ಮೈಸೂರು: ಸಚಿವ ಸ್ಥಾನ ಸಿಗದ ಕೆಲವರು ಬಂಡಾಯದ ಬಾವುಟ ಹಾರಿಸೋ ಮುನ್ಸೂಚನೆ ನೀಡಿದ್ರೆ. ಕೇಳಿದ ಖಾತೆ ಸಿಗದಿದ್ದಕ್ಕೆ ಮತ್ತೆ ಕೆಲವರು ಅಸಮಾಧಾನಗೊಂಡಿದ್ದಾರೆ. ಅದ್ರಲ್ಲೂ ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ನಿನ್ನೆ ಆನಂದ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಮನೆಗೆ ಭೇಟಿ ನೀಡಿ ತಮಗೆ ಒಳ್ಳೆಯ ಖಾತೆ ಕೊಡಿ ಅಂತಾ ಮನವಿ ಮಾಡಿದ್ದಾರೆ. ಈ ಎಲ್ಲ ಜಂಜಾಟಗಳ ನಡುವೆ ಸಿಎಂ ಇಂದು ಮೈಸೂರಿಗೆ ಭೇಟಿ ನೀಡ್ತಿದ್ದಾರೆ.
ಇಂದು ಮೈಸೂರು ಜಿಲ್ಲಾ ಪ್ರವಾಸ ಮಾಡಲಿರುವ ಮುಖ್ಯಮಂತ್ರಿ
ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಮೈಸೂರಿಗೆ ಆಗಮಿಸುತ್ತಿರುವ ಬೊಮ್ಮಾಯಿ ಮೊದಲು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಸಿಎಂ ಆಗುವ ಮುನ್ನ ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಈಗ ಸಿಎಂ ಆದ ನಂತರ ಮತ್ತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಆಗಮಿಸ್ತಿದ್ದಾರೆ. ವಿಶೇಷ ಅಂದ್ರೆ ತಮ್ಮ ಜೊತೆ ಸಚಿವ ಸಂಪುಟದ ಹಲವು ಸದಸ್ಯರನ್ನು ಸಹ ಕರೆದು ಕೊಂಡು ಬರ್ತಿದ್ದಾರೆ. ಆರೋಗ್ಯ ಸಚಿವ ಸುಧಾಕರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಸತಿ ಸಚಿವ ವಿ.ಸೋಮಣ್ಣ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಿಎಂ ಜೊತೆ ಮೈಸೂರಿಗೆ ಆಗಮಿಸುತ್ತಿದ್ದಾರೆ.
ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಸಿಎಂ, ಸಚಿವರ ಆಗಮನ
ಸಿಎಂ ಹಾಗೂ ಸಚಿವರು ಬೆಳಗ್ಗೆ 11ಕ್ಕೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಎಲ್ಲರೂ ಒಟ್ಟಿಗೆ ಬೆಳಗ್ಗೆ 11.15ಕ್ಕೆ ಮೈಸೂರು ಜಿಲ್ಲಾ ಪಂಚಾಯಿತಿಗೆ ಆಗಮಿಸಲಿದ್ದಾರೆ. ಅಲ್ಲಿ ಕೊವಿಡ್ ಸಂಬಂಧ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳಿಂದ ಸಿಎಂ ಮತ್ತು ಸಚಿವರು ಕೊವಿಡ್ ಪರಿಸ್ಥಿತಿಯ ಕುರಿತು ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಇಂದು ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಭೇಟಿ ಹಿನ್ನೆಲೆಯಲ್ಲಿ ಸಿಎಂ ಬಂದು ಹೋಗುವವರೆಗೂ ಚಾಮುಂಡೇಶ್ವರಿ ದೇಗುಲ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಕಳೆದ ಮೂರು ದಿನಗಳಿಂದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮೂರು ದಿನಗಳ ಬಳಿಕ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಭಕ್ತರು ಸಹ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಲಿದೆ.
ಮಧ್ಯಾಹ್ನ 1.10ಕ್ಕೆ ಸುತ್ತೂರು ಮಠಕ್ಕೆ ಮುಖ್ಯಮಂತ್ರಿ ಭೇಟಿ
ಇದಾದ ನಂತರ ಎಲ್ಲರೂ ಮಧ್ಯಾಹ್ನ 1.10ಕ್ಕೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ. ಸಿಎಂ ಆಗುವ ಕೆಲದಿನಗಳ ಹಿಂದಷ್ಟೇ ಬಸವರಾಜ ಬೊಮ್ಮಾಯಿ, ಸಚಿವ ಅಶೋಕ್ ಜೊತೆ ಆಗಮಿಸಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ರು. ನಂತರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಈಗ ಮತ್ತೆ ತಮ್ಮ ಸಚಿವ ಸಂಪುಟದ ಸದಸ್ಯರ ಜೊತೆ ಸುತ್ತೂರು ಶ್ರೀಗಳ ಭೇಟಿಗೆ ಆಗಮಿಸ್ತಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ.
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಂತರ ಎಲ್ಲ ಸಚಿವರು ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಚಿವ ಸ್ಥಾನ ಸಿಗದ ಶಾಸಕರ ಅಸಮಾಧಾನ, ಖಾತೆ ಸಿಕ್ಕ ಸಚಿವರ ಕ್ಯಾತೆ ಸಿಎಂಗೆ ತಲೆ ಬಿಸಿ ತಂದಿದೆ. ಅದರಿಂದ ಕೊಂಚ ಬ್ರೇಕ್ ಪಡೆದು ರಿಲ್ಯಾಕ್ಸ್ ಆಗಲು ಸಿಎಂ ಮೈಸೂರಿನ ಕಡೆಗೆ ಬರ್ತಿದ್ದಾರಾ ಅನ್ನೋ ಅನುಮಾನ ಎಲ್ಲರನ್ನೂ ಕಾಡ್ತಿದೆ. ನಾಡದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಈ ಎಲ್ಲ ಸಮಸ್ಯೆಗಳಿಂದ ಸಿಎಂ ಹೊರ ಬರ್ತಾರಾ ಅಂತಾ ಕಾದು ನೋಡಬೇಕಿದೆ.
ಸಿಎಂ ಬರುತ್ತಾರೆಂದು ತರಾತುರಿಯಲ್ಲಿ ಗುಂಡಿ ಮುಚ್ಚುವ ಕೆಲಸ
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ಸುತ್ತೂರಿಗೆ ತೆರಳುವ ರಸ್ತೆ ಗುಂಡಿಗಳಿಗೆ ತೇಪೆ ಹಾಕಲಾಗಿದೆ. ಇಷ್ಟು ದಿನ ಜನರು ದೂರು ನೀಡಿದ್ದರೂ ಗುಂಡಿ ಮುಚ್ಚುವ ಕಾರ್ಯ ನಡೆದಿರಲಿಲ್ಲ. ಆದ್ರೆ ಇಂದು ಸಿಎಂ ಬರುತ್ತಾರೆಂದು ತರಾತುರಿಯಲ್ಲಿ ಗುಂಡಿ ಮುಚ್ಚುವ ಕೆಲಸ ಶುರುವಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ ಟೈರ್ ಪಂಕ್ಚರ್
Published On - 8:33 am, Mon, 9 August 21