ಮೈಸೂರು ಜಿಲ್ಲೆಯ ಆರೋಗ್ಯ ಸಿಬ್ಬಂದಿಗೆ ಏಪ್ರಿಲ್ 30ರವರೆಗೆ ಎಲ್ಲಾ ರಜೆ ರದ್ದು; ಕೆಲಸದ ಸ್ಥಳದಲ್ಲೇ ಊಟ, ತಿಂಡಿ
ಪ್ರತಿ ಸಿಬ್ಬಂದಿಯೂ ಸ್ವಯಂಪ್ರೇರಿತವಾಗಿ ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕು. ಅತ್ಯಂತ ಅನಿವಾರ್ಯತೆ ಇದ್ದರೆ ಮಾತ್ರ ರಜೆ ನೀಡಲಾಗುತ್ತದೆ. ಸುಖಾಸುಮ್ಮನೆ ಯಾವ ಸಿಬ್ಬಂದಿಗೂ ರಜೆ ನೀಡಲಾಗುವುದಿಲ್ಲ ಎಂದು ಮೈಸೂರಿನ ಆರೋಗ್ಯ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.
ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿರುವ ಕಾರಣ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಏಪ್ರಿಲ್ 30ರವರೆಗೆ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್, ಸರ್ಕಾರದ ನೂತನ ಆದೇಶದನ್ವಯ ಎಲ್ಲಾ ಆರೋಗ್ಯ ಸಿಬ್ಬಂದಿಗಳೂ ಕೆಲಸ ಮಾಡಲು ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಊಟದ ವಿರಾಮವನ್ನು ಸಹ ಪಡೆಯುವಂತಿಲ್ಲ. ತಮ್ಮ ತಮ್ಮ ಕಚೇರಿ ಮತ್ತು ಕೆಲಸದ ಸ್ಥಳಗಳಲ್ಲೇ ಊಟ, ತಿಂಡಿ ಸೇವಿಸಿ ಕರ್ತವ್ಯದಲ್ಲಿ ನಿರತರಾಗಬೇಕು ಎಂದು ಹೊಸ ಆದೇಶದಲ್ಲಿ ಸೂಚಿಸಲಾಗಿದೆ.
ಪ್ರತಿಯೊಬ್ಬ ಸಿಬ್ಬಂದಿಯೂ ಸ್ವಯಂಪ್ರೇರಿತವಾಗಿ ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕು. ಅತ್ಯಂತ ಅನಿವಾರ್ಯತೆ ಇದ್ದರೆ ಮಾತ್ರ ರಜೆ ನೀಡಲಾಗುತ್ತದೆ. ಸುಖಾಸುಮ್ಮನೆ ಯಾವ ಸಿಬ್ಬಂದಿಗೂ ರಜೆ ನೀಡಲಾಗುವುದಿಲ್ಲ. ದಿನೇ ದಿನೇ ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ತಪಾಸಣೆಯ ಪ್ರಮಾಣವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಆರೋಗ್ಯ ಇಲಾಖೆಗಳ ಸಿಬ್ಬಂದಿಗಳ ಅವಶ್ಯಕತೆ ಎಂದಿಗಿಂತಲೂ ಹೆಚ್ಚಿರಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆ ವಿತರಣೆಯಲ್ಲೂ ಹೆಚ್ಚಳ ಆಗಬೇಕಿದೆ. ಹೀಗಾಗಿ ಯಾವುದೇ ಕಾರಣ ನೀಡದೇ ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಮಂಡಕಹಳ್ಳಿ ಬಳಿ ಕೊವಿಡ್ ಚಿಕಿತ್ಸೆಗಾಗಿ 600 ಬೆಡ್, ಜಿಲ್ಲಾಸ್ಪತ್ರೆ ಬಳಿ 200 ಬೆಡ್ ಸಿದ್ದಪಡಿಸಲಾಗಿದೆ. ಎಲ್ಲಾ ಭಾಗಗಳಲ್ಲೂ ತಪಾಸಣೆ ಮಾಡುತ್ತಿದ್ದೇವೆ. ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ರಿಪೋರ್ಟ್ ಇರದಿದ್ದರೆ ಬಿಡುವುದಿಲ್ಲ. ಅದೇ ರೀತಿ ಬಾವಲಿ ಚೆಕ್ಪೊಸ್ಟ್ನಲ್ಲಿಯೂ ತಪಾಸಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಸಹಕಾರದಿಂದ ಮಾತ್ರ ಕೋವಿಡ್ ತಡೆಯಲು ಸಾಧ್ಯವಾಗುತ್ತದೆ. ಸರ್ಕಾರದ ಆದೇಶಗಳನ್ನ ಪಾಲನೆ ಮಾಡಿ ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಿ ಎಂದು ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಮರನಾಥ್ ಮನವಿ ಮಾಡಿದ್ದಾರೆ.
ಕೊರೊನಾ ತಡೆಗೆ ರಾಜ್ಯದಲ್ಲಿ ಜಾರಿಯಾಗಿದೆ ಹೊಸ ಮಾರ್ಗಸೂಚಿ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. 8 ಜಿಲ್ಲೆಗಳಲ್ಲಿ ಸಿನಿಮಾ ಹಾಲ್, ಬಾರ್, ಪಬ್, ಕ್ಲಬ್, ರೆಸ್ಟೊರೆಂಟ್ಗೆ ಶೇ 50ರಷ್ಟು ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಉಡುಪಿ, ಕಲಬುರಗಿ, ದಕ್ಷಿಣ ಕನ್ನಡ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಈ ನಿಯಮಗಳು ಅನ್ವಯವಾಗಲಿದೆ.
ಅಲ್ಲದೆ, ರಾಜ್ಯಾದ್ಯಂತ ಜಿಮ್, ಸ್ವಿಮ್ಮಿಂಗ್ ಪೂಲ್ಗಳು ಬಂದ್ ಆಗಲಿವೆ. 6ರಿಂದ 9ನೇ ತರಗತಿಯವರೆಗೆ ಶಾಲೆಗಳು ಕಾರ್ಯನಿರ್ವಹಿಸುವುದಿಲ್ಲ. ವಿದ್ಯಾಗಮ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆ ಬಂದ್ ಆಗಲಿದೆ. ಏಪ್ರಿಲ್ 20ರವರೆಗೆ ಪ್ರಸ್ತುತ ಮಾರ್ಗಸೂಚಿ ಅನ್ವಯವಾಗಲಿದೆ. ಉಳಿದಂತೆ ಇತರ ನಗರಗಳ ಪಬ್, ಬಾರ್‌ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು, ಜಾತ್ರೆ, ಮೇಳಗಳು, ಗುಂಪು ಸೇರುವುದು ನಿಷೇಧ ಮುಂದುವರಿಯಲಿದೆ. ಸಭೆ, ಸಮಾರಂಭ ಆಚರಣೆಗೆ ಮಾರ್ಚ್ 12ರ ಸುತ್ತೋಲೆ ಅನ್ವಯವಾಗಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ. ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ಜನರು ಎಚ್ಚರ ವಹಿಸಬೇಕು. ಈ ನಿಯಮಗಳನ್ನು ಪೊಲೀಸರು, ಸ್ಥಳೀಯ ಆಡಳಿತ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಲಾಗಿದೆ. ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಅದರನ್ವಯ ಯಾವುದೇ ರೀತಿಯ ಜಾಥಾ, ಮುಷ್ಕರ, ಧರಣಿ ನಡೆಸುವುದನ್ನು ನಿಷೇಧ ಮಾಡಲಾಗಿದೆ. ಸಾರಿಗೆ ಬಸ್‌ಗಳಲ್ಲಿ ನಿಗದಿತ ಆಸನದಷ್ಟೇ ಜನರನ್ನು ಕೊಂಡೊಯ್ಯಬೇಕು. ಸಾಧ್ಯವಾದ ಮಟ್ಟಿಗೂ ಮನೆಯಿಂದಲೇ ಕಚೇರಿ ಕೆಲಸ (ವರ್ಕ್ಫ್ರಂ ಹೋಂ) ಸೌಲಭ್ಯ ಬಳಸಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.
ಇದನ್ನೂ ಓದಿ: ಜೂನ್ ತನಕವೂ ಕೊರೊನಾ ಎಚ್ಚರಿಕೆ ಅಗತ್ಯವೆಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ; ಎಚ್ಚರ ಎಚ್ಚರಾ- ಆರೋಗ್ಯ ಸಚಿವ ಸುಧಾಕರ್
India Coronavirus Update: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 89,129 ಕೊರೊನಾ ಪ್ರಕರಣ ಪತ್ತೆ; 714 ಜನರು ಬಲಿ