ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಅನುದಾನ ತಾರತಮ್ಯ: ಬಿಜೆಪಿ ಕ್ಷೇತ್ರಕ್ಕೆ ಜಾರಿಯಾಗಿದ್ದ ಹಣ ಕಾಂಗ್ರೆಸ್​ ಕ್ಷೇತ್ರಕ್ಕೆ ಹಂಚಿಕೆ

| Updated By: ವಿವೇಕ ಬಿರಾದಾರ

Updated on: Feb 19, 2024 | 10:35 AM

ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಗ್ಯಾರಂಟಿ ಜಾರಿಯಲ್ಲಿ ಬ್ಯೂಸಿಯಾಗಿ, ಶಾಸಕರಿಗೆ ಅನುದಾನ ನೀಡುವಲ್ಲಿ ಹಿಂದೇಟು ಹಾಕಿತ್ತು. ಹೀಗಾಗಿ ಸ್ವಪಕ್ಷದ ಶಾಸಕರೇ ಅಸಮಾಧಾನ ಹೊರಹಾಕುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ಸ್ವತಃ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ರಾಜಕೀಯ ಶುರುವಾಗಿದೆ.

ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಅನುದಾನ ತಾರತಮ್ಯ: ಬಿಜೆಪಿ ಕ್ಷೇತ್ರಕ್ಕೆ ಜಾರಿಯಾಗಿದ್ದ ಹಣ ಕಾಂಗ್ರೆಸ್​ ಕ್ಷೇತ್ರಕ್ಕೆ ಹಂಚಿಕೆ
ಕಾಂಗ್ರೆಸ್​, ಬಿಜೆಪಿ
Follow us on

ಮೈಸೂರು, ಫೆಬ್ರವರಿ 19: ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ತವರು ಕ್ಷೇತ್ರದಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ರಾಜಕೀಯ ಶುರುವಾಗಿದೆ. ಮೈಸೂರು (Mysore) ಜಿಲ್ಲೆಯ ಬಿಜೆಪಿ ಶಾಸಕರ (BJP MLA) ಕ್ಷೇತ್ರಕ್ಕೆ ಜಾರಿಯಾಗಿದ್ದ ಅನುದಾನವನ್ನು ಕಾಂಗ್ರೆಸ್ ಶಾಸಕರ (Congress MLA) ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಕೃಷ್ಣರಾಜ ಕ್ಷೇತ್ರಕ್ಕೆ 45 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿತ್ತು. ಮಂಜೂರಾಗಿದ್ದ ಈ ಅನುದಾನವನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಕಾಂಗ್ರೆಸ್ ಶಾಸಕರಿರುವ ಚಾಮರಾಜ, ಎನ್.ಆರ್ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಚಾಮರಾಜ ಕ್ಷೇತ್ರಕ್ಕೆ 20 ಕೋಟಿ ಮತ್ತು ಎನ್​ಆರ್ ಕ್ಷೇತ್ರಕ್ಕೆ 25 ಕೋಟಿ ರೂ. ಹಣ ಹಂಚಿಕೆ ಮಾಡಿದ್ದಾರೆ.

ಈ ಬಗ್ಗೆ ಪಾಲಿಕೆ ಆಯುಕ್ತರ ಬಳಿ ನಮ್ಮ ಶಾಸಕರು ಮಾತನಾಡಿದ್ದಾರೆ. ಆದರೂ ಏನು ಪ್ರಯೋಜನವಿಲ್ಲ. ಬಿಜೆಪಿ ಶಾಸಕರ ಕ್ಷೇತ್ರ ಎನ್ನುವ ಉದ್ದೇಶದಿಂದ ಅನುದಾನ ನೀಡಿಲ್ಲ. ಅಲ್ಲದೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಬಂದ ಅನುದಾನವನ್ನು ಕಾಂಗ್ರೆಸ್ ಶಾಸಕರುಗಳ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದಾರೆ. ಹಂಚಿಕೆಯಾಗಿರುವ ಅನುದಾನ ತಡೆದು ಮತ್ತೆ ನಮ್ಮ ಕ್ಷೇತ್ರಕ್ಕೆ ನೀಡಲು ಕಾಲಾವಕಾಶವಿದೆ. ಕೂಡಲೆ ಪಾಲಿಕೆ ಆಯುಕ್ತರು ನಮ್ಮ ಕ್ಷೇತ್ರದ ಅನುದಾನನೀಡಿದು ನಮಗೆ ವಾಪಾಸ್ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಪಾಲಿಕೆ ಮಾಜಿ ಮೇಯರ್ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಅನುದಾನ ಹಂಚಿಕೆ ವಿಚಾರವಾಗಿ ಕೈ ಪಾಳಯದಲ್ಲೇ ಹತ್ತಿತ್ತು ಬೆಂಕಿ

ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರದ ಬಗ್ಗೆ ರಾಜ್ಯದ ಜನರಿಗಷ್ಟೇ ಅಲ್ಲದೇ ಕಾಂಗ್ರೆಸ್‌ ಶಾಸಕರಿಗೂ ಭಾರೀ ನಿರೀಕ್ಷೆಯಿತ್ತು. ಸುಮಾರು ನಾಲ್ಕು ವರ್ಷಗಳ ತರುವಾಯ ಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಆರಂಭದಲ್ಲೇ ಒಂದಿಷ್ಟು ಕೆಲಸ ಕಾರ್ಯ ಕೈಗೊಂಡು ಜನರಲ್ಲಿ ಭರವಸೆ ಹುಟ್ಟಿಸುವ ಉಮೇದಿನಲ್ಲಿದ್ದರು. ಆದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿದ್ದ ಸರಕಾರ ಶಾಸಕರಿಗೆ ಅನುದಾನ ನೀಡುವಲ್ಲಿ ಹಿಂದೇಟು ಹಾಕಿತ್ತು.

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯ ಜನರಿಗೆ ಸಿಹಿ-ಕಹಿ ಬಜೆಟ್: ಅಂಜನಾದ್ರಿಗೆ 100 ಕೋಟಿ, ಆರ್ಥಿಕ ಸಲಹೆಗಾರನ ಕ್ಷೇತ್ರಕ್ಕೆ ಭರ್ಜರಿ ಅನುದಾನ

ಜುಲೈ 7 ರಂದು ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುವವರೆಗೆ ಸುಮ್ಮನಿದ್ದ ಶಾಸಕರು ಆ ಬಳಿಕವೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗದ ಕಾರಣ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದುಂಬಾಲು ಬಿದ್ದಿದ್ದರು. ಅಸಮಾಧಾನ ಹೊರಹಾಕಲಾರಂಭಿಸಿದ್ದರು. ಹಿರಿಯ ಶಾಸಕ ಬಿ.ಆರ್‌. ಪಾಟೀಲ್‌ ಅವರು ಬಹಿರಂಗವಾಗಿಯೇ ಅನುದಾನ ಲಭ್ಯತೆ ಕೊರತೆ ಬಗ್ಗೆ ಬೇಸರ ತೋಡಿಕೊಂಡಿದ್ದರು. ಇನ್ನೂ ಹಲವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಅನುದಾನಕ್ಕಾಗಿ ಆಗ್ರಹಿಸಿದ್ದು ನಡೆದಿತ್ತು.

ರಾಜ್ಯದಲ್ಲಿ ಸರಕಾರ ಬಂದು ಎಂಟು ತಿಂಗಳಾದರೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಗದ ಕಾರಣಕ್ಕೆ ಆಗಾಗ್ಗೆ ಅಸಮಾಧಾನ ಹೊರಹಾಕುತ್ತಿರುವ ಸ್ವಪಕ್ಷೀಯ ಶಾಸಕರನ್ನು ಸಮಾಧಾನಪಡಿಸಲು ಸಿಎಂ ಸಿದ್ದರಾಮಯ್ಯ ಅವರು ಸರಕಾರದಲ್ಲಿ ಹಣವಿಲ್ಲಎಂಬಂತೆ ಯಾರೊಬ್ಬರೂ ಅಪಪ್ರಚಾರ ಮಾಡಬಾರದು ಎಂದು ಕಿವಿಮಾತು ಹೇಳಿದ್ದರು. ಅಲ್ಲದೆ 157 ಕೋಟಿ ರೂ. ಬಿಡುಗಡೆ ಮಾಡಿದ್ದರು.

ಬಿಜೆಪಿ ಶಾಸಕರ ಅಸಮಾಧಾನ

ಇನ್ನು ಅನುಧಾನ ಹಂಚಿಕೆ ವಿಚಾರವಾಗಿ ತಾರತಮ್ಯ ಮಾಡಲಾಗಿದೆ ಎಂದು ಬಿಜೆಪಿ ಶಾಸಕರು ಅಸಮಾಧಾನ ಹೊರ ಹಾಕಿದ್ದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅನದಾನ ಹಂಚಿಕೆ ವಿಚಾರವಾಗಿ ವಿಧಾನಸೌಧದ ಎದುರು ಪ್ರತಿಭಟನೆ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ