ಬಸ್​ನಲ್ಲಿ ಪುರುಷ ಪ್ರಯಾಣಿಕರಿಗೆ ಸೀಟುಗಳನ್ನು ಬಿಟ್ಟುಕೊಡಿ: ಕೆಎಸ್​ಆರ್​ಟಿಸಿ ಮೈಸೂರು ವಿಭಾಗದಿಂದ ಆದೇಶ!

| Updated By: Ganapathi Sharma

Updated on: Feb 21, 2025 | 10:36 AM

ಮಹಿಳೆಯರಿಗೆ ಬಸ್ಸಿನಲ್ಲಿ ಸೀಟು ಬಿಟ್ಟುಕೊಡಿ ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ, ಪುರುಷರಿಗೆ ಆಸನ ಕೊಡಿ ಎನ್ನುವುದನ್ನು ಎಲ್ಲಾದರೂ ಕೇಳಿದ್ದೇವೆಯೇ? ಇದೀಗ ಕೆಎಸ್​ಆರ್​ಟಿಸಿಯ ಮೈಸೂರು ವಿಭಾಗ ಅಂಥದ್ದೊಂದು ಆದೇಶವನ್ನೇ ಹೊರಡಿಸಿದೆ! ಅಚ್ಚರಿ ಆದರೂ ನಂಬಲೇಬೇಕು. ಇದಕ್ಕೆ ಕಾರಣವೇನು? ಆದೇಶದಲ್ಲಿ ಏನಿದೆ? ವಿವರಗಳಿಗೆ ಮುಂದೆ ಓದಿ.

ಬಸ್​ನಲ್ಲಿ ಪುರುಷ ಪ್ರಯಾಣಿಕರಿಗೆ ಸೀಟುಗಳನ್ನು ಬಿಟ್ಟುಕೊಡಿ: ಕೆಎಸ್​ಆರ್​ಟಿಸಿ ಮೈಸೂರು ವಿಭಾಗದಿಂದ ಆದೇಶ!
ಕೆಎಸ್​ಆರ್​ಟಿಸಿ ಬಸ್ (ಸಾಂದರ್ಭಿಕ ಚಿತ್ರ)
Follow us on

ಮೈಸೂರು, ಫೆಬ್ರವರಿ 21: ‘‘ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟಿರುವ ಸೀಟುಗಳನ್ನು ಅವರಿಗೇ ಬಿಟ್ಟುಕೊಡಿ. ಮಹಿಳೆಯರಿಗೆ ಮೀಸಲಾತಿರುವ ಆಸನದಲ್ಲಿ ಕುಳಿತು ಪ್ರಯಾಣಿಸಿದರೆ ದಂಡ ವಿಧಿಸಲಾಗುವುದು’’, ಇತ್ಯಾದಿ ಸಂದೇಶಗಳನ್ನು ಹಿಂದೆ ನಾವು ಬಸ್ಸುಗಳಲ್ಲಿ ಓದಿರುತ್ತೇವೆ. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ. ಇದೀಗ ಪುರುಷರಿಗೆ ಸೀಟು ಬಿಟ್ಟುಕೊಡಿ ಎಂದು ಹೇಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅಷ್ಟೇ ಏಕೆ, ಈ ವಿಚಾರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗ ಅಧಿಕೃತ ಆದೇಶವನ್ನೂ ಹೊರಡಿಸಿದೆ!

ಮಹಿಳಾ ಪ್ರಯಾಣಿಕರೇ ಹೆಚ್ಚು ಇರುವ ಕಾರಣ ಪುರುಷ ಪ್ರಯಾಣಿಕರಿಗೆ ಸೀಟು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಪುರುಷ ಪ್ರಯಾಣಿಕರಿಗೆ ಮೀಸಲಿರುವ ಸೀಟುಗಳನ್ನು ಅವರಿಗೆ ಬಿಟ್ಟುಕೊಡಬೇಕು. ಈ ಬಗ್ಗೆ ಗಮನ ಹರಿಸಬೇಕು ಎಂದು ಕೆಎಸ್ಆರ್​ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕರು ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ಆದೇಶ ಹೊರಡಿಸಿರುವುದು ಈಗ ಬೆಳಕಿಗೆ ಬಂದಿದೆ.

ಕೆಎಸ್‌ಆರ್‌ಟಿಸಿ ಆದೇಶದಲ್ಲಿ ಏನಿದೆ?

ಪುರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳೆಯರು ಕುಳಿತು ಪ್ರಯಾಣಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗುತ್ತಿದೆ. ಮೈಸೂರು ನಗರ ಸಾರಿಗೆ ವಾಹನಗಳಲ್ಲಿನ ಮರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳಾ ಪ್ರಯಾಣಿಕರು ಕುಳಿತುಕೊಳ್ಳುತ್ತಿದ್ದು, ಪುರುಷ ಪ್ರಯಾಣಿಕರಿಗೆ ಆಸನಗಳು ಸಿಗುವುದಿಲ್ಲವೆಂದು ಶ್ರೀ ವಿಷ್ಣುವರ್ಧನ.ಎಸ್ ಎಂಬವರು ಕೇಂದ್ರ ಕಚೇರಿಗೆ ಉಲ್ಲೇಖದಂತೆ ದೂರು ಸಲ್ಲಿಸಿರುವುದು ಸರಿಯಷ್ಟೆ. ಅದರಂತೆ ತಮ್ಮ ಘಟಕಗಳಿಂದ ಕಾರ್ಯಾಚರಣೆಯಾಗುವ ಎಲ್ಲಾ ವಾಹನಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿಸಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಲು ಕ್ರಮಕೈಗೊಳ್ಳುವಂತೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ ಹಾಗೂ ತೆಗೆದುಕೊಂಡ ಕ್ರಮದ ಉರಿತು ಅನುಸರಣಾ ವರದಿ ಕಳುಹಿಸಬೇಕು ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಕೆಎಸ್​ಆರ್​ಟಿಸಿ ಆದೇಶದ ಪ್ರತಿ

ಇದನ್ನೂ ಓದಿ: ಟಿಕೆಟ್​ ದರ ಏರಿಕೆ ನಿರ್ಧಾರ ಬೆನ್ನಲ್ಲೇ ಸಾರಿಗೆ ನೌಕರರಿಗೆ ಸರ್ಕಾರದಿಂದ ಗುಡ್​ ನ್ಯೂಸ್​

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದು ಅಂಕಿ ಅಂಶಗಳಿಂದ ತಿಳಿಬಂದಿದೆ. ಹೀಗಾಗಿ ಪುರುಷ ಪ್ರಯಾಣಿಕರಿಗೆ ಸೀಟು ಸಿಗುತ್ತಿಲ್ಲ ಎಂಬ ಆರೋಪಗಳು ಹಲವೆಡೆ ಈ ಹಿಂದೆಯೂ ಕೇಳಿ ಬಂದಿದ್ದವು. ಆದರೆ ಈ ವಿಚಾರದಲ್ಲಿ ಕೆಎಸ್ಆರ್ಟಿಸಿ ಆದೇಶ ಹೊರಡಿಸುವಂತಾಗಿರುವುದು ಇದೇ ಮೊದಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 am, Fri, 21 February 25