ಮುಟ್ಟುಗೋಲು ಹಾಕಿಕೊಂಡ 142 ನಿವೇಶನದ ಮಾಹಿತಿ ಬಹಿರಂಗಪಡಿಸಿ; ಮುಡಾ ಆಯುಕ್ತರಿಗೆ ಸ್ನೇಹಮಯಿ ಕೃಷ್ಣ ಪತ್ರ

| Updated By: ಸುಷ್ಮಾ ಚಕ್ರೆ

Updated on: Jan 18, 2025 | 10:11 PM

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ಹಗರಣದ ತನಿಖೆ ನಡೆಯುತ್ತಿದೆ. ಈಗಾಗಲೇ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಡಾ ಮುಟ್ಟುಗೋಲು ಹಾಕಿಕೊಂಡಿದೆ. ಸಿಎಂ ವಿರುದ್ಧದ ಮುಡಾ ನಿವೇಶನ ಹಂಚಿಕೆ ಕುರಿತು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮುಡಾ ಮುಟ್ಟುಗೋಲು ಹಾಕಿಕೊಂಡಿರುವ 142 ನಿವೇಶನಗಳ ಬಗ್ಗೆ ಮಾಹಿತಿ ಬಹಿರಂಗಪಡಿಸುವಂತೆ ದೂರುದಾರ ಸ್ನೇಹಮಯಿಕೃಷ್ಣ ಒತ್ತಾಯಿಸಿದ್ದಾರೆ.

ಮುಟ್ಟುಗೋಲು ಹಾಕಿಕೊಂಡ 142 ನಿವೇಶನದ ಮಾಹಿತಿ ಬಹಿರಂಗಪಡಿಸಿ; ಮುಡಾ ಆಯುಕ್ತರಿಗೆ ಸ್ನೇಹಮಯಿ ಕೃಷ್ಣ ಪತ್ರ
Snehamayi Krishna
Follow us on

ಮೈಸೂರು: ಸಿಎಂ ಸಿದ್ದರಾಮಯ್ಯನವರ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) 142 ನಿವೇಶನಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಡಾ ಆಯುಕ್ತರಿಗೆ ದೂರುದಾರ ಸ್ನೇಹಮಯಿ‌ಕೃಷ್ಣ ಪತ್ರ ಬರೆದಿದ್ದು, 142 ನಿವೇಶನದ ಮಾಹಿತಿ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ. ಜಾರಿ ನಿರ್ದೆಶನಾಲಯದವರು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ 142 ನಿವೇಶನಗಳ ಮಾಹಿತಿಯ ಪಟ್ಟಿಯನ್ನು ಕೂಡಲೇ ಮಾಧ್ಯಮದವರಿಗೆ ಬಿಡುಗಡೆ ಮಾಡಿ. ಅಮಾಯಕರು ವಂಚನೆಗೆ ಒಳಗಾಗುವುದನ್ನು ತಪ್ಪಿಸಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ನನಗೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ 50:50 ಅನುಪಾತದಲ್ಲಿ ಪಡೆದುಕೊಂಡಿರುವ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಪ್ರಾಧಿಕಾರಕ್ಕೆ ವಾಪಾಸ್ ಕೊಡಬೇಕಾಗುತ್ತದೆ ಎಂಬುದನ್ನು ತಿಳಿದು ಮಾರಾಟ ಮಾಡಲಾಗಿದೆ. ಅಮಾಯಕರಿಗೆ ಕಡಿಮೆ ಬೆಲೆಗೆ ನಿವೇಶನಗಳನ್ನು ಮಾರಾಟ ಮಾಡಿ ವಂಚಿಸಲು ಪ್ರಯತ್ನ ಮಾಡಲಾಗಿದೆ. ಆದ್ದರಿಂದ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ 142 ನಿವೇಶನಗಳ ಮಾಹಿತಿ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲವೆಂದ ಡಿಕೆ ಶಿವಕುಮಾರ್

ಜಾರಿ ನಿರ್ದೇಶನಾಲಯ ಮುಡಾ ಕೇಸ್​ನಲ್ಲಿ 142 ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಅದರ ಮೌಲ್ಯ 300 ಕೋಟಿ ರೂ. ಎಂದು ಹೇಳಿತ್ತು. ಆ 142 ನಿವೇಶನಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಮುಡಾ ಆಯುಕ್ತರಾದ ರಘುನಂದನ್ ಅವರಿಗೆ ಪತ್ರ ಬರೆದಿದ್ದಾರೆ. ನಿಮ್ಮ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಈ ಬಗ್ಗೆ ಪ್ರಕಟಿಸಿ. ಸದರಿ ನಿವೇಶನಗಳನ್ನು ಯಾರೂ ಖರೀದಿ ಮಾಡಬಾರದೆಂಬ ಪ್ರಕಟಣೆ ನೀಡಿ. ನಾಳೆ ನಿಮ್ಮ ಕಚೇರಿ ರಜೆ ಇರುವುದರಿಂದ ಈ ಮನವಿ ಪತ್ರವನ್ನು ನಿಮಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದೇನೆ. ಸೋಮವಾರ ದಿನಾಂಕ 20.01.2025ರಂದು ನಿಮ್ಮ ಕಚೇರಿಗೆ ಈ ಮನವಿಪತ್ರವನ್ನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ