ದಸರಾ ಆನೆ ಬಲರಾಮನಿಗೆ ಗುಂಡೇಟು; ಜಮೀನು ಮಾಲೀಕ ಅರೆಸ್ಟ್, ಸಿಂಗಲ್ ಬ್ಯಾರಲ್ ಬಂದೂಕು ಹಾಗೂ ಕಾರ್ಟರಿಡ್ಜ್ ವಶ
ಡಿ.15ರ ಗುರುವಾರ ರಾತ್ರಿ ದಸರಾ ಆನೆ ಬಲರಾಮ ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ಹೋಗಿದ್ದು ಇದರಿಂದ ಸಿಟ್ಟಿಗೆದ್ದ ಜಮೀನಿನ ಮಾಲೀಕ ಸುರೇಶ್ ಆನೆ ಮೇಲೆ ಗುಂಡು ಹಾರಿಸಿದ್ದ.
ಮೈಸೂರು: ದಸರಾ ಆನೆ ಮೇಲೆ(Mysore Dasara Elephant) ಗುಂಡಿನ ದಾಳಿ ಮಾಡಿದ್ದ ಆರೋಪಿ ಸುರೇಶ್ ಎಂಬಾತನನ್ನು ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಬಂಧಿಸಲಾಗಿದೆ. 14 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಲರಾಮ ಆನೆ ಮೇಲೆ ಸುರೇಶ್ ಗುಂಡು ಹಾರಿಸಿದ್ದ. ಸದ್ಯ ಸುರೇಶ್ನನ್ನು ಬಂಧಿಸಲಾಗಿದೆ.
ಡಿ.15ರ ಗುರುವಾರ ರಾತ್ರಿ ದಸರಾ ಆನೆ ಬಲರಾಮ ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ಹೋಗಿದ್ದು ಇದರಿಂದ ಸಿಟ್ಟಿಗೆದ್ದ ಜಮೀನಿನ ಮಾಲೀಕ ಸುರೇಶ್ ಆನೆ ಮೇಲೆ ಗುಂಡು ಹಾರಿಸಿದ್ದ. ಈ ವೇಳೆ ಆನೆಯ ತೊಡೆ ಬಳಿ ಗುಂಡು ಹೊಕ್ಕಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಆನೆ ಬಲರಾಮನಿಗೆ ಚಿಕಿತ್ಸೆ ನೀಡುತ್ತಿದ್ದು ಚೇತರಿಕೆ ಕಾಣುತ್ತಿದೆ. ಬಲರಾಮನ ಮೇಲೆ ಗುಂಡು ಹಾರಿಸಿದ ಹಿನ್ನೆಲೆ ವನ್ಯ ಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಸುರೇಶ್ನನ್ನು ಬಂಧಿಸಿ ಸಿಂಗಲ್ ಬ್ಯಾರಲ್ ಬಂದೂಕು ಹಾಗೂ ಕಾರ್ಟರಿಡ್ಜ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ದಸರಾ ಆನೆ ಬಲರಾಮನನ್ನು 1987 ರಲ್ಲಿ ಕೊಡಗಿನ ಸೋಮವಾರಪೇಟೆ ಬಳಿಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು. 64 ವರ್ಷ ಪ್ರಾಯದ ಬಲರಾಮ 8 ಅಡಿ 10 ಇಂಚು ಇದ್ದು, ಸದ್ಯ 4535 ಕೆಜಿ ತೂಕವಿದೆ.
ಇದನ್ನೂ ಓದಿ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೇಸರಿ ಕಂಡು ಕೆರಳಿದ ಕೋಮು ಗಲಭೆ ಸಂಚಿನ ಸಂಚುಕೋರರು
Published On - 11:53 am, Sat, 17 December 22