ಮೈಸೂರು: ಇತ್ತೀಚಿಗೆ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫಲಿತಾಂಶವನ್ನು (2nd PU Results) ಮೈಸೂರಿನ 11 ವಿದ್ಯಾರ್ಥಿಗಳು ತಿರಸ್ಕರಿಸಿದ್ದು, ಪೂರಕ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಕುರಿತು ಅಧಿಕೃತ ಡಿಡಿಪಿಯು ಶ್ರೀನಿವಾಸ್ ಮೂರ್ತಿ ಮಾಹಿತಿ ನೀಡಿದ್ದಾರೆ. ನಿರೀಕ್ಷೆಯಷ್ಟು ಅಂಕ ಬಂದಿಲ್ಲ, ಫಲಿತಾಂಶ ತೃಪ್ತಿದಾಯಕವಲ್ಲ ಎಂದು ಈ ಹಿಂದೆ ನೀಡಲಾಗಿದ್ದ ಫಲಿತಾಂಶವನ್ನು ತಿರಸ್ಕರಿಸಿರುವ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಆಗಸ್ಟ್ ಕೊನೆಯ ವಾರದಲ್ಲಿ ಪಿಯು ಪೂರಕ ಪರೀಕ್ಷೆ ನಡೆಯಲಿದೆ.
ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯು ಅಂಕಗಳ ಆಧಾರದ ಮೇಲೆ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಿತ್ತು. ಈ 11 ವಿದ್ಯಾರ್ಥಿಗಳ ಜತೆ ಕಳೆದ ವರ್ಷದ 6 ವಿದ್ಯಾರ್ಥಿಗಳು ಸೇರಿದಂತೆ ಖಾಸಗಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ಮೈಸೂರು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಪದವಿ ಕಾಲೇಜು ಪ್ರವೇಶಕ್ಕೆ ತಾತ್ಕಾಲಿಕ ತಡೆ
ಬೆಂಗಳೂರು: ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. 2021-22ನೇ ಸಾಲಿನ ಪದವಿ ಕೋರ್ಸ್ಗಳ ಪ್ರವೇಶ (UG College Admission) ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಂದೂಡಿಕೆ ಮಾಡಲಾಗಿದೆ. ಈ ಮುನ್ನ ಆಗಸ್ಟ್ 4 ರಿಂದ ಪ್ರವೇಶ ಪ್ರಾರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಪದವಿ ಕಾಲೇಜುಗಳಿಗೆ ನಿರ್ದೇಶನ ನೀಡಿತ್ತು. ಆದರೆ ಮುಂದಿನ ಪ್ರವೇಶ ಪ್ರಕ್ರಿಯೆ ದಿನಾಂಕವನ್ನು ಸದ್ಯದಲ್ಲೇ ಪ್ರಕಟ ಮಾಡಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ:
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
(2nd PU Results 11 Students from Mysore rejected results and requested for supplemental examination)