ಯಾರು ರಾಜ? ಸಿಎಂ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ!

| Updated By: Ganapathi Sharma

Updated on: Mar 19, 2024 | 1:20 PM

ಲೋಕಸಭೆ ಚುನಾವಣೆ ಟಿಕೆಟ್ ಘೋಷಣೆ ಸಂದರ್ಭದಲ್ಲಿ ಯದುವೀರ್ ಒಡೆಯರ್ ವಿರುದ್ಧ ವ್ಯಂಗ್ಯವಾಡಿ, ನಂತರ ಅವರ ಜೊತೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಇದೀಗ ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಒಡೆಯರ್ ವಿರುದ್ಧ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಸಮರ್ಥಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ, ಪ್ರತಾಪ್ ಸಿಂಹ ಹೇಳಿದ್ದೇನು? ಮುಂದೆ ಓದಿ.

ಯಾರು ರಾಜ? ಸಿಎಂ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ!
ಪ್ರತಾಪ್ ಸಿಂಹ
Follow us on

ಮೈಸೂರು, ಮಾರ್ಚ್​ 19: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Wadiyar) ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಗಿ, ‘ಯಾರು ರಾಜ?’ ಎಂದು ಪ್ರಶ್ನಿಸಿದ್ದನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ಸಮರ್ಥಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಹುಳುಕು ಹುಡುಕುವುದು ತಪ್ಪು. ಸಂವಿಧಾನ ಜಾರಿಯಾದ ದಿನದಿಂದ ದೇಶದಲ್ಲಿ ರಾಜ, ಮಹಾರಾಜ ಎಂಬ ಪರಿಕಲ್ಪನೆ ಇಲ್ಲ ಎಂದು ಹೇಳಿದ್ದಾರೆ.

ಯದುವೀರ್ ಒಡೆಯರ್ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದರಲ್ಲಿ ಏನು ತಪ್ಪಿಲ್ಲ. ಈಗ ದೇಶದಲ್ಲಿ ರಾಜಾಡಳಿತ ಇಲ್ಲ. ಖಾಸಗಿ ದರ್ಬಾರ್ ವೇಳೆ ಮಾತ್ರ ರಾಜರು ಅಲ್ಲಿಗೆ ಸೀಮಿತವಾಗಿ ಮಾತ್ರ ಇರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ಆದರೆ ಯದುವೀರ್ ಬಗ್ಗೆ ನೀಡಿರುವ ಹೇಳಿಕೆ ವಿಚಾರದಲ್ಲಿ ಸಹಮತ ಇದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಯದುವೀರ್​ರನ್ನು ಈಗ ಯಾರಾದರೂ ಮಹಾರಾಜ ಎಂದು ಕರೆಯುತ್ತಾರೆಯೇ ಅಥವಾ ಬಿಜೆಪಿ ಅಭ್ಯರ್ಥಿ ಎಂದು ಕರೆಯುತ್ತೀರಾ ಎಂದು ಪ್ರತಾಪ್ ಸಿಂಹ ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ದಾರೆ. ಮುಂದುವರಿದು, ಯದುವೀರ್ ಒಡೆಯರ್ ಈಗ ಅರಮನೆಗೆ ಸೀಮಿತವಾಗಿರದೆ ಜನಪ್ರತಿನಿಧಿಯಾಗಲು ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಕರೆದಿರುವುದರಲ್ಲಿ ತಪ್ಪಿಲ್ಲ ಎಂದು ಪ್ರತಾಪ್ ಸಿಂಹ ಸಮರ್ಥನೆ ಮಾಡಿದ್ದಾರೆ.

ತಮಗೆ ಬಿಜೆಪಿ ಟಿಕೆಟ್ ಕೈತಪ್ಪುತ್ತದೆ ಎಂದು ಗೊತ್ತಾದ ಸಂದರ್ಭದಲ್ಲಿ ಯದುವೀರ್ ಒಡೆಯರ್ ವಿರುದ್ಧ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದರು. ಅರಮನೆಯ ದರ್ಬಾರ್ ಹಾಲಿನಲ್ಲಿ ಕುಳಿತವರು ಜನಸೇವೆ ಮಾಡಲು ಬೀದಿಗೆ ಬರುವುದಾದರೆ ಸ್ವಾಗತ ಎಂದು ಹೇಳಿದ್ದರು. ನಂತರದಲ್ಲಿ ಅವರ ಮುನಿಸಿಗೆ ತೇಪೆ ಹಚ್ಚುವಲ್ಲಿ ರಾಜ್ಯ ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು. ಆ ನಂತರ ಯದುವೀರ್ ಜೊತೆ ಕಾಣಿಸಿಕೊಂಡಿರುವ ಪ್ರತಾಪ್ ಸಿಂಹ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದರು.

ಇದನ್ನೂ ಓದಿ: ಯಾರು ರಾಜ? ಸಿದ್ದರಾಮಯ್ಯ ಹೇಳಿಕೆ ಗಮನಕ್ಕೆ ಬಂದಿಲ್ಲವೆಂದ ಯದುವೀರ್

ಮತ್ತೊಂದೆಡೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯದುವಿರ್ ಒಡೆಯರ್, ಆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ದೇಶದ ಸಂವಿಧಾನದಲ್ಲಿ ರಾಜ, ರಾಣಿ ಪಟ್ಟಕ್ಕೆ ಹೆಚ್ಚು ಮಹತ್ವ ಇಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಪ್ರಜೆಗಳು ಎಂದು ಹೇಳಿದ್ದಾರೆ.

ಕೈಮುಗಿದುಕೊಂಡು ಹೋಗಿ ಸಾಕು, ಜನ ಗೆಲ್ಲಿಸುತ್ತಾರೆ: ಪ್ರತಾಪ್ ಸಿಂಹ

ಮಹಾರಾಜರೇ, ನೀವು ಕೈ ಮುಗಿದುಕೊಂಡು ಹೋಗಿ ಸಾಕು. ನಿಮ್ಮ ಎಂಪಿ ಹತ್ತು ವರ್ಷದಲ್ಲಿ ಬಹಳ ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಅದಕ್ಕೆ ಮತ ಹಾಕ್ತೀವಿ ಅಂತ ಜನ ಹೇಳುತ್ತಾರೆ. ಯಾರ ನಾಮ ಬಲವೂ ಬೇಡ ಎಂದು ಬಿಜೆಪಿ ಪ್ರಚಾರ ಸಭೆಯಲ್ಲಿ ಪ್ರತಾಪ್ ಸಿಂಹ ಅಬ್ಬರದ ಭಾಷಣ ಮಾಡಿದ್ದಾರೆ. ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲುವು ನಿರಾಯಾಸವಾಗಿ ಆಗುತ್ತೆ. ಹತ್ತು ವರ್ಷಗಳಲ್ಲಿ ಕ್ಷೇತ್ರದ ಮೂಲೆ ಸುತ್ತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನರಿಗೆ ಯಾರು ಬೇಕು, ಯಾರು ಬೇಡ ಎನ್ನುವ ಭಾವನೆ ನನಗೆ ಗೊತ್ತಿದೆ. ಅದಕ್ಕಾಗಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದು ಸಿಂಹ ಹೇಳಿದ್ದಾರೆ.

1952 ರಿಂದ‌ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾದಿಯಾಗಿ ಎಂಪಿಗಳ ಕೆಲಸ ನೋಡಿ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಕೊಟ್ಟಿರುವ ಕೊಡುಗೆ, ಪ್ರತಾಪ್ ಸಿಂಹ ಮಾಡಿರುವ ಕೆಲಸ ಗೊತ್ತಾಗುತ್ತದೆ. ನೀವು ಕೇಳಿರಲಿಲ್ಲ, ಆದರೂ ನಾನು ಟ್ವಿಟರ್‌ನಲ್ಲಿ ಹಾಕಿ ರೈಲು, ಪಾಸ್‌ಪೋರ್ಟ್ ಸೇವಾಕೇಂದ್ರ, ರಿಂಗ್ ರೋಡ್ ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿದ್ದು, ಕಸದ ಸಮಸ್ಯೆ ನಿಭಾಯಿಸುವ ಕೆಲಸ ಮಾಡಿದೆ. ಎಲ್ಲರೂ ಕಸದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದರು ನಾನು ಅದನ್ನು ಬಗೆಹರಿಸುವ ಕೆಲಸ ಮಾಡಿದೆ. ಮಹಾರಾಜರು ಏನೇನು ಕೆಲಸ ಮಾಡಿದ್ದರೋ ಅದೇ ರೀತಿ ಶಾಶ್ವತವಾಗಿ ಉಳಿಯುವ ಕೆಲಸ ನಾನು ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ವೇದಿಕೆಯಲ್ಲೇ ಸ್ವಪಕ್ಷೀಯರಿಗೆ ಟಾಂಗ್

ಪ್ರತಾಪ್ ಸಿಂಹನನ್ನು ಜಗಳಗಂಟ ಎನ್ನುತ್ತಾರೆ. ಮಹಿಷ ದಸರಾ ಆಚರಣೆ ವಿಚಾರದಲ್ಲಿ ಗಲಾಟೆ ಮಾಡಿದ್ದೇನೆ. ಯಾತಕ್ಕಾಗಿ ನಾನು ಗಲಾಟೆ ಮಾಡಿದೆ ಹೇಳಿ… ಚಾಮುಂಡೇಶ್ವರಿ ಹತ್ತಿರ ವರ ಕೊಡು ಅಂತ ಎಲ್ಲರೂ ಬೇಡಿಕೊಳ್ಳುತ್ತಾರೆ. ಆದರೆ ಚಾಮುಂಡಿಗೆ ಅವಮಾನವಾಗುವಾಗ ಯಾರು ಬರಲಿಲ್ಲ. ಗ್ಯಾಸ್ ಪೈಪಗ ಲೈನ್ ವಿಚಾರದಲ್ಲಿ ನಮ್ಮ ಕ್ಷೇತ್ರದ ಶಾಸಕರ ವಿರುದ್ಧವೇ ಗಲಾಟೆ ಮಾಡಿದೆ. ಅದು ನಮ್ಮ ಕ್ಷೇತ್ರದ ಜನರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಗಲಾಟೆ ಮಾಡಿದ್ದೇನೆ ಎಂದು ವೇದಿಕೆಯಲ್ಲೇ ಸ್ವಪಕ್ಷೀಯರಿಗೆ ಟಾಂಗ್ ಕೊಟ್ಟರು.

ಹತ್ತು ವರ್ಷ ಅಧಿಕಾರ ಕೊಟ್ಟಿದ್ದೀರಿ. ಈಗ ಬದಲಾವಣೆ ಬಯಸಿದ್ದೀರಿ, ಅದನ್ನ ಒಪ್ಕೋತಿರಿ. ಬೇರೆಯವರ ರೀತಿ ಟಿಕೇಟ್ ಮಿಸ್ ಆಯ್ತು ಅಂತ ಪಾರ್ಕಲ್ಲಿ ಕುಳಿತು ತಮಟೆ ಬಾರಿಸಲ್ಲ ಎಂದು ವೇದಿಕೆ ಮೇಲೆ ಇದ್ದ ರಾಮ್‌ದಾಸ್​​ಗೆ ಟಾಂಗ್ ಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Tue, 19 March 24