ಮೈಸೂರು, ಅ.20: ಹೆಚ್ಚುತ್ತಿರುವ ಕಳ್ಳತನವನ್ನು ತಡೆಯಲು ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಇದಕ್ಕೆ ಬ್ರೇಕ್ ಹಾಕಲು ಆಗುತ್ತಿಲ್ಲ. ಹೌದು, ಅದರಂತೆ ಇದೀಗ ಕೇರಳ ಮೂಲದ ರೈತನ ಕೈಕಾಲು ಕಟ್ಟಿ ಲಾಂಗು ಮಚ್ಚು ತೋರಿಸಿ ಹಣ ಕಳ್ಳತನಕ್ಕೆ ಯತ್ನಿಸಿದ ಘಟನೆ ನಂಜನಗೂಡು(Nanjangud) ತಾಲೂಕಿನ ಯಡಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಬಾಳೆ ತೋಟಕ್ಕೆ ನುಗ್ಗಿದ ಖದೀಮರು, ಜಮೀನಿನಲ್ಲಿದ್ದ ಕೇರಳ ಮೂಲದ ರೈತನನ್ನು ಬೆದರಿಸಿ ಆತನ ಕೈಕಾಲುಗಳನ್ನು ಕಟ್ಟಿ ಹಾಕಿ ಹಣಕ್ಕಾಗಿ ಪೀಡಿಸಿದ್ದಾರೆ. ಕೊನೆಗೆ ಏನೂ ಸಿಗದೆ ಬರಿಗೈಯಲ್ಲಿ ವಾಪಸ್ಸು ಹೋಗಿದ್ದಾರೆ.
ಇನ್ನು ಗ್ರಾಮದ ಅರುಣ್ ಎಂಬುವರಿಗೆ ಸೇರಿದ ಬಾಳೆ ತೋಟ ಇದಾಗಿದೆ. ಬಾಳೆ ಕಾಯಿಗಳನ್ನು ಕಟಿಂಗ್ ಮಾಡಲಾಗಿ, ಮಾರಾಟ ಮಾಡಿದ ಬಾಳೆ ಕಾಯಿಯ ಸುಮಾರು 1.75 ಲಕ್ಷ ರೂಪಾಯಿ ಹಣವನ್ನು ಮಾಲೀಕರಿಗೆ ನೀಡಿದ್ದ. ನಿರಂತರವಾಗಿ ಬಾಳೆ ಕಟಾವು ಮಾಡುತ್ತಿರುವುದನ್ನು ಅರಿತಿದ್ದ ಖದೀಮರು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದು, ಮುಸುಕುದಾರಿಗಳು ತೋಟಕ್ಕೆ ನುಗ್ಗಿ ಕೇರಳದ ರೈತನಿಗೆ ಚಾಕು ಮತ್ತು ಗನ್ ತೋರಿಸಿ ಹಣವನ್ನು ನೀಡುವಂತೆ ಬೆದರಿಕೆ ಒಡ್ಡಿದ್ದಾರೆ. ಬಳಿಕ ಜಮೀನಿನಲ್ಲಿದ್ದ ರೈತ, ಹಣ ನನ್ನಲ್ಲಿಲ್ಲ, ಮಾಲೀಕರು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ನಂಬದ ಖದೀಮರು ಆತನ ಕೈಕಾಲುಗಳನ್ನು ಕಟ್ಟಿ ಹಾಕಿ, ಶೆಡ್ಡಿನಲ್ಲಿ ಎಲ್ಲಾ ಕಡೆ ಹಣಕ್ಕಾಗಿ ಹುಡುಕಾಟ ನಡೆಸಿ, ಕೊನೆಗೆ ಬರಿ ಕೈಯಲ್ಲಿ ವಾಪಸ್ ಆಗಿದ್ದಾರೆ. ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿ ಮೂರು ಕಡೆ ಕಳ್ಳತನ, ಆನೇಕಲ್ನಲ್ಲಿ ಕಾರಿನ ಗಾಜು ಒಡೆದು ಹಣ ಕದ್ದ ಖದೀಮರು
ಹೆಜ್ಜೇನು ದಾಳಿಯಿಂದ ಆಸ್ಪತ್ರೆ ಸೇರಿದ್ದ ರೈತ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ್(58) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ರೈತ. ಇತ ಮೇಕೆಯ ಮೇವಿಗಾಗಿ ಮರದಲ್ಲಿ ಸೊಪ್ಪು ಕೀಳುತ್ತಿದ್ದಾಗ ಜೇನು ದಾಳಿ ಮಾಡಿತ್ತು. ಇದರಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ರೈತ, ಇದೀಗ ಚಿಕಿತ್ಸೆ ಫಲಿಸಿದೇ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ