ಮೈಸೂರು: ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅಪಾರ ಬೆಳೆ ಹಾನಿ ಉಂಟಾಗಿದೆ. ಇಲ್ಲಿನ ಹುಣಸೂರು ತಾಲೂಕಿನಲ್ಲಿ ಮಳೆಯಿಂದ ಅಪಾರ ಬೆಳೆ ಹಾನಿ, ನಾಶ ಆಗಿದ್ದು ಕೊಡಗು- ಹುಣಸೂರು ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶವಾಗಿದ್ದು ಮಾತ್ರವಲ್ಲದೆ, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಚಿಕ್ಕ ಹುಣಸೂರಿನಲ್ಲಿ 5 ಎಕರೆಯಲ್ಲಿದ್ದ ಬಾಳೆ ಬೆಳೆಗೆ ಹಾನಿಯಾಗಿದೆ. ಗೌಡಗೆರೆಯಲ್ಲಿ 5 ಕಂಬ, ಕಿರಿಜಾಜಿಯಲ್ಲಿ 4 ವಿದ್ಯುತ್ ಕಂಬ, ದೊಡ್ಡ ಹೆಜ್ಜೂರಿನಲ್ಲಿ 2 ಕಂಬ, ಚಿಲ್ಕುಂದದಲ್ಲಿ 1 ಕಂಬ ಧರೆಗೆ ಉರುಳಿ ಬಿದ್ದಿದೆ.
ಕಟ್ಟೆಮಳಲವಾಡಿ ಗ್ರಾಮದಲ್ಲಿ ಮರ ಬಿದ್ದು ದ್ವಿಚಕ್ರವಾಹನ ಜಖಂ ಆಗಿದೆ. ಅಕಾಲಿಕ ಮಳೆಯಿಂದ ಮಾವು, ತಂಬಾಕು, ಅಡಿಕೆ ಬೆಳೆ ನಾಶವಾಗಿದೆ. ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತರ ಒತ್ತಾಯ ಕೇಳಿಬಂದಿದೆ. ರಸ್ತೆಗಳಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿದೆ. ಕಟ್ಟೆಮಳಲವಾಡಿಯಲ್ಲಿ ಮನೆಯ ಮೇಲೆ ಮರ ಬಿದ್ದು ಮೇಲ್ಚಾವಣಿ ಹಾನಿ ಉಂಟಾಗಿದೆ.
ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಹುಣಸೂರು ತಾಲೂಕಿನಾದ್ಯಂತ ಭಾರಿ ಹಾನಿಯಾಗಿದೆ. ಬಿರುಗಾಳಿಗೆ ಕೊಡಗು ಹುಣಸೂರು ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶವಾಗಿದ್ದು ಹಲವಾರು ವಿದ್ಯುತ್ ಕಂಬಗಳು, ಗಿಡ ಮರಗಳು ಧರೆಗೆ ಉರುಳಿವೆ. ಆಲಿಕಲ್ಲು ಬಿರುಗಾಳಿ ಸಹಿತ ಬಾರೀ ಮಳೆ ಆಗಿದೆ. ಚಿಕ್ಕ ಹುಣಸೂರಿನ ಮರಿಯಮ್ಮ ಬೆಳೆದಿದ್ದ 5 ಎಕರೆ ನೇಂದ್ರ ಬಾಳೆಗೆ ಹಾನಿಯಾಗಿದೆ. ಸುಮಾರು 8 ಲಕ್ಷ ನಷ್ಟವಾಗಿದ್ದು ರೈತ ಮಹಿಳೆ ಕಣ್ಣೀರು ಹಾಕಿದ್ದಾರೆ.
ಭಾರಿ ಮಳೆಗೆ ಮರ ಉರುಳಿ ಬಿದ್ದು ರೈತ ಮಹಿಳೆ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗ್ರಾಮ ಬೋರೆಕೊಪ್ಪಲಿನಲ್ಲಿ ನಡೆದಿದೆ. ಇಲ್ಲಿನ ಪುಟ್ಟಮ್ಮ ಸ್ವಾಮಿಗೌಡ (30) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಮನೆ ಮುಂದೆ ಕಟ್ಟಿದ್ದ ಮೇಕೆ ದನ ಕೊಟ್ಟಿಗೆ ಕಟ್ಟಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಅಲ್ಲಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳಿಂದಾಗಿ ತಾಲ್ಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಇತ್ತ, ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಅರಕೆರೆ ಗ್ರಾಮದ ಬಳಿ ಮ್ಯಾಕ್ಸಿ ಕ್ಯಾಬ್, ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ಹಾರಂಗಿ ಉಪವಿಭಾಗದ ಎಇಇಯಾಗಿದ್ದ ಹೆಚ್.ಆರ್. ಪ್ರಕಾಶ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ವರುಣನ ಆರ್ಭಟ; ಬೆಂಗಳೂರು, ಕೊಡಗು, ಮೈಸೂರಿನಲ್ಲಿ ಇನ್ನೆರಡು ದಿನ ಮಳೆ
ಇದನ್ನೂ ಓದಿ: Summer rains on Bangalore: ಯುಗಾದಿ ಮುನ್ನಾ ದಿನ ಬೆಂಗಳೂರಿಗೆ ಮಳೆ ಸಿಂಚನ
Published On - 8:43 am, Sat, 2 April 22