ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ದೂರಿನಲ್ಲಿವೆ ಆರೋಪಗಳ ಸುರಿಮಳೆ: ಇಲ್ಲಿದೆ ಸಂಪೂರ್ಣ ಮಾಹಿತಿ

| Updated By: ಗಣಪತಿ ಶರ್ಮ

Updated on: Sep 20, 2024 | 3:03 PM

ಜಾತಿ ನಿಂದನೆ ಹಾಗೂ ಬೆದರಿಕೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಬಿಜೆಪಿ ಶಾಸಕ ಮುಮನಿರತ್ನಗೆ ಇದೀಗ ಮತ್ತೊಂದು ಕೇಸ್​ ಉರುಳಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದಾರೆ. ಮುನಿರತ್ನ ವಿರುದ್ಧ ಸಂತ್ರಸ್ತೆ ನೀಡಿದ ದೂರಿನಲ್ಲಿ ಸಾಲು ಸಾಲು ಆರೋಪಗಳ ಸುರಿಮಳೆಗೈಯಲಾಗಿದ್ದು, ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ದೂರಿನಲ್ಲಿವೆ ಆರೋಪಗಳ ಸುರಿಮಳೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಶಾಸಕ ಮುನಿರತ್ನರನ್ನು ಬಂಧಿಸಿ ಕರೆದೊಯ್ಯುತ್ತಿರುವ ಪೊಲೀಸರು
Follow us on

ಬೆಂಗಳೂರು, ಸೆಪ್ಟೆಂಬರ್ 20: ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದನೆ ಹಾಗೂ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿ ಇಂದು ಬಿಡುಗಡೆಯಾಗಿದ್ದರು. ಆದರೆ, ಅಷ್ಟರಲ್ಲೇ ಅತ್ಯಾಚಾರ ಆರೋಪದಲ್ಲಿ ಅವರನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ಗುರುವಾರವಷ್ಟೇ ಸಂತ್ರಸ್ತೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ದೂರು ನೀಡಿದ್ದರು. ಸಂತ್ರಸ್ತೆಯ ದೂರಿನ ಮೇಲೆ ಮುನಿರತ್ನ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕಗ್ಗಲೀಪುರದಲ್ಲಿ ಮುನಿರತ್ನಗೆ ವೈದ್ಯಕೀಯ ಪರೀಕ್ಷೆ

ಅತ್ಯಾಚಾರ ಆರೋಪ ಕೇಸ್​ನಲ್ಲಿ ಬಂಧನಕ್ಕೊಳಗಾಗಿರುವ ಮುನಿರತ್ನಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಕಗ್ಗಲೀಪುರ ಠಾಣೆ ಪಕ್ಕದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಲಾಯಿತು. ಇನ್ನು ಬೆಂಗಳೂರಿನ 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್​ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಕೇಳಲು ಕಗ್ಗಲೀಪುರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಮುನಿರತ್ನ ವಿರುದ್ಧ ಅಟ್ರಾಸಿಟಿ ಕೇಸ್​ ದುರ್ಬಳಕೆ ಆರೋಪ

ಬಿಜೆಪಿ ಶಾಸಕ ಮುನಿರತ್ನಗೆ ಇದೀಗ ಸಾಲು ಸಾಲು ಕೇಸ್​ಗಳೇ ಸಂಕಷ್ಟ ತಂದೊಡ್ಡಿವೆ. ಈ ಹಿಂದೆ ತಮ್ಮ ಮೇಲೆ ಯಾವುದಾದರೂ ಆರೋಪ ಬಂದ್ರೆ ಅಟ್ರಾಸಿಟಿ ಅಸ್ತ್ರವನ್ನೇ ಪ್ರಯೋಗ ಮಾಡ್ತಿದ್ದರು ಎಂಬ ಮತ್ತೊಂದು ಸಂಗತಿ ಬಯಲಾಗಿದೆ. ಅಟ್ರಾಸಿಟಿ ಕೇಸ್​ಗಳನ್ನೇ ದಾಳವನ್ನಾಗಿ ಮಾಡಿ, ಹಣ ಹಾಗೂ ಪ್ರಭಾವ ಬಳಸಿ ವಿರೋಧಿಗಳ ಹಣಿಯುತ್ತಿದ್ದ ಆರೋಪವೂ ಕೇಳಿ ಬಂದಿದೆ. ತಮ್ಮ ಕ್ಷೇತ್ರವಾಗಿರೋ ಆರ್​.ಆರ್​.ನಗರದಲ್ಲೇ ಹಲವರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರಂತೆ. ಇದೀಗ ಮುನಿರತ್ನ ಅಟ್ರಾಸಿಟಿ ಅಸ್ತ್ರವೇ ಸಂಕಷ್ಟ ತಂದಿಟ್ಟಿದೆ.

ರಾಜಕೀಯ ಎದುರಾಳಿಗಳನ್ನ ಹಣಿಯಲು ಹನಿಟ್ರ್ಯಾಪ್ ತಂತ್ರ

ಶಾಸಕ ಮುನಿರತ್ನ ಮೇಲೆ ಮತ್ತೊಂದು ಭಯಾನಕ ಆರೋಪವೇ ಕೇಳಿ ಬಂದಿದೆ. ರಾಜಕೀಯ ವಿರೋಧಿಗಳನ್ನ ಹಣಿಯೋಕೆ ಹನಿಟ್ರ್ಯಾಪ್​ ತಂತ್ರ ಮಾಡಿರೋದು ಗೊತ್ತಾಗಿದೆ. ಇನ್ಸ್​ಪೆಕ್ಟರ್​ಗಳು, ಸ್ಥಳೀಯರ ಜನಪ್ರತಿನಿಧಿಗಳು, ಕಾರ್ಪೊರೇಟರ್​ಗಳಿಗೂ ಗಾಳ ಹಾಕುತ್ತಿದ್ದರಂತೆ. ಮತ್ತೊಂದು ಶಾಕಿಂಗ್ ವಿಚಾರ ಎಂದರೆ, ಹೆಚ್ಐವಿ ಸೋಂಕಿತರನ್ನೇ ಕಳುಹಿಸಿ ಹನಿಟ್ರ್ಯಾಪ್ ಮಾಡುತ್ತಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಮುನಿರತ್ನ ಬಳಿ ಹಲವರ ಖಾಸಗಿ ವಿಡಿಯೋ ಇದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಕ್ಕಲಿಗ ಸಮುದಾಯದ ನಿಯೋಗದಿಂದ ಸಿಎಂ ಭೇಟಿ

ಪ್ರಕರಣ ರಾಜಕೀಯವಾಗಿಯೂ ತಿರುವು ಪಡೆದುಕೊಂಡಿದೆ. ಮತ್ತೆ ಸಿಎಂ ಸಿದ್ದರಾಮಯ್ಯರನ್ನ ಒಕ್ಕಲಿಗ ಸಮುದಾಯದ ನಾಯಕರು ಭೇಟಿ ಮಾಡಿದ್ದಾರೆ. ಗುರುವಾರ ಡಿಸಿಎಂ ಸೂಚನೆಯಂತೆ ರಾತ್ರಿ ಒಕ್ಕಲಿಗ ನಾಯಕರು ಸಭೆ ನಡೆಸಿದರು. ಇದರಲ್ಲಿ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಸಹ ಭಾಗಿಯಾಗಿದ್ದರು. ಇಂದು ಸಿಎಂ ಭೇಟಿ ಮಾಡಿರುವ ಒಕ್ಕಲಿಗ ಸಚಿವರು ಹಾಗೂ ಶಾಸಕರುಗಳು ಎಸ್​ಐಟಿ ತನಿಖೆಗೆ ಆಗ್ರಹ ಮಾಡಿದ್ದಾರೆ.ಅಟ್ರಾಸಿಟಿ ಕೇಸ್​ ದುರ್ಬಳಕೆ ಸಂಬಂಧವೂ ತನಿಖೆಗೆ ಮನವಿ ಮಾಡಿದ್ದಾರೆ. ರಾಜ್ಯಪಾಲರ ಅಂಗಳಕ್ಕೂ ತೆಗೆದುಕೊಂಡು ಹೋಗೋಕೆ ನಿರ್ಧಾರ ಮಾಡಲಾಗಿದೆ.

ಮುನಿರತ್ನ ವಿರುದ್ಧದ ಆರೋಪಗಳ ಹೈಲೈಟ್ಸ್

  • ಸಂತ್ರಸ್ತೆ ಮೇಲೆ 2020 ರಿಂದ 2022ರ ಅವಧಿಯಲ್ಲಿ ಅತ್ಯಾಚಾರ.
  • ಅತ್ಯಾಚಾರದ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್​ಮೇಲ್ ಹಾಗೂ ಬೆದರಿಕೆ.
  • ಸಂತ್ರಸ್ತೆಯನ್ನು ಬಲವಂತವಾಗಿ ಬೆದರಿಸಿ ಬಳಸಿಕೊಂಡು ರಾಜಕೀಯವ ವಿರೋಧಿಗಳ ಹನಿಟ್ರ್ಯಾಪ್.
  • ಎಚ್​ಐವಿ ಸೋಂಕಿತರನ್ನು ಬಳಸಿಕೊಂಡು ಹನಿಟ್ರ್ಯಾಪ್.

ಇದನ್ನೂ ಓದಿ: ಮುನಿರತ್ನ ಬಳಿ ಇದೆ ಹಲವರ ಖಾಸಗಿ ವಿಡಿಯೋ, ಎದುರಾಳಿಗಳ ಹಣಿಯಲು ಬಳಕೆ: ದೂರಿನಲ್ಲಿ ಉಲ್ಲೇಖ

ಒಟ್ಟಾರೆಯಾಗಿ, ಜಾತಿ ನಿಂದನೆ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರ ಬಂದಿದ್ದ ಮುನಿರತ್ನಗೆ ಇದೀಗ ಸಾಲು ಸಾಲು ಕೇಸ್​ಗಳು ಸಂಕಷ್ಟ ತಂದಿಟ್ಟಿದೆ. ಅತ್ಯಾಚಾರ ಕೇಸ್​ನಲ್ಲಿ ಮತ್ತೆ ಜೈಲುಪಾಲಾಗ್ತಾರಾ ಅಥವಾ ಅವರನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ಒಪ್ಪಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ