ಮೈಸೂರು, ಸೆ.27: ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ CWRC ಆದೇಶ ಹೊರಡಿಸಿರುವ ಹಿನ್ನೆಲೆ ಮೈಸೂರಿನಲ್ಲಿ ಕಾವೇರಿಗಾಗಿ ಹೋರಾಟ ಮುಂದುರೆದಿದೆ (Cauvery Water Dispute) . ಕರ್ನಾಟಕ ಪ್ರಜಾಪಾರ್ಟಿ ವತಿಯಿಂದ ವಿನೂತನ ಪ್ರತಿಭಟನೆ (Protest) ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದು ಅಂಚೆ ಚಳುವಳಿ ಮೂಲಕ ಆಕ್ರೋಶ ಹೊರ ಹಾಕಲಾಗುತ್ತಿದೆ. ಇನ್ನು ಮತ್ತೊಂದೆಡೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯುತ್ತಿದೆ. ಮತ್ತು ಮೈಸೂರಿನ ಗಾಂಧಿ ವೃತ್ತದಲ್ಲಿ ಜೆಡಿಎಸ್ನಿಂದ ಧರಣಿ ನಡೆಯುತ್ತಿದೆ.
ಕರ್ನಾಟಕ ಪ್ರಜಾಪಾರ್ಟಿ ಪಕ್ಷದ ರಾಜ್ಯಾಧ್ಯಕ್ಷ ವಕೀಲ ಶಿವಣ್ಣ ರವರ ನೇತೃತ್ವದಲ್ಲಿ ಅಂಚೆ ಚಳುವಳಿ ನಡೆಯುತ್ತಿದ್ದು ಕಾರ್ಯಕರ್ತರೆಲ್ಲ ಸೇರಿಕೊಂಡು ದೆಹಲಿಯ ಪ್ರಧಾನಿಗಳ ಕಚೇರಿಗೆ ಅಂಚೆ ಪೋಸ್ಟ್ ಮಾಡಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು. ಕಾವೇರಿ ವಿಚಾರದಲ್ಲಿ ಪ್ರಧಾನಿಗಳು ಮಧ್ಯ ಪ್ರವೇಶ ಮಾಡಬೇಕು. ಈ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದಿಂದ ಮತ್ತೆ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಾವೇರಿ ವಿವಾದ: ಪೂರ್ಣಚಂದ್ರ ತೇಜಸ್ವಿ ಹೇಳಿದ ಅರ್ಥಪೂರ್ಣ ಮಾತು ನೆನಪಿಸಿಕೊಂಡ ಉಪೇಂದ್ರ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದೆ. ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಪ್ರಾಧಿಕಾರದ ಆದೇಶ ಪಾಲನೆ ಮಾಡಬಾರದು. ಎಲ್ಲೋ ಎಸಿ ರೂಮಿನಲ್ಲಿ ಕುಳಿತು ಆದೇಶ ಮಾಡುವುದಲ್ಲ. ವಾಸ್ತವ ಸ್ಥಿತಿ ಅರಿತು ಆದೇಶ ಮಾಡಬೇಕು. ಈ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಸಂಸದರು ಒತ್ತಾಯ ಹೇರಬೇಕು. ಕಾವೇರಿ ವಿಚಾರದಲ್ಲಿ ಶ್ವಾಶತ ಪರಿಹಾರ ಸಿಗಬೇಕು. 29ರ ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಸಹಕಾರವಿದೆ. ಮೈಸೂರಿನಲ್ಲೂ ಕರ್ನಾಟಕ ಬಂದ್ ಯಶಸ್ವಿ ಆಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನದ ಬಣದ ಜಗದೀಶ್ ಹೇಳಿದರು.
ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಮೈಸೂರಿನ ಗಾಂಧಿ ವೃತ್ತದಲ್ಲಿ ಜೆಡಿಎಸ್ ಧರಣಿ ನಡೆಸಿದೆ. ಮಾಜಿ ಶಾಸಕರಾದ ಕೆ ಮಹದೇವ್, ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಜೆಡಿಎಸ್ನ ಹಾಲಿ ಹಾಗೂ ಮಾಜಿ ನಗರಪಾಲಿಕೆ ಸದಸ್ಯರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ತಲೆ ಮೇಲೆ ಖಾಲಿ ಕೊಡಗಳನ್ನು ಹೊತ್ತುಕೊಂಡು ಜೆಡಿಎಸ್ ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:10 pm, Wed, 27 September 23