ಆನೆ ದಾಳಿ ಹೆಚ್ಚಳ, ಮಾನವ ಪ್ರಾಣಿ ಸಂಘರ್ಷ ತಡೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಹತ್ವದ ಸೂಚನೆ; ಇಲ್ಲಿದೆ ವಿವರ

ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಪರಿಸ್ಥಿತಿಯ ಕುರಿತು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಪದೇ ಪದೇ ಬೆಳೆಗಳ ಮೇಲೆ ದಾಳಿ ಮಾಡುವ ಅಥವಾ ಹಳ್ಳಿಗಳಿಗೆ ಪ್ರವೇಶಿಸುವ ಕೆಲವು ಆನೆಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಅಂತಹ 14 ಆನೆಗಳ ಚಲನವಲನದ ಮೇಲೆ ನಿಗಾ ಇಡಲು ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಆನೆ ದಾಳಿ ಹೆಚ್ಚಳ, ಮಾನವ ಪ್ರಾಣಿ ಸಂಘರ್ಷ ತಡೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಹತ್ವದ ಸೂಚನೆ; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Aug 22, 2023 | 7:54 PM

ಬೆಂಗಳೂರು, ಆಗಸ್ಟ್ 22: ಸರಣಿ ಆನೆ ದಾಳಿಗಳಿಂದಾಗಿ (Elephant Attack) ರಾಜ್ಯದಲ್ಲಿ ಐವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ (Eshwar Khandre) ಅವರು ಮಂಗಳವಾರ ಆನೆಗಳ ಕಾರ್ಯಪಡೆ ಮತ್ತು ರೇಡಿಯೋ ಕಾಲರ್ ಅಳವಡಿಕೆ ಬಲಪಡಿಸುವಂತೆ ಇಲಾಖೆಗೆ ಸೂಚಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷ ಮತ್ತು ಅದರಿಂದ ಉಂಟಾಗುವ ಸಾವುನೋವುಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಈ ಸಂಘರ್ಷದ ಪರಿಣಾಮವಾಗಿ ವಿದ್ಯುದಾಘಾತದಿಂದ ಪ್ರಾಣಿಗಳು ಸಾವಿಗೀಡಾಗುತ್ತಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಸಂಘರ್ಷಗಳನ್ನು ಕಡಿಮೆ ಮಾಡಲು ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವಂತೆ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮನುಷ್ಯರ ಆವಾಸಸ್ಥಾನಗಳಲ್ಲಿ ಆನೆಗಳ ಗೋಚರಿಸುವಿಕೆಯ ಬಗ್ಗೆ ಜನರಿಗೆ ನೈಜ ಸಮಯದಲ್ಲಿ ಎಚ್ಚರಿಕೆಗಳನ್ನು ಕಳುಹಿಸುವ ಅವಶ್ಯಕತೆಯಿದೆ. ಪ್ರಾಣಿಗಳನ್ನು ಮರಳಿ ಕಾಡಿಗೆ ಕಳುಹಿಸಲು ಪ್ರಯತ್ನಿಸಬೇಕು. ಇದು ಸಾವುನೋವುಗಳನ್ನು ಕಡಿಮೆ ಮಾಡಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಪರಿಸ್ಥಿತಿಯ ಕುರಿತು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಪದೇ ಪದೇ ಬೆಳೆಗಳ ಮೇಲೆ ದಾಳಿ ಮಾಡುವ ಅಥವಾ ಹಳ್ಳಿಗಳಿಗೆ ಪ್ರವೇಶಿಸುವ ಕೆಲವು ಆನೆಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಅಂತಹ 14 ಆನೆಗಳ ಚಲನವಲನದ ಮೇಲೆ ನಿಗಾ ಇಡಲು ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಸಂಘರ್ಷ ಮರುಕಳಿಸುತ್ತಿರುವ ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ ಬಲಪಡಿಸುವ ಅಗತ್ಯವಿದೆ ಎಂದು ಖಂಡ್ರೆ ತಿಳಿಸಿದರು. 30 ರೇಡಿಯೋ ಕಾಲರ್‌ಗಳನ್ನು ಇಲಾಖೆ ಖರೀದಿಸಿ ಪದೇ ಪದೇ ದಾಳಿ ಮಾಡುವಂಥ ಇತರ ಆನೆಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಕೊಡಗು; ಸಿದ್ದಾಪುರ ಸಮೀಪ ಕಾಡಾನೆ ದಾಳಿಗೆ ಮಹಿಳೆ ಸಾವು, ವಾರದ ಅವಧಿಯಲ್ಲಿ ಎರಡನೇ ಘಟನೆ

ಆನೆಗಳು ಮಾನವ ವಾಸಸ್ಥಳಕ್ಕೆ ನುಗ್ಗುವುದನ್ನು ತಡೆಯಲು ಅಳವಡಿಸಲಾಗಿರುವ ಬ್ಯಾರಿಕೇಡ್‌ಗಳ ವಿವರಗಳನ್ನೂ ಸಚಿವರು ಕೇಳಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಒಂದು ಆನೆಯನ್ನು ಕಳೆದ ವಾರವಷ್ಟೇ ಸೆರೆಹಿಡಿಯಲಾಗಿತ್ತು. ಅದಾದ ಮೇಲೆ ಮತ್ತೆ ಆನೆ ದಾಳಿ ನಡೆದಿತ್ತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ