ಮೈಸೂರು, ಜ.21: ಅಯೋಧ್ಯೆ ಶ್ರೀರಾಮ ಮಂದಿರ (Ayodhya Ram Mandir) ನಾಳೆ ಲೋಕಾರ್ಪಣೆಗೊಳ್ಳಲಿದ್ದು, ದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಐದು ದಶಕಗಳ ಕನಸು ಈಡೇರುತ್ತಿರುವ ಹಿನ್ನೆಲೆ ಕೋಟ್ಯಂತರ ಹಿಂದೂಗಳು ಶ್ರೀರಾಮೋತ್ಸವ ನಡೆಸಲು ಮುಂದಾಗಿದ್ದಾರೆ. ಕರ್ನಾಟಕದಲ್ಲೂ ಹಬ್ಬ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ, ಬೆಳಗಾವಿಯಲ್ಲಿ ಆಯೋಜಿಸಿದ್ದ ಶೋಭಾಯಾತ್ರೆಗೆ ಕೋರ್ಟ್ ಬ್ರೇಕ್ ಹಾಕಿದ ಬೆನ್ನಲ್ಲೇ ಮೈಸೂರಿನಲ್ಲೂ (Mysuru) ಮೆರವಣಿಗೆಗೆ ಅನುಮತಿ ನಿರಾಕರಣೆ ಮಾಡಲಾಗಿದೆ.
ನಾಳೆ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ಇಂದು ಮೈಸೂರಿನಲ್ಲಿ ಶ್ರೀರಾಮೋತ್ಸವ ಆಯೋಜಿಸಲಾಗಿತ್ತು. ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಕೆಸರೆಯಿಂದ ಆಶ್ರಮದವರೆಗೂ ಶ್ರೀರಾಮನ ಮೆರವಣಿಗೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಆರಂಭದಲ್ಲಿ ಇದಕ್ಕೆ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ದರು. ಇದೀಗ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆ.
ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಬೆಳಗಾವಿಯಲ್ಲಿ ಶೋಭಾಯಾತ್ರೆಗೆ ಅನುಮತಿ ಕೊರಿ ಸಲ್ಲಿಸಿದ್ದ ಅರ್ಜಿ ವಜಾ
ಇದಕ್ಕೂ ಮುನ್ನ, ಮೈಸೂರು ಅಶೋಕ ರಸ್ತೆಯಲ್ಲಿ ರಾಮ ಭಕ್ತರು ಲಕ್ಷ ದೀಪೋತ್ಸವ ಆಚರಿಸಲು ಮುಂದಾಗಿದ್ದರು. ಇದಕ್ಕೆ ನೀಡಿದ್ದ ಅನುಮತಿಯನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಲಕ್ಷ ದೀಪೋತ್ಸವಕ್ಕೆ ಪೊಲೀಸರಿಂದ ಅನುಮತಿ ಸಹಾ ಪಡೆಯಲಾಗಿತ್ತು. ಇದೀಗ ಹೆಚ್ಚು ವಾಹನ ಸಂಚಾರ, ಜನ ಸಂದಣಿ ಕಾರಣ ನೀಡಿ ಅನುಮತಿ ರದ್ದು ಮಾಡಲಾಗಿದೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾನೆ ಹಿನ್ನೆಲೆ ಬೆಳಗಾವಿ ಜಿಲ್ಲೆಯಲ್ಲಿ ಶ್ರೀರಾಮ ಸೇನೆ ಹಿಂದೂಸ್ತಾನ್ ವತಿಯಿಂದ ನಾಳೆ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಸಂಸ್ಥಾಪಕ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ನಗರದ ಸಂಭಾಜಿ ವೃತ್ತದಿಂದ ಶಹಾಪೂರ ವರೆಗೂ ಶೋಭಾಯಾತ್ರೆ ನಡೆಸಲು ಸಿದ್ಧತೆ ನಡೆಸಲಾಗಿತ್ತು.
ಆದರೆ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಯಾತ್ರೆಗೆ ಪೊಲೀಸ್ ಅನುಮತಿ ನೀಡಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಧಾರವಾಡ ಪೀಠಕ್ಕೆ ಅರ್ಜಿ ಸಲ್ಲಿಸಿ ಶೋಭಾಯಾತ್ರೆಗೆ ಅನುಮತಿ ಕೋರಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ