ಮೈಸೂರು ದಸರಾ: ಜಂಬೂಸವಾರಿ ನೋಡಲು ಹೋಗ್ತೀರಾ?; ಇಲ್ಲಿ ಗಮನಿಸಿ

ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ವಿಐಪಿ, ವಿವಿಐಪಿ ಹಾಗೂ ಜನ ಸಾಮಾನ್ಯರಿಗೆ ಸೇರಿ 40 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಪಾಸ್​ ನಲ್ಲಿ ಉಲ್ಲೇಖಿಸಲಾದ ಗೇಟ್​ ಮೂಲಕ ಮಾತ್ರ ಎಂಟ್ರಿ ಇರಲಿದೆ.

ಮೈಸೂರು ದಸರಾ: ಜಂಬೂಸವಾರಿ ನೋಡಲು ಹೋಗ್ತೀರಾ?; ಇಲ್ಲಿ ಗಮನಿಸಿ
ಮೈಸೂರು ದಸರಾ

Updated on: Oct 01, 2025 | 3:57 PM

ಮೈಸೂರು, ಅಕ್ಟೋಬರ್​ 01: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ (Jamboo Savari) ಕಣ್ತುಂಬಿಕೊಳ್ಳಲು ಲಕ್ಷೋಪಾದಿಯಲ್ಲಿ ಜನ ಕಾತರದಿಂದ ಕಾಯುತ್ತಿದ್ದಾರೆ. ನಾಳೆ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆ ಅಂತಿಮ ಹಂತ ತಲುಪಿದ್ದು, ಯಾವುದೇ ಸಮಸ್ಯೆ ಉಂಟಾಗದಂತೆ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗ್ತಿದೆ. ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸೇರಿದಂತೆ ಹಲವು ಗಣ್ಯಾತಿ ಗಣ್ಯರು ಈ ವೇಳೆ ಉಪಸ್ಥಿತರಿರಲಿದ್ದಾರೆ.

ನಾಳಿನ ಕಾರ್ಯಕ್ರಮ ಏನೇನು?

ಮಧ್ಯಾಹ್ನ 1ರಿಂದ 1.18ರವರೆಗೆ ಸಲ್ಲುವ ಶುಭ ಧನುರ್‌ ಲಗ್ನದಲ್ಲಿಅರಮನೆ ಬಲರಾಮ ದ್ವಾರದಲ್ಲಿನ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಬಳಿಕ ಸಂಜೆ 4.42ರಿಂದ 5.06 ಗಂಟೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆ ಆವರಣದಲ್ಲಿ ಅಭಿಮನ್ಯು ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಗೊಂಡ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನಡೆಯಲಿದೆ. ರಾಜವಂಶಸ್ಥ ಮತ್ತು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸೇರಿ ಹಲವರು ಈ ವೇಳೆ ಉಪಸ್ಥಿತರಿರಲಿದ್ದಾರೆ. ವಿಜಯದಶಮಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು, 125ಕ್ಕೂ ಹೆಚ್ಚು ಕಲಾತಂಡಗಳು, 14 ಆನೆಗಳ ಗಜಪಡೆ, ಅಶ್ವಾರೋಹಿ ಪಡೆಗಳು ಭಾಗವಹಿಸಲಿವೆ.

ಇದನ್ನೂ ಓದಿ: ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಗೊಂಡ ರಾಜ್ಯ ಸರ್ಕಾರದ ಶಕ್ತಿ ಯೋಜನೆ

ಜಂಬೂ ಸವಾರಿಗೆ ಕ್ಷಣಗಣನೆ ಹಿನ್ನಲೆ ಮೈಸೂರು ಅರಮನೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಮೆರವಣಿಗೆ ಕಣ್ತುಂಬಿಕೊಳ್ಳಲು ಬರುವವರಿಗಾಗಿ 40 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗದ ಉದ್ದಕ್ಕೂ ವಿಐಪಿ, ವಿವಿಐಪಿ ಹಾಗೂ ಜನ ಸಾಮಾನ್ಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತ್ಯೇಕ ಬ್ಲಾಕ್ ಗಳ ನಿರ್ಮಾಣ ಮಾಡಲಾಗಿದ್ದು, ಪಾಸ್​ನಲ್ಲಿ ಉಲ್ಲೇಖಿಸಲಾದ ಗೇಟ್​ ಮೂಲಕ ಮಾತ್ರ ಎಂಟ್ರಿ ಇರಲಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:47 pm, Wed, 1 October 25