ಮೈಸೂರು, ಸೆ.14: ಮೃತದೇಹಕ್ಕೆ ಕೈ ಮುಗಿದು ಗೌರವ, ಮತ್ತೊಂದು ಕಡೆ ಸೆಲ್ಯೂಟ್ ಮಾಡಿದ ಆಸ್ಪತ್ರೆ ಸಿಬ್ಬಂದಿ. ಮೈಸೂರಿನ ಅಪೋಲೋ ಆಸ್ಪತ್ರೆ (Apollo Hospital)ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದಕ್ಕೆ ಕಾರಣ ಸಯ್ಯದ್ ಪರ್ವೇಜ್ ಹಾಗೂ ಅವರ ಕುಟುಂಬ. ಹೌದು, ಮೆದುಳು ನಿಷ್ಕ್ರಿಯವಾದ ಹಿನ್ನೆಲೆ 52 ವರ್ಷದ ಪರ್ವೇಜ್ ಅವರ ಅಂಗಾಂಗಳನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ.
ಸಯ್ಯದ ಪರ್ವೇಜ್ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ. ಪರ್ವೇಜ್ ಸೆಪ್ಟೆಂಬರ್ 8 ರಂದು ಮೈಸೂರು ಕೆ ಆರ್ ಎಸ್ ರಸ್ತೆಯಲ್ಲಿ ಹೋಗುವಾಗ ಮತ್ತೊಂದು ಬೈಕ್ ನಡುವೆ ಅಪಘಾತವಾಗಿದೆ. ಈ ವೇಳೆ ಪರ್ವೇಜ್ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ನಂತರ ತಕ್ಷಣ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4 ದಿನ ಪರ್ವೇಜ್‌ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ಪರ್ವೇಜ್ ಮಿದುಳು ನಿಷ್ಕ್ರಿಯವಾಗಿದ್ದು, ಮತ್ತೆ ಅವರು ಮೊದಲಿನಂತೆ ಆಗಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ಈ ಹಿನ್ನೆಲೆಯಲ್ಲಿ ಪರ್ವೇಜ್ ಕುಟುಂಬದವರು ಪರ್ವೇಜ್ ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಇಂಜೆಕ್ಷನ್ ರಿಯಾಕ್ಷನ್ನಿಂದ 7 ವರ್ಷದ ಬಾಲಕ ಸಾವು ಆರೋಪ, ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆ ತಾಯಿ ಮಗು ಸೇಫ್
ಅದರಂತೆ ಪರ್ವೇಜ್ ಅವರ ಲಿವರ್, ಕಿಡ್ನಿ, ಹೃದಯದ ಕವಾಟಗಳ ದಾನ ಮಾಡಲಾಗಿದೆ. ಈ ಮೂಲಕ ಪರ್ವೇಜ್ ಅವರ ಅಂಗಾಂಗ ನಾಲ್ಕು ಜನರ ಬಾಳಿಗೆ ಬೆಳಕಾಗಿದೆ. ಮಣ್ಣಲ್ಲಿ ಮಣ್ಣಾಗಬೇಕಿದ್ದ ಪರ್ವೇಜ್ ಮೃತದೇಹ ಹಲವರ ಬಾಳಿಗೆ ಬೆಳಕಾಗಿದೆ. ಪರ್ವೇಜ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸಾವಿನ ನೋವಿನಲ್ಲೂ ಪರ್ವೇಜ್ ಮನೆಯವರ ಈ ನಿರ್ಧಾರ ಎಲ್ಲರಿಗೂ ಮಾದರಿಯಾಗಲಿ ಎನ್ನುವುದೇ ನಮ್ಮ ಆಶಯ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Thu, 14 September 23