ಇಲಾಖೆ
ತುಂಗಭದ್ರಾ ಜಲಾಶಯಕ್ಕೆ ಬಾಗೀನ ಅರ್ಪಣೆ
ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನಲೆ ನೀರಾವರಿ ನಿಗಮದ ಅಧಿಕಾರಿಗಳಿಂದ ಜಲಾಯಶದಲ್ಲಿ ಬಾಗೀನ ಅರ್ಪಣೆ ಮಾಡಲಾಗಿದೆ. ಬಾಗೀನ ಅರ್ಪಣೆಗೂ ಮುನ್ನ ಗಂಗಾಪೂಜೆ, ಮಹಾಗಣಪತಿ ಪೂಜೆ ಮಾಡಲಾಯಿತು. ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್,ಸಂಸದ ಸಂಗಣ್ಣ ಕರಡಿ, ಅಧಿಕಾರಿಗಳು ಭಾಗಿಯಾಗಿದ್ದರು.
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ:
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಮಖಂಡಿ, ರಬಕವಿ-ಬನಹಟ್ಟಿ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಕೃಷ್ಣಾನದಿ ತೀರದ ಗ್ರಾಮಸ್ಥರು ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ 1 ಲಕ್ಷ 13 ಸಾವಿರ ಕ್ಯೂಸೆಕ್ ಒಳಹರಿವಿದ್ದು, 1 ಲಕ್ಷ 12 ಸಾವಿರ ಕ್ಯೂಸೆಕ್ ಹೊರಹರಿವಿದೆ. ಗದಗ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ತುಂತುರು ಮಳೆಯಾಗುತ್ತಿದ್ದು, ನಿರಂತರ ಜಿಟಿ ಜಿಟಿ ಮಳೆಗೆ ಹೆಸರು ಬೆಳೆ ಹಾಳಾಗುವ ಆತಂಕ ಉಂಟಾಗಿದೆ. ಜಿಲ್ಲೆಯಲ್ಲಿ ಬೆಳೆದ ಲಕ್ಷಾಂತರ ಹೆಕ್ಟೇರ್ ಹೆಸರು ಬೆಳೆ ನಿರಂತರ ಮಳೆಗೆ ಹಳದಿ ಬಣ್ಣಕ್ಕೆ ತಿರುಗುತ್ತಿದ್ದು,
ಸತತ ಮಳೆಯಿಂದಾಗಿ ರೈತರಲ್ಲಿ ಆತಂಕ ಹೆಚ್ಚಿದೆ.
ಇದನ್ನೂ ಓದಿ; Karnataka Dams Water Level: ಕೆಆರ್ಎಸ್ ಶೇ.94ರಷ್ಟು ಭರ್ತಿ, ರಾಜ್ಯದ ಉಳಿದ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿ
ಮಳೆ ನಿಂತರೂ ನಿಲ್ಲದ ಪ್ರವಾಹ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತರೂ ಪ್ರವಾಹ ನಿಂತ್ತಿಲ್ಲ. ಮೊನ್ನೆ ಸುರಿದ ಮಳೆಗೆ ಸಾಲ್ಕೊಡ ಹಳ್ಳ ತುಂಬಿ ಹರಿಯುತ್ತಿದೆ. ಸಾಲ್ಕೊಡ ಗ್ರಾಮಕ್ಕೆ ಸೇತುವೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಅಡಕೆ ಸಂಕ ಕಟ್ಟಿಕೊಂಡು ಸ್ಥಳೀಯರು ಹಳ್ಳ ದಾಟುತ್ತಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಕುಸಿದು ಬಿದಿದ್ದು, ಅದೃಷ್ಟವಶಾತ್ ಕುಟುಂಬಸ್ಥರು ಪಾರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅವೇಡಾ ಗ್ರಾಮಪಂಚಾಯತಿ ವ್ಯಾಪ್ತಿಯ ಅಂಬೇಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದ ಹಕ್ಕಿಮಕ್ಕಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು, ಅರ್ಧ ಎಕರೆ ಕಾಫಿ ತೋಟ ನಾಶವಾಗಿದೆ. ಭೂಕುಸಿತ ಹಿನ್ನೆಲೆ ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿದೆ. ಇನ್ನೂ ಧಾರಾಕಾರ ಮಳೆಗೆ ಇತಿಹಾಸ ಪ್ರಸಿದ್ಧ ಅಯ್ಯನಕೆರೆ ಕೋಡಿ ಬಿದ್ದಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು, ವರುಣನ ಅಬ್ಬರದಿಂದ ಜುಲೈನಲ್ಲೇ ಅಯ್ಯನಕೆರೆ ಕೋಡಿ ಬಿದ್ದಿದೆ. ಕೋಡಿ ಬಿದ್ದ ಕೆರೆಯನ್ನ ನೋಡಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತ ಮೇಲೆ ರೈತರ ಕಣ್ಣೀರು!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತ ಮೇಲೆ ರೈತರ ಕಣ್ಣೀರು ಹಾಕುವಂತಹ ಪರಿಸ್ಥಿತಿ ಉಂಟಾಗಿದೆ. ನೂರಾರು ಎಕರೆ ಕೃಷಿ ಭೂಮಿ ನಾಶವಾಗಿದ್ದು, ಸಾವಿರಾರು ಎಕರೆ ತೋಟಕ್ಕೆ ಹಾನಿಯಾಗಿದೆ. ದಕ್ಷಿಣ ಕನ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕೆಮ್ರಾಲ್ ಪಂಜ ಗ್ರಾಮದಲ್ಲಿ ಭಾರೀ ಹಾನಿ ಸಂಭವಿಸಿದೆ. ನಂದಿನ ನದಿಯ ನೀರು ನುಗ್ಗಿ 300 ಎಕರೆ ಕೃಷಿ ನಾಶವಾಗಿದ್ದು, ಪಂಜ, ಕೊಯ್ಕುಡೆ, ಕೆಮ್ರಾಲ್ ಭಾಗದ ಭತ್ತದ ಗದ್ದೆಯಲ್ಲಿ ಇನ್ನೂ ಇಳಿಯದ ನೆರೆ. ಭಾರೀ ಪ್ರಮಾಣದ ಭತ್ತ ನಾಶವಾಗಿ ರೈತರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಿಕೆ, ತೆಂಗು ಮತ್ತು ಬಾಳೆ ತೋಟಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ.
ಕೃಷಿಯನ್ನೇ ನಂಬಿಕೊಂಡು ಬದುಕ್ತಿರೋ ಕುಟುಂಬಗಳು ಅಕ್ಷರಶಃ ಕಂಗಾಲಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 8 ದಿನಗಳ ಕಾಲ ನೀರು ನಿಂತು ಹಾನಿಯಾಗಿದೆ.