ಬಟ್ಟೆ ವ್ಯಾಪರಿಯನ್ನ ಬುಟ್ಟಿಗೆ ಹಾಕಿಕೊಂಡು ಮನೆಗೆ ಕರೆಸಿಕೊಂಡ ಯುವತಿ: ಲಾಕ್ ಆಗಿದ್ದು ಪೊಲೀಸಪ್ಪ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿದ್ದ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ಆರೋಪಿಗಳು ಬಟ್ಟೆ ವ್ಯಾಪಾರಿಯೊಬ್ಬನನ್ನು ಬಲೆಗೆ ಬೀಳಿಸಿಕೊಂಡು ಹಣ ವಸೂಲಿ ಮಾಡಲು ಮುಂದಾಗಿದ್ದರು. ಪೊಲೀಸ್ ಪೇದೆ ಮತ್ತು ಇತರ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 10 ಲಕ್ಷ ರೂಪಾಯಿಗಳ ಬೇಡಿಕೆ ಇಡಲಾಗಿತ್ತು. ಪೊಲೀಸರು ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.

ಬಟ್ಟೆ ವ್ಯಾಪರಿಯನ್ನ ಬುಟ್ಟಿಗೆ ಹಾಕಿಕೊಂಡು ಮನೆಗೆ ಕರೆಸಿಕೊಂಡ ಯುವತಿ: ಲಾಕ್ ಆಗಿದ್ದು ಪೊಲೀಸಪ್ಪ
ವ್ಯಾಪಾರಿಯನ್ನು ಬುಟ್ಟಿಗೆ ಬೀಳಿಸಿಕೊಂಡಿದ್ದ ಯುವತಿ
Updated By: ವಿವೇಕ ಬಿರಾದಾರ

Updated on: Jun 16, 2025 | 3:28 PM

ಮೈಸೂರು, ಜೂನ್​ 16: ಹನಿಟ್ರ್ಯಾಪ್ (Honey Trap) ಕೃತ್ಯದಲ್ಲಿ ತೊಡಗಿದ್ದ ಪೊಲೀಸ್​ (Police) ಪೇದೆಯನ್ನು ಮೈಸೂರು (Mysore) ಜಿಲ್ಲೆಯ ಪಿರಿಯಾಪಟ್ಟಣ (Periyapatna) ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿ ಸುಂದರ ಯುವತಿಯನ್ನು ಮುಂದೆ ಬಿಟ್ಟು ಶ್ರೀಮಂತ ವ್ಯಕ್ತಿಗಳನ್ನು ತನ್ನ ಬಲೆಯಲ್ಲಿ ಬೀಳಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದನು. ಪ್ರಕರಣದ ಎ1 ಮೂರ್ತಿ, ಎ2 ಪೊಲೀಸ್ ಪೇದೆ ಶಿವಣ್ಣ ಹಾಗೂ ಇತರೆ ಮೂವರು ಕೃತ್ಯ ಎಸಗಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದ ನಿವಾಸಿಯಾದ ದಿನೇಶ್ ಕುಮಾರ್ ವಂಚನೆಗೆ ಒಳಗಾದವರು.

ಯುವತಿ ಜಾಲದಲ್ಲಿ ಸಿಲುಕಿದ ಬಟ್ಟೆ ವ್ಯಾಪಾರಿ

“ದಿನೇಶ್​ ಕುಮಾರ್ ಜವಳಿ ವ್ಯಾಪಾರಿಯಾಗಿದ್ದು, ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಜೂ.11 ರಂದು ರಾತ್ರಿ 7.30ರ ಸುಮಾರಿಗೆ ದಿನೇಶ್​ ಕುಮಾರ್ ಅವರ ಅಂಗಡಿಗೆ ಸುಮಾರು 23 ವರ್ಷದ ಯುವತಿ ಹೋಗಿದ್ದಾಳೆ. ದಿನೇಶ್​ ಕುಮಾರ್ ಅವರ ಅಂಗಡಿಯಲ್ಲಿ ಯುವತಿ ಎರಡು ಲೆಗ್ಗಿನ್ಸ್ ಮತ್ತು ಒಂದು ಟಾಪ್ ಖರೀದಿಸಿದ್ದಾಳೆ. ನಂತರ ಯುವತಿ “ಹೊಸ ಡಿಸೈನ್ ಬಟ್ಟೆಗಳು ನನಗೆ ಬೇಕು. ನಿಮ್ಮ ಅಂಗಡಿಗೆ ಹೊಸ ಡಿಸೈನ್ ಬಟ್ಟೆಗಳು ಬಂದರೆ ನಮಗೆ ಬೇಕಾಗುತ್ತದೆ, ನಿಮಗೆ ನಾನು ಪೊನ್ ಮಾಡುತ್ತೇನೆ, ನಿಮ್ಮ ಪೊನ್ ನಂಬರ್ ಕೊಡಿ” ಎಂದು ದಿನೇಶ್​ ಕುಮಾರ್​ ಅವರಿಂದ ನಂಬರ್ ಪಡೆದುಕೊಂಡಿದ್ದಾಳೆ” ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ.

“ರಾತ್ರಿ 8.45ರ ಸುಮಾರಿಗೆ ಯುವತಿ ದಿನೇಶ್​ ಕುಮಾರ್ ಅವರ ವಾಟ್ಸಪ್​ಗೆ Hi ಎಂದು ಮೆಸೇಜ್ ಮಾಡಿದ್ದಾಳೆ. ಆಗ, ದಿನೇಶ್​ ಕುಮಾರ್​ ಅವರು ಪ್ರತಿಕ್ರಿಯಿಸಲಿಲ್ಲ. ಬದಲಿಗೆ ಮರುದಿನ ಬೆಳಿಗ್ಗೆ ದಿನೇಶ್​ ಕುಮಾರ್ ನೀವು ಯಾರು ಎಂದು ಮೆಸೇಜ್ ಮಾಡಿದ್ದಾರೆ. ಬಳಿಕ, ಯುವತಿ ದಿನೇಶ್​ ಕುಮಾರ್ ಅವರೊಂದಿಗೆ ಸಲುಗೆಯಿಂದ ಮೆಸೆಜ್ ಮಾಡಲು ಆರಂಭಿಸಿದ್ದಾಳೆ. ದಿನೇಶ್​ ಕುಮಾರ್ ಅವರು ಕೂಡ ಮೆಸೇಜ್ ಮಾಡಲು ಆರಂಭಿಸಿದ್ದಾರೆ”.

ಇದನ್ನೂ ಓದಿ
ಹೆತ್ತವರ ಬದುಕಿಗೆ ಕೊಳ್ಳಿ ಇಟ್ಟ ಮಗಳ ಲವ್:ಅಪ್ಪ,ಅಮ್ಮ,ತಂಗಿ ಸತ್ತರೂ ಬರಲಿಲ್ಲ
ಓಡಿ ಹೋದ ಮಗಳು: ಮನನೊಂದು ಆತ್ಮಹತ್ಯೆಗೆ ಶರಣಾದ ಕುಟುಂಬಸ್ಥರು?
‘ಕಾರ್ತಿಕ್ ಕೊಲೆ ಆರೋಪಿಗಳನ್ನು ಹೊಡೆದೇ ಹೊಡೆಯುತ್ತೇವೆ’, ಪೋಸ್ಟ್ ವೈರಲ್
ಮೈಸೂರಿನಲ್ಲಿ ತಾಯಿ ಕೊಂದ ಮಗ: ಬೆಂಗಳೂರಿನಲ್ಲಿ ತಂದೆಯನ್ನೇ ಹತ್ಯೆಗೈದ ಪುತ್ರ

“ಯುವತಿ ಆಕೆಯ ಕೆಲವು ಪೋಟೋಗಳನ್ನು ದಿನೇಶ್​ ಕುಮಾರ್ ಅವರ ಮೊಬೈಲ್​ಗೆ ಕಳುಹಿಸಿದ್ದಾಳೆ. ಜೂನ್​ 14 ರ ಮದ್ಯಾಹ್ನ ಸುಮಾರು 3.30ರ ಸುಮಾರಿಗೆ ಯುವತಿ ದಿನೇಶ್ ಕುಮಾರ್ ಅವರಿಗೆ ವಾಟ್ಸಪ್​ ಕಾಲ್ ಮಾಡಿ ನಮ್ಮ ಚಿಕ್ಕಮ್ಮನ ಮನೆ ಮರಡಿಯೂರು ಗ್ರಾಮದಲ್ಲಿದೆ. ಈ ದಿನ ಮನೆಯಲಿ ನಾನೊಬ್ಬಳೆ ಇದ್ದೇನೆ ಲೋಕೇಷನ್ ಕಳಿಸುತ್ತೇನೆ ಲೋಕೆಷನ್​ಗೆ ಬನ್ನಿ ಎಂದು ಹೇಳಿದ್ದಾಳೆ”

ದಿನೇಶ್​ ಕುಮಾರ್ ಸಂಜೆ ಸುಮಾರು 4.10 ಸುಮಾರಿಗೆ ಕಂಪಲಾಪುರದಿಂದ ಕಾರಿನಲಿ ಹೊರಟು ಪಿರಿಯಾಪಟ್ಟಣ ಬೈಲಕುಪ್ಪೆ ಮಾರ್ಗವಾಗಿ ಮರಡಿಯೂರು ಗ್ರಾಮದಿಂದ ಸ್ವಲ್ಪ ದೂರ ಇರುವ ಯುವತಿ ಕಳುಹಿಸಿದ್ದ ಲೊಕೇಷನ್​ಗೆ ಸಂಜೆ ಸುಮಾರು 4.45ಕ್ಕೆ ತಲುಪಿದ್ದಾರೆ. ಯುವತಿ ಕಾರಿನ ಬಳಿ ಬಂದು ಇದೇ ನಮ್ಮ ಚಿಕ್ಕಮ್ಮನ ಮನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾಳೆ”.

“ನಂತರ ಯುವತಿ ಕಾಫಿ ಕುಡಿಯುತ್ತೀರಾ? ಎಂದು ಕೇಳಿದ್ದಾಳೆ. ಅದಕ್ಕೆ ದಿನೇಶ್ ಕುಮಾರ್ ಬೇಡ ಎಂದು ಹೇಳಿದ್ದಾರೆ. ಬಳಿಕ ಯುವತಿ ಸಲುಗೆಯಿಂದ ದಿನೇಶ್​ ಕುಮಾರ್ ಅವರ ಪಕ್ಕದಲ್ಲಿ ಕುಳಿತುಕೊಂಡು “ನೀನು ನನಗೆ ತುಂಬಾ ಇಷ್ಟ” ಎಂದು ಅವರ ಮೈ ಮುಟ್ಟಿ, ತಬ್ಬಿಕೊಂಡು ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದಾಳೆ. ನಂತರ ಡೋರ್ ಲಾಕ್ ಮಾಡಿ ಬರುತ್ತೇನೆಂದು ಹೇಳಿ ಹೋಗಿ ಡೋರ್ ಲಾಕ್ ಮಾಡದೆ ಹಾಗೇ ಬಂದಿದ್ದಾಳೆ.”

“ಇಬ್ಬರೂ ರೂಮಿನ ಒಳಗೆ ಹೋಗಿದ್ದಾರೆ. ಇಬ್ಬರೂ ರೂಮಿನಲಿದ್ದಾಗ ಮೂವರು ಅಪರಿಚಿತರು ಬಾಗಿಲು ತೆರೆದು ರೂಮಿನೊಳಗೆ ಬಂದು ದಿನೇಶ್ ಕುಮಾರ್ ಅವರಿಗೆ ಮನ ಬಂದತೆ ಬೈಯುತ್ತಾ ಹಲ್ಲೆ ಮಾಡಿ, ಅರೆ ಬೆತ್ತಲೆ ಮಾಡಿದ್ದಾರೆ. ನಂತರ, ಯುವತಿ ಜೊತೆ ನಿಲಿಸಿ ಫೋಟೋ ಹಾಗೂ ವೀಡಿಯೋ ಮಾಡಿಕೊಂಡಿದ್ದಾರೆ. ದಿನೇಶ್ ಕುಮಾರ್ ಎಷ್ಟೇ ಕೇಳಿಕೊಂಡರು ಬಿಡದೆ ಮನಬಂದಂತೆ ಹೊಡೆದಿದ್ದಾರೆ” ಎಂದು ಎಫ್​ಐಆರ್​ನಲ್ಲಿದೆ.

ಸ್ವಲ್ಪ ಸಮಯದ ನಂತರ ಮೂರ್ತಿ ಅಲಿಯಾಸ್​ ದಾಸಬೋವಿ ಮಾಕನಹಳ್ಳಿ, ಹುಣಸೂರು ಗ್ರಾಮಂತರ ಪೊಲೀಸ್ ಠಾಣೆಯ ಪೇದೆ ಶಿವಣ್ಣ ಅಲಿಯಾಸ್​ ಪಾಪಣ್ಣ, ಇದೇ ರೂಮಿಗೆ ಬಂದು “ನಿನ್ನನ್ನು ಬಿಟ್ಟು ಕಳಿಸಲು ನಾವು ಇವರೊಂದಿಗೆ ಮಾತನಾಡುತ್ತೇವೆ” ಎಂದು ದಿನೇಶ್​ ಕುಮಾರ್ ಅವರಿಗೆ ನಂಬಿಸಿ, 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.”

“ಹಣ ಕೊಡದಿದ್ದರೆ ಪೊಟೋ ಮತ್ತು ವೀಡಿಯೋವನ್ನು ಸಾಮಾಜಿಕ ಜಾಲತಾಣದಲಿ ಹಾಕುತ್ತೇವೆ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಆಗ, ದಿನೇಶ್​ ಕುಮಾರ್ ಅವರು ತಮ್ಮ ಮಹೇಂದ್ರ ಚೌದರಿ ಅವರಿಗೆ ಕರೆ ಮಾಡಿ 10 ಲಕ್ಷ ಹಣ ತಂದು ಪೊಲೀಸ್ ಶಿವಣ್ಣ ಇವರ ಕೈಯಲ್ಲಿ ಕೊಡುವಂತೆ ಹೇಳಿದ್ದಾರೆ. ಆದರೆ, ದಿನೇಶ್ ಕುಮಾರ್ ಅವರ ಈ ಮಾತಿನಿಂದ ಅನುಮಾನಗೊಂಡ ಮಹೇಂದ್ರ ಅವರು ಸ್ನೇಹಿತ ಮಹೇಶ್​ರವರೊಂದಿಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಹೋಗಿ ವಿಚಾರ ತಿಳಿದಿಸಿದ್ದಾರೆ.”

“ಠಾಣೆಯಲ್ಲಿದ್ದ ರವೀಶ್ ಅವರು ಪೊಲೀಸ್ ಇನ್ಸ್​ಪೆಕ್ಟರ್​ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಗ ಇನ್ಸ್​​ಪೆಕ್ಟರ್ ದಿನೇಶ್​ ಕುಮಾರ್ ಅವರ ನಂಬರ್ ಪಡೆದುಕೊಂಡಿದ್ದಾರೆ. ಬಳಿಕ, ದಿನೇಶ್​ ಕುಮಾರ್ ಅವರಿಗೆ ಇನ್ಸ್​ಪೆಕ್ಟರ್ ಕರೆ ಮಾಡಿ ಆರೋಪಿಗಳೊಂದಿಗೆ ಮಾತನಾಡಿದ್ದಾರೆ. ನೀವು ದಿನೇಶ್​ ಕುಮಾರ್​ ಅವರನ್ನು ಬಿಡದಿದ್ದರೆ ನಮ್ಮ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.”

ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳ ಮೃತದೇಹ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ

“ಆಗ, ಆರೋಪಿಗಳು ದಿನೇಶ್​ ಕುಮಾರ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಬೈಲಕುಪ್ಪೆ ಟೌನ್ ಮೊದಲನೇ ಕ್ಯಾಂಪ್ ರಸ್ತೆಗೆ ಕರೆದುಕೊಂಡು ಹೋಗಿದ್ದಾರೆ. ಮಧ್ಯರಾತ್ರಿ 1.15 ಗಂಟೆ ಸುಮಾರಿಗೆ ದಿನೇಶ್ ಕುಮಾರ್ ಅವರನ್ನು ಆರೋಪಿಗಳು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ನಂತರ, ದಿನೇಶ್ ಕುಮಾರ್ ಅವರು ಮಹೇಂದ್ರ ಅವರಿಗೆ ಕರೆ ಮಾಡಿ ನಡೆದ ಘಟನೆಯನ್ನು ಹೇಳಿದ್ದಾರೆ. ಆಗ ಮಹೇಂದ್ರ ಮತ್ತು ಅವರ ಸ್ನೇಹಿತ ಮಹೇಶ್ ಕೂಡಲೇ ಬೈಲಕುಪ್ಪೆ ಟೌನ್​ಗೆ ತೆರಳಿ ದಿನೇಶ್ ಕುಮಾರ್ ಅವರನ್ನು ಕರೆದುಕೊಂಡು ಮನೆಗೆ ಬಂದಿದ್ದಾರೆ ಎಂದು ಎಫ್​ಐಆರ್​ನಲ್ಲಿ ಅಡಕವಾಗಿದೆ.”

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Mon, 16 June 25