Karnataka Rain: ಕರ್ನಾಟಕದಲ್ಲಿ ವರುಣನ ಆರ್ಭಟ; ಬೆಂಗಳೂರು, ಕೊಡಗು, ಮೈಸೂರಿನಲ್ಲಿ ಇನ್ನೆರಡು ದಿನ ಮಳೆ
Bengaluru Rain Today: ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಇಂದಿನಿಂದ 2 ದಿನ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು: ಇಂದು ಯುಗಾದಿ (Ugadi 2022) ಸಂಭ್ರಮ. ಯುಗಾದಿ ಹಬ್ಬದ ಹಿಂದಿನ ದಿನ ಅಂದರೆ ನಿನ್ನೆ ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆರಾಯ (Rainfall) ತಂಪೆರೆದಿದ್ದಾನೆ. ಬಿಸಿಲ ಧಗೆಯಿಂದ ಬಸವಳಿದಿದ್ದ ಭೂಮಿಗೆ ಮಳೆಯ ಸಿಂಚನವಾಗಿದೆ. ಇಂದಿನಿಂದ 2 ದಿನಗಳ ಕಾಲ ಕರ್ನಾಟಕದ (Karnataka Rains) ಅನೇಕ ಭಾಗಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 2) ಮತ್ತು ನಾಳೆ (ಏಪ್ರಿಲ್ 3) ಮಳೆಯಾಗುವ ಸಾಧ್ಯತೆ ಇದೆ. ಇನ್ನೆರಡು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು ಮತ್ತು ಮೈಸೂರಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.
ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಇಂದಿನಿಂದ 2 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಲಡಾಕ್, ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ, ತಮಿಳುನಾಡು ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ ಮಾತ್ರವಲ್ಲದೆ ಅಸ್ಸಾಂ, ಸಿಕ್ಕಿಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಏ. 5ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕೇರಳದಲ್ಲೂ ಗುಡುಗು ಸಹಿತ ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯನ್ನು ನಿರೀಕ್ಷಿಸಲಾಗಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಚದುರಿದ ಮಳೆಯಾಗಲಿದೆ.
ಶುಕ್ರವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ನಿನ್ನೆ ಸಂಜೆ ಪಿ.ಜಿ.ಪಾಳ್ಯ ಸುತ್ತಮುತ್ತ ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆ ಬಿದ್ದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಬಿರುಗಾಳಿ ಸಹಿತ ವರುಣನ ಆರ್ಭಟ ಜೋರಾಗಿದೆ. ಮೈಸೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪಿರಿಯಾಪಟ್ಟಣದಲ್ಲಿ ಮಳೆಯಿಂದ ದೊಡ್ಡ ಗಾತ್ರದ ಮರವೊಂದು ಮುರಿದುಬಿದ್ದು ನಿನ್ನೆ ಮಹಿಳೆ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಬಸವನಗುಡಿ, ಜಯನಗರ, ಕೋರಮಂಗಲ, ಬೊಮ್ಮನಹಳ್ಳಿ, ವೈಟ್ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ಮಲ್ಲೇಶ್ವರಂ, ಚಾಮರಾಜಪೇಟೆ, ಹನುಮಂತನಗರ, ಬನಶಂಕರಿ ಸುತ್ತಮುತ್ತ ಶುಕ್ರವಾರ ಸಂಜೆ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಏಕಾಏಕಿ ಸುರಿದ ಮಳೆ, ಬಿಸಿಲಿನ ಝಳದಿಂದ ತತ್ತರಿಸಿದ್ದ ಜನತೆಗೆ ತಂಪು ನೀಡಿತು. ಆದರೆ, ಏಕಾಏಕಿ ಸುರಿದ ಮಳೆಯಿಂದಾಗಿ ಬೆಂಗಳೂರಿನ ಸಿಲ್ಕ್ ಬೋರ್ಡ್, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುವಂತಾಯಿತು.
ಇಂದಿನಿಂದ ಏ. 5ರವರೆಗೆ ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಜಾರ್ಖಂಡ್, ಗುಜರಾತ್, ಮಧ್ಯಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಸಿ ಗಾಳಿ (ಹೀಟ್ ವೇವ್) ಹೆಚ್ಚಾಗಲಿದೆ. ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕೂಡ ಬಿಸಿಗಾಳಿ ಉಂಟಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Karnataka Rain: ಕರಾವಳಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಇಂದು ಗಾಳಿ ಸಹಿತ ಮಳೆ
Karnataka Rain: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ