Mysuru: 40 ದಿನಗಳಲ್ಲಿ 22 ಹುಲಿ ಸೆರೆ; ನಿಟ್ಟುಸಿರು ಬಿಟ್ಟ ಕಾಡಂಚಿನ ಜನ

ಮೈಸೂರು ಭಾಗದಲ್ಲಿ ಹೆಚ್ಚಿದ್ದ ಹುಲಿ ದಾಳಿಗಳಿಂದ ಆತಂಕಗೊಂಡಿದ್ದ ಕಾಡಂಚಿನ ಜನರಿಗೆ ಅರಣ್ಯ ಇಲಾಖೆ ರಿಲೀಫ್​​ ನೀಡಿದೆ. ಕೇವಲ 40 ದಿನಗಳಲ್ಲಿ 22 ಹುಲಿಗಳನ್ನು ಸೆರೆ ಹಿಡಿದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಇಲಾಖೆ ಹೊಸ ತಂತ್ರಜ್ಞಾನಗಳ ಬಳಕೆ ಜೊತೆಗೆ ಮುಖವಾಡಗಳನ್ನು ಸಹ ವಿತರಿಸಿತ್ತು.

Mysuru: 40 ದಿನಗಳಲ್ಲಿ 22 ಹುಲಿ ಸೆರೆ; ನಿಟ್ಟುಸಿರು ಬಿಟ್ಟ ಕಾಡಂಚಿನ ಜನ
ಹುಲಿ
Updated By: ಪ್ರಸನ್ನ ಹೆಗಡೆ

Updated on: Dec 04, 2025 | 6:48 PM

ಮೈಸೂರು, ಡಿಸೆಂಬರ್​​ 04: ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ವ್ಯಾಘ್ರನ ಅಟ್ಟಹಾಸಕ್ಕೆ ಮೈಸೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಜನರು ಬೆಚ್ಚಿ ಬಿದ್ದಿದ್ದರು. ಮನೆಯಿಂದ ಹೊರ ಹೋಗಲೂ ಭಯಪಡಬೇಕಾದ ಸ್ಥಿತಿ ಎದುರಾಗಿತ್ತು. ಮಾನವ-ಕಾಡು ಪ್ರಾಣಿ ಸಂಘರ್ಷ ಹೆಚ್ಚಿದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ ಕೇವಲ 40 ದಿನಗಳ ಅವಧಿಯಲ್ಲಿ 22 ಹುಲಿಗಳನ್ನು ಸೆರೆ ಹಿಡಿದಿದೆ. ಆ ಮೂಲಕ ಗ್ರಾಮಗಳಲ್ಲಿನ ನಿವಾಸಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅರಣ್ಯ ಇಲಾಖೆ 22 ಹುಲಿಗಳನ್ನು ಸೆರೆ ಹಿಡಿದಿದ್ದು, ಆ ಪೈಕಿ ಮರಿ ಹುಲಿಗಳೇ ಹೆಚ್ಚಿವೆ. ಎಲ್ಲವೂ ಆರೋಗ್ಯವಾಗಿದ್ದು, ಇವುಗಳನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಇವುಗಳನ್ನು ಕಾಡಿನಲ್ಲಿ ಸುರಕ್ಷಿತ ಸ್ಥಳಕ್ಕೆ ಬಿಡಬೇಕಾ? ಅಥವಾ ಪುನರ್ವಸತಿ ಕೇಂದ್ರದಲ್ಲೇ ಆರೈಕೆ ಮಾಡಬೇಕಾ? ಎನ್ನುವ ನಿರ್ಧಾರವನ್ನು ಅಧಿಕಾರಿಗಳು ಮಾಡಲಿದ್ದಾರೆ.

ಇದನ್ನೂ ಓದಿ: ಹುಲಿ ದಾಳಿ ಭೀತಿ; ಬಂಡೀಪುರ, ನಾಗರಹೊಳೆ ಸಫಾರಿಗೆ ತಾತ್ಕಾಲಿಕ ನಿಷೇಧ

ಹುಲಿಗಳ ದಾಳಿ ಪ್ರಕರಣಗಳು ಹೆಚ್ಚಿದ್ದ ಹಿನ್ನಲೆ ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿತ್ತು. ಸುಂದರ್‌ಬನ್ಸ್ ಮಾದರಿಯಂತೆ ರೈತರು ಮತ್ತು ದನಗಾಹಿಗಳಿಗೆ ಮುಖವಾಡಗಳನ್ನು ವಿತರಿಸಿತ್ತು. ಹುಲಿಗಳು ಹಿಂಬದಿಯಿಂದ ದಾಳಿ ಮಾಡುವುದನ್ನು ತಡೆಯಲು ಈ ಮುಖವಾಡಗಳು ಸಹಾಯಕವಾಗಲಿವೆ ಎಂದಿದ್ದ ಇಲಾಖೆ, ಸುಮಾರು 10,000 ಮುಖವಾಡಗಳನ್ನು ವಿವಿಧ ಗ್ರಾಮಗಳಲ್ಲಿ ವಿರಿಸಿತ್ತು. ಜೊತೆಗೆ ಕಾಡು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು. ಇದರ ನಡು ನಡುವೆಯೇ ಹುಲಿಗಳ ಸೆರೆಗೂ ಕಾರ್ಯಾಚರಣೆ ನಡೆದಿದ್ದು ಈವರೆಗೆ 22 ಹುಲಿಗಳನ್ನು ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ.

ಸಫಾರಿ ಪುನರಾರಂಭಕ್ಕೆ ಒತ್ತಾಯ

ಹುಲಿಗಳ ಸೆರೆಯಿಂದಾಗಿ ಕಾಡಂಚಿನ ಗ್ರಾಮಗಳ ಜನರು ಕೊಂಚ ನಿರಾಳರಾಗಿದ್ದಾರೆ. ಮತ್ತೊಂದೆಡೆ ಹುಲಿ ಸಮಸ್ಯೆಯಿಂದ ಬಂದ್ ಮಾಡಲಾಗಿದ್ದ ಕಾಡಿನ ಸಫಾರಿಯನ್ನು ಮತ್ತೆ ಆರಂಭಿಸಬೇಕೆಂದು ಮೈಸೂರು ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಗಣನೀಯವಾಗಿ ಹೆಚ್ಚಾದ ಬೆನ್ನಲ್ಲೇ, ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ತುರ್ತು ಕ್ರಮಕ್ಕೆ ಮುಂದಾಗಿತ್ತು. ಸಿಬ್ಬಂದಿಯನ್ನು ಕೂಂಬಿಂಗ್‌ಗೆ ಬಳಸಿಕೊಳ್ಳುವ ಸಲುವಾಗಿ ಬಂಡೀಪುರ ಮತ್ತು ನಾಗರಹೊಳೆಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.