ಐಎಎಸ್ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ: 5 ಆರೋಪಗಳ ಬಗ್ಗೆ ಹೇಳಿಕೆ ನೀಡಲು ವಿಚಾರಣೆಗೆ ಹಾಜರಾಗುವಂತೆ ನೋಟಿಸ್
ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ತನಿಖೆ ನಡೆಸುವಂತೆ ಶಾಸಕ ಸಾ.ರಾ.ಮಹೇಶ್ ದೂರು ನೀಡಿದ್ದರು. ಈ ಹಿನ್ನೆಲೆ ಸರ್ಕಾರಕ್ಕೆ ಸಮಗ್ರ ವರದಿ ನೀಡುವ ಸಲುವಾಗಿ ಒಟ್ಟು 5 ಗಂಭೀರ ಆರೋಪಗಳ ಬಗ್ಗೆ ಹೇಳಿಕೆ ನೀಡಲು ಸೂಚಿಸಲಾಗಿದೆ.
ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ(Rohini Sindhuri) ಮತ್ತೆ ಸಂಕಷ್ಟ ಎದುರಾಗಿದೆ. ಮೈಸೂರು ಡಿಸಿ ಆಗಿದ್ದ ವೇಳೆ ರೋಹಿಣಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಸದ್ಯ ಈಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆರೋಪಗಳಿಗೆ ಖುದ್ದು ಹಾಜರಾಗಿ ಉತ್ತರ ನೀಡುವಂತೆ ನೋಟಿಸ್ ನೀಡಲಾಗಿದೆ.
ಸರ್ಕಾರದ ಕಾರ್ಯದರ್ಶಿ ಡಾ.ಜೆ.ರವಿಶಂಕರ್‌ರಿಂದ ನೋಟಿಸ್ ಜಾರಿಯಾಗಿದ್ದು ನಾಳೆ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಬಂದು ಉತ್ತರಿಸಲು ಸೂಚಿಸಲಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ತನಿಖೆ ನಡೆಸುವಂತೆ ಶಾಸಕ ಸಾ.ರಾ.ಮಹೇಶ್ ದೂರು ನೀಡಿದ್ದರು. ಈ ಹಿನ್ನೆಲೆ ಸರ್ಕಾರಕ್ಕೆ ಸಮಗ್ರ ವರದಿ ನೀಡುವ ಸಲುವಾಗಿ ಒಟ್ಟು 5 ಗಂಭೀರ ಆರೋಪಗಳ ಬಗ್ಗೆ ಹೇಳಿಕೆ ನೀಡಲು ಸೂಚಿಸಲಾಗಿದೆ. ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ವಿಚಾರದಲ್ಲಿ ಕೋಟ್ಯಂತರ ಹಣ ಅಕ್ರಮ, ಪಾರಂಪರಿಕ ಕಟ್ಟಡದಲ್ಲಿ ಅಕ್ರಮ ಈಜುಕೊಳ ನಿರ್ಮಾಣ ಆರೋಪ, ಪಾರಂಪರಿಕ ಡಿಸಿ ನಿವಾಸದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನೆಲಹಾಸು, ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ ವಿಚಾರ ಸೇರಿದಂತೆ ಒಟ್ಟು 5 ಗಂಭೀರ ಆರೋಪಗಳ ಬಗ್ಗೆ ಹೇಳಿಕೆ ನೀಡಲು ಸರ್ಕಾರ ಸೂಚನೆ ನೀಡಿದೆ.
2021 ಮೇ ತಿಂಗಳಲ್ಲಿ 969 ಜನರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾಗ ಅಂಕಿ ಅಂಶಗಳ ಪ್ರಕಾರ 238ರ ಲೆಕ್ಕ ನೀಡಿದ್ದರು. ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿ ಕಾರಣ ಎಂಬ ಆರೋಪ ಇತ್ತು. ಹೀಗಾಗಿ ಈ ಐದು ಆರೋಪಗಳ ವಿಚಾರವಾಗಿ ರೋಹಿಣಿ ಸಿಂಧೂರಿ ಅವರಿಂದ ಹೇಳಿಕೆ ಪಡೆಯಲು ನೋಟಿಸ್ ನೀಡಲಾಗಿದೆ. ನಾಳೆ 30/07/2022 ಶನಿವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಕಾರ್ಯದರ್ಶಿ ಕಚೇರಿಗೆ ಬರಲು ತಿಳಿಸಲಾಗಿದೆ. ರೋಹಿಣಿ ಸಿಂಧೂರಿ ಬಳಿ ಹೇಳಿಕೆ ಪಡೆದ ನಂತರ ಕಾರ್ಯದರ್ಶಿ ಡಾ ಜೆ ರವಿಶಂಕರ್ ಸರ್ಕಾರಕ್ಕೆ ವರದ ಸಲ್ಲಿಸಲಿದ್ದಾರೆ.
Published On - 4:15 pm, Fri, 29 July 22