ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಯ್ಕೆಗೆ ವಿರೋಧ: ಹೈಕೋರ್ಟ್​​ಗೆ ಮತ್ತೆರಡು ಪಿಐಎಲ್‌ ಸಲ್ಲಿಕೆ

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆ ವಿರುದ್ಧ ಹೈಕೋರ್ಟ್‌ನಲ್ಲಿ ಮತ್ತೆರಡು ಪಿಐಎಲ್ ಸಲ್ಲಿಕೆಯಾಗಿದ್ದು, ಒಟ್ಟು ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದಂತಾಗಿದೆ. ಹಿಂದೂ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಈ ಆಯ್ಕೆಯನ್ನು ವಿರೋಧಿಸಿದ್ದಾರೆ. ಅರ್ಜಿದಾರರು ದಸರಾ ಉದ್ಘಾಟನೆಯು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಯ್ಕೆಗೆ ವಿರೋಧ: ಹೈಕೋರ್ಟ್​​ಗೆ ಮತ್ತೆರಡು ಪಿಐಎಲ್‌ ಸಲ್ಲಿಕೆ
ಬಾನು ಮುಷ್ತಾಕ್‌ & ಹೈಕೋರ್ಟ್‌

Updated on: Sep 11, 2025 | 9:39 AM

ಬೆಂಗಳೂರು, ಸೆಪ್ಟೆಂಬರ್ 11: ರಾಜ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟದ ಸದ್ದುಗದ್ದಲ ಜೋರಾಗಿದೆ. ಇದರ ನಡುವೆ ಮೈಸೂರು ದಸರಾ (Dasara) ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ (Banu Mushtaq) ಆಯ್ಕೆಗೆ ವಿರೋಧ ನಿಲ್ಲುವಂತೆ ಕಾಣಿಸುತ್ತಿಲ್ಲ. 2 ದಿನಗಳ ಹಿಂದಷ್ಟೇ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಹಿಂದೂಸಂಘಟನೆಗಳು ಚಾಮುಂಡಿ ಚಲೋ ನಡೆಸಿದ್ದವು. ಮತ್ತೊಂದೆಡೆ, ದಲಿತ ಸಂಘಟನೆಗಳು ಬಾನು ಮುಷ್ತಾಕ್ ಬೆಂಬಲಿಸಿ ಹೋರಾಟ ಮಾಡಿದ್ದವು. ಇದೀಗ ಕಾನೂನು ಹೋರಾಟ ಕೂಡ ಜೋರಾಗುತ್ತಿದೆ.

ನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್‌ ಸಿಂಹ ಈಗಾಗಲೇ ಹೈಕೋರ್ಟ್‌ ಮೆಟ್ಟಿಲೇರಿರುವುದು ಎಲ್ಲರಿಗೂ ತಿಳಿದಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಹೈಕೋರ್ಟ್‌ನಲ್ಲಿ ಮತ್ತೆರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ.

ಹಿಂದೂ ಅಲ್ಲದ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರ ವಾಪಸ್‌ ಪಡೆಯಲು ಸರಕಾರಕ್ಕೆ ನಿರ್ದೇಶನ ನೀಡಬೇಕು. ಅದೇ ರೀತಿ ದಸರಾ ಉದ್ಘಾಟನೆಯು ಹಿಂದೂ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗವೆಂದು ಘೋಷಿಸಿ ಅದನ್ನು ಹಿಂದೂ ಗಣ್ಯರಿಂದ ಉದ್ಘಾಟಿಸಬೇಕು. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಹಿಂದೂ ಆಗಮಿಕ ಪದ್ಧತಿ ಪ್ರಕಾರವೇ ಕಟ್ಟುನಿಟ್ಟಾಗಿ ದಸರಾ ಉದ್ಘಾಟನೆ ನೆರವೇರಿಸಲು ನಿರ್ದೇಶನ ನೀಡಬೇಕು ಎಂದು ಬೆಂಗಳೂರಿನ ನಿವಾಸಿ ಎಚ್‌.ಎಸ್‌.ಗೌರವ್‌ ಕೋರಿದ್ದಾರೆ.

ಬೆಂಗಳೂರಿನ ಉದ್ಯಮಿ ಟಿ.ಗಿರೀಶ್‌ ಕುಮಾರ್‌ ಹಾಗೂ ಅಭಿನವ ಭಾರತ್‌ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್‌.ಸೌಮ್ಯ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳು ವಿಚಾರಣೆಗೆ ಬರಬೇಕಿದೆ.

ಇದನ್ನೂ ಓದಿ: ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ಬಿಜೆಪಿ, ದಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಾಮುಂಡಿತಾಯಿಗೆ ಸಿದ್ದರಾಮಯ್ಯ ಅಪಮಾನ ಮಾಡಲು ಹೊರಟಿದ್ದಾರೆ ಎಂದು ಪ್ರತಿಪಕ್ಷ ಆರ್.ಅಶೋಕ್ ಕಿಡಿಕಾರಿದರೆ, ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದೇ ಆದರೆ ಅರಿಶಿಣ, ಕುಂಕುಮ, ಹೂವು ತೊಟ್ಟು ದೇವಿಯ ಪೂಜೆ ನೆರವೇರಿಸಲಿ ಎಂದು ಜೆಡಿಎಸ್ ಶಾಸಕ ಎಂ.ಮಂಜು ಹೇಳಿದ್ದಾರೆ.

ಅದೇನೇ ಇರಲಿ, ಬಾನು ಮುಷ್ತಾಕ್‌ರ ಆಯ್ಕೆ ವಿರೋಧಿಸಿ ಕೋರ್ಟ್‌ಗೆ ಒಟ್ಟು 3 ಅರ್ಜಿಗಳು ಸಲ್ಲಿಕೆಯಾಗಿವೆ. ಕೋರ್ಟ್ ಈ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡುತ್ತಾ ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 am, Thu, 11 September 25