ಮೈಸೂರು: ಬೆಳೆ ಕಾವಲಿಗೆ ಹೋದ ರೈತನ ಮೇಲೆ ಆನೆ ದಾಳಿ

ರಾತ್ರಿ ವೇಳೆ ಬೆಳೆ ಕಾವಲು ನಿಂತಿದ್ದಾಗ ನಡೆದ ಆನೆ ದಾಳಿಯಲ್ಲಿ ರೈತ ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುಂದೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗಾಯಾಳು ರೈತನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಮೈಸೂರು: ಬೆಳೆ ಕಾವಲಿಗೆ ಹೋದ ರೈತನ ಮೇಲೆ ಆನೆ ದಾಳಿ
ಮೈಸೂರಿನಲ್ಲಿ ಕಾಡಾನೆ ದಾಳಿಗೆ ಗಂಭೀರವಾಗಿ ಗಾಯಗೊಂಡ ರೈತ
Updated By: Rakesh Nayak Manchi

Updated on: Sep 02, 2023 | 9:55 AM

ಮೈಸೂರು, ಸೆ.2: ಬೆಳೆ ಕಾವಲಿಗೆ ಹೋದ ರೈತನ ಮೇಲೆ ಆನೆ ದಾಳಿ (Elephant Attack) ನಡೆಸಿದ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಕುಂದೂರು ಗ್ರಾಮದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸಿದ್ದರಾಜ ನಾಯ್ಕ (35) ಆನೆದಾಳಿಯಿಂದ ಗಂಭೀರವಾಗಿ ಗಾಯಗೊಂಡ ರೈತ.

ಕುಂದೂರು ಗ್ರಾಮದ ಹೊರವಲಯದ ತನ್ನ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ಕಾವಲು ಕಾಯಲೆಂದು ರೈತ ಸಿದ್ದರಾಜು ತೆರಳಿದ್ದರು. ಈ ವೇಳೆ ದಾಳಿ ನಡೆಸಿದ ಕಾಡಾನೆ ಗಂಭೀರವಾಗಿ ಗಾಯಗೊಳಿಸಿದೆ. ಮಾಹಿತಿ ತಿಳಿದ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಾವು ಬದುಕಿನ ನಡುವೆ ಸಿದ್ದರಾಜು ಹೋರಾಟ ನಡೆಸುತ್ತಿದ್ದಾರೆ.

ಮೈಸೂರು, ಚಾಮರಾಜನಗರ ಸೇರಿದಂತೆ ಕೆಲವೊಂದು ಜಿಲ್ಲೆಗಳಲ್ಲಿ ಕಾಡಾನೆಗಳ ದಾಳಿ ನಡೆಯುತ್ತಲೇ ಇದೆ. ಆಗಸ್ಟ್ 13 ರಿಂದ 10 ದಿನಗಳಲ್ಲಿ ಕಾಡಾನೆಗಳ ದಾಳಿಗೆ ಒಟ್ಟು ಐವರು ಮೃತಪಟ್ಟಿದ್ದರು. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಾಡಂಚಿನಲ್ಲಿರುವ ಜನರಲ್ಲಿ ಜಾಗೃತಿ ಮೂಡಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಹಾಸನ: ಚಿಕಿತ್ಸೆ ನೀಡಲು ಸೆರೆ ಹಿಡಿಯುತ್ತಿದ್ದಾಗ ಆನೆ ದಾಳಿ, ಮಲೆನಾಡ ಶಾರ್ಪ್ ಶೂಟರ್ ಸಾವು

ವನ್ಯ ಮೃಗಗಳಿಂದ ಮಾನವ ಜೀವ ಹಾನಿಯಾಗಬಾರದು. ಅದೇ ರೀತಿ, ಹೊಲಕ್ಕೆ ಅಳವಡಿಸಿದ ವಿದ್ಯುತ್ ಬೇಲಿಯಿಂದ ಕಾಡು ಪ್ರಾಣಿಗಳಿಗೆ ಹಾನಿಯಾಗಬಾರದು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಸಚಿವರು, ಜನವಸತಿಗಳ ಬಳಿ, ಜಮೀನುಗಳ ಬಳಿ ಆನೆಗಳು ಕಾಣಿಸಿಕೊಂಡಾಗ ಆನೆಗಳನ್ನು ಕಾಡಿಗೆ ಮರಳಿಸಲು ಮತ್ತು ಸುತ್ತಮುತ್ತಲ ಜನರಿಗೆ ವಾಟ್ಸ್ ಅಪ್, ಮೆಸೆಜ್​ ಅಥವಾ ಸಾರ್ವಜನಿಕ ಪ್ರಚಾರದ ಮೂಲಕ ಮಾಹಿತಿ ನೀಡಿ ಜೀವಹಾನಿ ತಗ್ಗಿಸುವಂತೆ ಸಲಹೆ ನೀಡಿದ್ದಾರೆ.

ಅಲ್ಲದೆ, ಆನೆಗಳ ಹಾವಳಿ ಹೆಚ್ಚಿರುವ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆಗಳನ್ನು ಕೂಡಲೇ ಕಾಡಿಗೆ ಓಡಿಸಲು ಕಾರ್ಯ ನಿರ್ವಹಿಸುತ್ತಿರುವ ಆನೆ ಕ್ಷಿಪ್ರ ಕಾರ್ಯಪಡೆಗಳ ಗುಂಪುಗಳನ್ನು ಹೆಚ್ಚಿಸುವಂತೆ ಸಚಿವ ಈಶ್ವರ ಖಂಡ್ರೆ ಅವರು ಅದಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 am, Sat, 2 September 23