ಮೈಸೂರು: ‘ರಾಸಲೀಲೆ, ರಸಲೀಲೆ, ಕರ್ಮಕಾಂಡದ ಮಧ್ಯೆ ರಾಜಕಾರಣ ಇದೆ. ನತದೃಷ್ಟ ಮುಖ್ಯಮಂತ್ರಿ ರಾಜ್ಯಕ್ಕೆ ಸಿಕ್ಕಿರುವುದು ದುರ್ದೈವ. ಮುಖ್ಯಮಂತ್ರಿಗೆ ತಕ್ಕನಾದ ಸಹಪಾಠಿ ಮಂತ್ರಿ, ಅದಕ್ಕೊಂದು ಪಕ್ಷ. ಇವರ ಮಧ್ಯೆ ಸಿಲುಕಿ ಕೇಶವಕೃಪ, ಬಸವಕೃಪ ಒದ್ದಾಡುತ್ತಿವೆ. ಇದು ದಿಕ್ಕು ತಪ್ಪಿದ ರಾಜಕಾರಣ’ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಬುಧವಾರ ಮೈಸೂರಿನಲ್ಲಿ ವ್ಯಂಗ್ಯವಾಡಿದರು. ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಬಗ್ಗೆ ಅವರು ಲೇವಡಿ ಮಾಡಿದರು.
‘ಈ ಹಿಂದೆಲ್ಲ ಜನ ವೋಟು ಕೊಡಬೇಕಾದರೆ ಕುಲಕಸುಬು ನೋಡುತ್ತಿದ್ದರು. ಎತ್ತು ಕೊಳ್ಳಬೇಕಿದ್ದರೆ ತಳಿ ಯಾವುದೆಂದು ನೋಡುತ್ತೇವೆ. ರೇಸ್ನಲ್ಲಿ ಕುದುರೆಗೆ ದುಡ್ಡು ಕಟ್ಟುವ ಮುನ್ನ ಅದರ ಅಪ್ಪ-ಅಮ್ಮ ಎಷ್ಟು ರೇಸ್ ಗೆದ್ದಿದೆ ಅಂತ ನೋಡುತ್ತೇವೆ. ಈಗಿನ ರೇಸ್ಗಳಲ್ಲಿ ಎಷ್ಟು ದುಡ್ಡು ತಂದಿವೆ ಎಂದು ನೋಡುತ್ತಾರೆ. ಈಗ ರಾಜಕಾರಣ ಹಾಳಾಗಿಹೋಗಿದೆ’ ಎಂದು ತಮ್ಮದೇ ಧಾಟಿಯ ರೂಪಕಗಳ ಮೂಲಕ ಇಬ್ರಾಹಿಂ ಅವರು ಪ್ರಸ್ತುತ ಸನ್ನಿವೇಶವನ್ನು ವ್ಯಾಖ್ಯಾನಿಸಿದರು.
ಪರಧನ, ಪರಸತಿ, ಪರದೇಶಿ ಮಧ್ಯೆ ರಾಜಕಾರಣ ಓಡಾಟ ಮಾಡುತ್ತಿದೆ. ಈಗಿನ ಸನ್ನಿವೇಶ ಸರಿಹೋಗುತ್ತದೆಂಬ ನಂಬಿಕೆ ಇಲ್ಲ. ದೊಡ್ಡ ಕ್ರಾಂತಿಯೇ ಆಗಬೇಕಿದೆ. ಹಾಗೆ ಕ್ರಾಂತಿ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ- ಗೋಕಾಕ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿ.ಎಂ. ಇಬ್ರಾಹಿಂ ಉತ್ತರಿಸಿದರು.
ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು