ಮೈಸೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ಹೀಗಾಗಿ ಮಹಾಮಾರಿ ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಮೈಸೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಮೈಸೂರು ಪಾಲಿಕೆಯ 9 ವಲಯಗಳಲ್ಲೂ ತಂಡಗಳ ರಚನೆ ಮಾಡಲಾಗಿದೆ ಎಂದು ಮೈಸೂರು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.
ಈ ವೇಳೆ ಮಾತನಾಡುತ್ತ, ಮೈಸೂರಿನಲ್ಲಿ ಪ್ರತಿನಿತ್ಯ 3 ಸಾವಿರ ಕೊವಿಡ್ ಟೆಸ್ಟ್ ನಡೀತಿದೆ. ಮತ್ತಷ್ಟು ಕೊವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಕೊವಿಡ್ ಟೆಸ್ಟ್ ಮತ್ತೆ ಆರಂಭಿಸುತ್ತೇವೆ. ಜನನಿಬಿಡ ಪ್ರದೇಶಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತೆ. ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತೆ ಎಂದು ಡಾ.ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಹಾಗೂ ಪಾಲಿಕೆಯಿಂದ ದಂಡ ವಸೂಲಾತಿ ಕಾರ್ಯ ಮತ್ತೆ ಚುರುಕುಗೊಳ್ಳಲಿದೆ ಎಂದು ಹೇಳಿದ್ರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಂಡ ಚಿರತೆಗಳು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ 3 ಚಿರತೆಗಳು ಕಾಣಿಸಿಕೊಂಡಿವೆ. ಚಿರತೆಗಳು ಓಡಾಡುವ ವಿಡಿಯೋ ವೈರಲ್ ಆಗಿದೆ. ಚಾಮುಂಡಿ ಬೆಟ್ಟದಲ್ಲಿ ಚಿರತೆ ಸಂತತಿ ಹೆಚ್ಚಾಗಿರುವ ಸಾಧ್ಯತೆ ಇದ್ದು ಈ ಬಗ್ಗೆ ನಿಗಾವಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ತಲಪಾಡಿ ಗಡಿಯಲ್ಲಿ ಪೊಲೀಸ್ ಸರ್ಪಗಾವಲು ಮಂಗಳೂರು-ಕೇರಳ ಸಂಪರ್ಕದ ತಲಪಾಡಿ ಗಡಿಯಲ್ಲಿ ಒಂದು ಕೆ.ಎಸ್.ಆರ್.ಪಿ ತುಕುಡಿ ಸೇರಿದಂತೆ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆಯಂತೆ ತಲಪಾಡಿ ಗಡಿಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಲಿದ್ದಾರೆ. ಎಡಿಜಿಪಿ ಭೇಟಿ ಹಿನ್ನೆಲೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ನಿನ್ನೆ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಕೇರಳಿಗರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನೆಗೆಟಿವ್ ವರದಿ ಇಲ್ಲದವರನ್ನು ಪೊಲೀಸರು ವಾಪಸ್ ಕಳುಹಿಸಲಾಗುತ್ತಿದೆ.
ಕೊರೊನಾ 3ನೇ ಅಲೆಗೆ ಸಜ್ಜಾದ ಕೋಲಾರ ಜಿಲ್ಲಾಡಳಿತ ಇನ್ನು 3ನೇ ಅಲೆ ಭೀತಿ ಹೆಚ್ಚಾಗಿದ್ದು ಕೋಲಾರ ಜಿಲ್ಲಾಡಳಿತ ಕೂಡ ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೋಲಾರ ಜಿಲ್ಲೆಯಲ್ಲಿ ವ್ಯಾಕ್ಸಿನ್ ಡ್ರೈವ್ ಚುರುಕುಗೊಳಿಸಲಾಗಿದೆ. ಜಿಲ್ಲೆಯಲ್ಲಿ 7.40 ಲಕ್ಷ ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದ್ದು ವ್ಯಾಕ್ಸಿನೇಷನ್‌ನಲ್ಲಿ 6ನೇ ಸ್ಥಾನದಲ್ಲಿದೆ. 3ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ತಪಾಸಣೆ ಮಾಡಲಾಗುತ್ತಿದೆ ಎಂದು ಟಿವಿ9ಗೆ ಕೋಲಾರ ಡಿಹೆಚ್‌ಒ ಡಾ.ಜಗದೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೇಬಿ ಬೆಟ್ಟದಲ್ಲಿ ಸ್ಫೋಟಕ ಸಾಮಾಗ್ರಿ ಪತ್ತೆ; 11 ಡಿಟೋನೇಟರ್, 20 ಜಿಲೆಟಿನ್ ಕಡ್ಡಿ ಪೊಲೀಸರ ವಶಕ್ಕೆ
(Mysore and kolar getting prepared to fight against corona 3rd wave)