ಯುವರತ್ನ ಧೂಳೆಬ್ಬಿಸಲಿ ಎಂದು ಧೂಳಿನಲ್ಲಿಯೇ ಚಿತ್ರಾರ್ಪಣೆ: ಧಾರವಾಡ ಕಲಾವಿದರಿಂದ ಪವರ್ ಸ್ಟಾರ್ಗೆ ಹಾರೈಕೆ
ಮಂಜುನಾಥ ಮುಖ್ಯವಾಗಿ ಚಿತ್ರಿಸಿದ್ದು ಧಾರವಾಡದ ಪ್ರಸಿದ್ಧ ಕರ್ನಾಟಕ ಕಾಲೇಜು ಹಾಗೂ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು. ಯುವರತ್ನ ಚಿತ್ರದಲ್ಲಿ ಪ್ರಮುಖವಾಗಿ ಕಂಡು ಬರುವುದು ಇದೇ ಕರ್ನಾಟಕ ಕಾಲೇಜು. ಹೀಗಾಗಿ ಇದನ್ನೇ ಗಮನದಲ್ಲಿಟ್ಟುಕೊಂಡು ಹಿರೇಮಠ ಇಂಥದ್ದೊಂದು ಕಲೆಯನ್ನು ಚಿತ್ರಿದ್ದಾರೆ.

ಧಾರವಾಡ: ಏಪ್ರಿಲ್ 1 ರಂದು ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಚಿತ್ರ ಯುವರತ್ನ ಯುವಕರನ್ನು ಸೆಳೆದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಚಿತ್ರ ಹೌಸ್ ಫುಲ್ ಆಗಿದೆ. ಪುನೀತ್ ಅಭಿಮಾನಿಗಳಿಗಂತೂ ಈ ಚಿತ್ರ ಸಾಕಷ್ಟು ಖುಷಿ ನೀಡಿದೆ. ಲಾಕ್ ಡೌನ್ ಬಳಿಕ ಇಂಥದ್ದೊಂದು ಚಿತ್ರದ ಆಗಮನಕ್ಕೆ ಕಾಯುತ್ತಿದ್ದ ಪುನೀತ್ ಅಭಿಮಾನಿಗಳು ಇದೀಗ ಖುಷಿಪಟ್ಟಿದ್ದಾರೆ. ಇನ್ನು ವಿದ್ಯಾಕಾಶಿ ಧಾರವಾಡದ ಜನರಿಗೆ ಈ ಚಿತ್ರ ಹೊಸದೊಂದು ಖುಷಿಯನ್ನು ನೀಡಿದೆ. ಏಕೆಂದರೆ ಈ ಚಿತ್ರದ ಚಿತ್ರೀಕರಣ ಅನೇಕ ದಿನಗಳವರೆಗೆ ಧಾರವಾಡದಲ್ಲಿಯೇ ನಡೆದಿತ್ತು. ಈ ಚಿತ್ರೀಕರಣದ ವೇಳೆ ಪುನೀತ್ ಅಭಿಮಾನಿಗಳು ಇಡೀ ದಿನ ನಿಂತು ಅವರ ನಟನೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ಇನ್ನು ಧಾರವಾಡದ ಅನೇಕರು ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಮತ್ತೊಂದು ವಿಶೇಷ.
ದೇಶದಲ್ಲಿ ಯಾವುದೇ ಬೆಳವಣಿಗೆ ನಡೆದರೂ ಅದಕ್ಕೆ ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಾ ಬರುತ್ತಿರುವ ವ್ಯಕ್ತಿ ಧಾರವಾಡದ ಕಲಾವಿದರಾದ ಮಂಜುನಾಥ ಹಿರೇಮಠ. ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಕರಾಗಿರುವ ಹಿರೇಮಠ ಇದೀಗ ಪುನೀತ್ ಅವರ ಯುವರತ್ನ ಚಿತ್ರಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಕಲಾ ಸೇವೆ ಸಲ್ಲಿಸಿದ್ದಾರೆ. ಇದೀಗ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುತ್ತಿರುವ ನಡುವಲ್ಲಿಯೇ ಈ ಚಿತ್ರ ಬಿಡುಗಡೆಯಾಗಿದೆ. ಇಂತಹ ವೇಳೆಯಲ್ಲಿ ಕೊರೊನಾ ಬಗ್ಗೆ ಜಾಗೃತಿ ವಹಿಸದೇ ಚಿತ್ರಮಂದಿರಗಳಿಗೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಪುನೀತ್ ಅವರ ಚಿತ್ರ ಬಿಡುಗಡೆಗೆ ಅವರಿಗೆ ಹಾರೈಸುವ ಜೊತೆಜೊತೆಗೆ ಅವರ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊರೊನಾ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಹಿರೇಮಠ ಅವರು ಆಯ್ದುಕೊಂಡಿದ್ದು ಡಸ್ಟ್ ಆರ್ಟ್.

ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊರೊನಾ ಅಪಾಯದ ಬಗ್ಗೆ ಜಾಗೃತಿ
ಏನಿದು ಡಸ್ಟ್ ಆರ್ಟ್? ಗಾಜಿನ ಮೇಲೆ ಮೊದಲಿಗೆ ಧೂಳನ್ನು ಸಿಂಪಡಿಸಲಾಗುತ್ತದೆ. ಬಳಿಕ ಬ್ರಷ್ ಹಾಗೂ ಬೆರಳುಗಳ ಸಹಾಯದಿಂದ ಧೂಳನ್ನು ಬೇಕಾದ ಕಡೆಗಳಲ್ಲಿ ಒರೆಸುತ್ತಾ ಹೋಗಲಾಗುತ್ತದೆ. ಧೂಳನ್ನು ಒರೆಸಿದ ಸ್ಥಳದಲ್ಲಿ ಕಾಣುವ ಪಾರದರ್ಶಕದಿಂದ ಗಾಜಿನಲ್ಲಿಯೇ ಚಿತ್ರ ಎದ್ದು ಕಾಣುತ್ತದೆ. ಮಂಜುನಾಥ ಮುಖ್ಯವಾಗಿ ಚಿತ್ರಿಸಿದ್ದು ಧಾರವಾಡದ ಪ್ರಸಿದ್ಧ ಕರ್ನಾಟಕ ಕಾಲೇಜು ಹಾಗೂ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು. ಯುವರತ್ನ ಚಿತ್ರದಲ್ಲಿ ಪ್ರಮುಖವಾಗಿ ಕಂಡು ಬರುವುದು ಇದೇ ಕರ್ನಾಟಕ ಕಾಲೇಜು. ಹೀಗಾಗಿ ಇದನ್ನೇ ಗಮನದಲ್ಲಿಟ್ಟುಕೊಂಡು ಹಿರೇಮಠ ಇಂಥದ್ದೊಂದು ಕಲೆಯನ್ನು ಚಿತ್ರಿದ್ದಾರೆ.
ಕಲೆಯೊಂದಿಗೆ ಕೊರೊನಾ ಜಾಗೃತಿಯೂ ಇದೆ ಇದೀಗ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೂಗುಗತ್ತಿ ತೂಗುತ್ತಿದೆ. ಇದೇ ವೇಳೆ ಕನ್ನಡ ಚಿತ್ರರಂಗದ ಪ್ರಮುಖ ಸ್ಟಾರ್ಗಳ ಚಿತ್ರಗಳು ಕೂಡ ಬಿಡುಗಡೆಯಾಗುತ್ತಿವೆ. ಈ ಸಂದರ್ಭದಲ್ಲಿ ಜನರು ತಮ್ಮ ನಾಯಕನ ಚಿತ್ರವನ್ನು ನೋಡುವ ಖುಷಿ ಮತ್ತು ಉತ್ಸಾಹದಲ್ಲಿ ಕೊರೊನಾ ಬಗ್ಗೆ ನಿಷ್ಕಾಳಜಿ ವಹಿಸದಿರಲಿ ಎನ್ನುವುದೇ ಮಂಜುನಾಥ ಅವರ ಕಾಳಜಿ. ಇದೇ ಕಾರಣಕ್ಕೆ ಕಾರಿನ ಹಿಂಭಾಗದ ಗಾಜಿಗೆ ಪುನಿತ್ ಹಾಗೂ ಕರ್ನಾಟಕ ಕಾಲೇಜಿನ ಚಿತ್ರ ಬಿಡಿಸಿದರೆ ಕಾರಿನ ಉಳಿದ ಗಾಜುಗಳಲ್ಲಿ ಕೊರೊನಾ ಜಾಗೃತಿ ಕುರಿತ ಚಿತ್ರಗಳನ್ನು ಬಿಡಿಸಲಾಗಿದೆ.

ಧಾರವಾಡದ ಕಲಾವಿದರಾದ ಮಂಜುನಾಥ ಹಿರೇಮಠ
ಮಾಸ್ಕ್ ಧರಿಸೋಣ, ಕೊರೊನಾ ತಡೆಯೋಣ ಮತ್ತು ಮಾಸ್ಕ್ ಧರಿಸೋಣ, ಪವರ್ ತೋರಿಸೋಣ ಎನ್ನುವ ವಾಕ್ಯಗಳ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಚಿತ್ರದ ಮೊದಲ ಶೋ ವೇಳೆಗೆ ನಗರದ ಸಂಗಮ್ ಟಾಕೀಸ್ ಬಳಿ ಬಂದ ಹಿರೇಮಠ, ಪುನೀತ್ ಅಭಿಮಾನಿಗಳಿಗೆ ಕೊರೊನಾ ಬಗ್ಗೆ ಜಾಗೃತಿಯನ್ನು ಕೂಡ ಮೂಡಿಸಿದ್ದರು. ತಮ್ಮ ನಾಯಕರ ಚಿತ್ರವನ್ನು ಡಸ್ಟ್ ಆರ್ಟ್ನಲ್ಲಿ ನೋಡಿದ ಪವರ್ ಸ್ಟಾರ್ ಅಭಿಮಾನಿಗಳು ಪುಳಕಿತರಾದರು. ಇದೇ ವೇಳೆ ಅವರಿಗೆಲ್ಲಾ ಮಂಜುನಾಥ್ ಕೊರೊನಾ ಬಗ್ಗೆ ಕಾಳಜಿ ವಹಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಕೊರೊನಾ ಆರಂಭದಲ್ಲಿಯೂ ಕೂಡ ಹಿರೇಮಠ ಇಂತಹ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದರು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅನೇಕ ರೀತಿಯ ಅಭಿಯಾನಗಳನ್ನು ಮಾಡಿ ಜನರ ಗಮನ ಸೆಳೆದಿದ್ದರು. ಇದೀಗ ಸಿನೆಮಾ ನೋಡುವ ಉತ್ಸಾಹದಲ್ಲಿ ಕಾಳಜಿಯನ್ನು ಮರೆಯದಿರಲಿ ಎನ್ನುವ ದೃಷ್ಟಿಯಿಂದ ಇಂತಹ ಹೊಸ ಬಗೆಯ ಅಭಿಯಾನ ಕೈಗೊಂಡಿದ್ದು, ನಿಜಕ್ಕೂ ಶ್ಲಾಘನೀಯ.
(ವರದಿ: ನರಸಿಂಹಮೂರ್ತಿ ಪ್ಯಾಟಿ 99805 70809)
ಇದನ್ನೂ ಓದಿ: ಯುವರತ್ನಕ್ಕೆ ಮೊದಲ ದಿನವೇ ಶುರುವಾಯ್ತು ಪೈರಸಿ ಕಾಟ; ಎಲ್ಲೇ ಪೈರಸಿ ಲಿಂಕ್ ಸಿಕ್ಕರೂ ರಿಪೋರ್ಟ್ ಮಾಡಿ ಎಂದ ಚಿತ್ರತಂಡ
( Dharwad artist did dust art to wish for yuvarathnaa movie)
Published On - 1:03 pm, Sat, 3 April 21



