AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಬಾಡಿಗೆ ಒಪ್ಪಂದಕ್ಕೆ ಪೊಲೀಸ್ ಪರಿಶೀಲನೆ ಕಡ್ಡಾಯ: ಮಂಗಳೂರು ಸ್ಫೋಟದ ನಂತರ ಬಿಗಿ ಕ್ರಮ

ಮನೆಗಳನ್ನು ಬಾಡಿಗೆಗೆ ಕೊಡುವ ಮೊದಲು ಮಾಲೀಕರು ಪೊಲೀಸ್ ಠಾಣೆಗಳಲ್ಲಿ ಸುರಕ್ಷಾ ಅರ್ಜಿಯನ್ನು ತುಂಬಿ, ಬಾಡಿಗೆದಾರರ ವಿವರಗಳನ್ನು ನೀಡಬೇಕು ಎಂದು ಮೈಸೂರು ಪೊಲೀಸರು ಹೇಳಿದ್ದಾರೆ.

ಮೈಸೂರಿನಲ್ಲಿ ಬಾಡಿಗೆ ಒಪ್ಪಂದಕ್ಕೆ ಪೊಲೀಸ್ ಪರಿಶೀಲನೆ ಕಡ್ಡಾಯ: ಮಂಗಳೂರು ಸ್ಫೋಟದ ನಂತರ ಬಿಗಿ ಕ್ರಮ
ಪ್ರಾತಿನಿದಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 28, 2022 | 12:18 PM

Share

ಮೈಸೂರು: ಮಂಗಳೂರಿನ ಕಂಕನಾಡಿಯಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ನಂತರ ನಗರ ಪೊಲೀಸರು ಹಲವು ಹೊಸ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಮಂಗಳೂರು ಸ್ಫೋಟದ ಮುಖ್ಯ ಆರೋಪಿ ಮೊಹಮದ್ ಶಾರೀಕ್ ಮೈಸೂರಿನಲ್ಲಿಯೇ ಬಾಡಿಗೆ ಮನೆಯಲ್ಲಿದ್ದ ಎಂಬ ಮಾಹಿತಿ ಬಹಿರಂಗಗೊಂಡ ನಂತರ ನಗರದಲ್ಲಿ ಮನೆಗಳನ್ನು ಬಾಡಿಗೆಗೆ ನೀಡುವ ಮೊದಲು ಬಾಡಿಗೆದಾರರ ಪೂರ್ವಾಪರ ವಿಚಾರಿಸಿಕೊಳ್ಳಬೇಕು, ಪೊಲೀಸರಿಗೆ ಅವರ ವಿವರ ನೀಡಿ ಪರಿಶೀಲಿಸಿಕೊಳ್ಳಬೇಕು ಎಂದು ಮನೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ಬಾಡಿಗೆ ನೀತಿಯನ್ನು ಜಾರಿಗೊಳಿಸಲಾಗಿದೆ. ಹೊಸ ಬಾಡಿಗೆ ನೀತಿಯ ಪ್ರಕಾರ, ಕಟ್ಟಡ ಮಾಲೀಕರು ತಮ್ಮ ಮನೆಯನ್ನು ಬಾಡಿಗೆಗೆ ಕೊಡುವ ಮೊದಲು ಪೊಲೀಸರಿಂದ ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳಬೇಕಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಮನೆಗಳನ್ನು ಬಾಡಿಗೆಗೆ ಕೊಡುವ ಮೊದಲು ಮಾಲೀಕರು ಪೊಲೀಸ್ ಠಾಣೆಗಳಲ್ಲಿ ಸುರಕ್ಷಾ ಅರ್ಜಿಯನ್ನು ತುಂಬಬೇಕಿದೆ. ಇದಕ್ಕೆ ₹ 100 ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಚುಲರ್​ಗಳು, ಕುಟುಂಬಗಳು ಮತ್ತು ಪೇಯಿಂಗ್ ಗೆಸ್ಟ್​​ ಆಗಿ ಇರಲು ಬರುವವರ ಬಗ್ಗೆ ಪೊಲೀಸರಿಗೆ ವಿವರ ಕೊಡಬೇಕಿದೆ ಎಂದು ಅವರು ಸೂಚಿಸಿದರು.

ಅರ್ಜಿ ಜೊತೆಗೆ ಮನೆ ಮಾಲೀಕರು ತಮ್ಮ ಮನೆಗೆ ಬಾಡಿಗೆಗೆ ಬರಲು ಉದ್ದೇಶಿಸಿರುವವರ ಹೆಸರು, ತಂದೆಯ ಹೆಸರು, ವಯಸ್ಸು, ಲಿಂಗ, ವಿಳಾಸ, ಭಾವಚಿತ್ರ, ಕೆಲಸ ಮಾಡುವ ಸ್ಥಳ, ಕೆಲಸ ಮಾಡುವ ಇತರರ ಸಂಪರ್ಕ ಸಂಖ್ಯೆಗಳನ್ನು ಪೊಲೀಸರಿಗೆ ಒದಗಿಸಬೇಕಿದೆ. ಈ ಅರ್ಜಿಗಳೊಂದಿಗೆ ಬಾಡಿಗೆದಾರರ ಆಧಾರ್ ಕಾರ್ಡ್, ಪಾಸ್​ಪೋರ್ಟ್​, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಚುನಾವಣಾ ಗುರುತು ಚೀಟಿಯನ್ನು ಪೊಲೀಸರಿಗೆ ಒದಗಿಸಬೇಕಿದೆ. ಅರ್ಜಿಗಳನ್ನು ತುಂಬಿದ ಬಳಿಕ ಮನೆ ಮಾಲೀಕರು ಮತ್ತು ಬಾಡಿಗೆದಾರರು ಅರ್ಜಿಗೆ ಸಹಿ ಹಾಕಬೇಕು. ನಂತರ ಪೊಲೀಸರು ಈ ಮಾಹಿತಿಯ ಸತ್ಯಾಸತ್ಯತೆ ವಿಚಾರಿಸಿ, ನಿರಾಪೇಕ್ಷಣಾ ಪತ್ರ ನೀಡುತ್ತಾರೆ. ಮಾಹಿತಿ ಪರಿಶೀಲನೆಗಾಗಿ ಪೊಲೀಸರು ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳ ನೆರವನ್ನೂ ಪಡೆದುಕೊಳ್ಳಲಿದ್ದಾರೆ.

ಮಂಗಳೂರು ಸ್ಫೋಟದ ಮುಖ್ಯ ಆರೋಪಿ ಶಾರೀಕ್ ಮೈಸೂರಿನಲ್ಲಿ ವಾಸಿಸುತ್ತಿದ್ದ. ಅವನ ಬಳಿ ಇದ್ದ ಆಧಾರ್​ ಕಾರ್ಡ್​ನ ನಂಬರ್ ಪ್ರೇಮರಾಜ್ ಹುಟಗಿ ಅವರಿಗೆ ಸೇರಿತ್ತು. ಶಾರೀಕ್​ ಮನೆಯಲ್ಲಿ ಬೆಂಕಿಪೊಟ್ಟಣಗಳು, ನಟ್ಟುಬೋಲ್ಟ್​ಗಳು, ಸರ್ಕೀಟ್​ಬೋರ್ಡ್​ಗಳು ಪತ್ತೆಯಾಗಿದ್ದವು. ಮೈಸೂರಿನಲ್ಲಿದ್ದ ಅವನ ಮನೆ ಮಾಲೀಕರಿಗೆ ತಾನು ಬಾಡಿಗೆಗೆ ನೀಡಿರುವ ಮನೆಯಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ಎಡಿಜಿಪಿ ಅಲೋಕ್​ಕುಮಾರ್ ಹೇಳಿದ್ದರು.

ಬೆಂಗಳೂರು ಮನೆ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ನಂತರ ಬೆಂಗಳೂರಿನಲ್ಲಿಯೂ ಪೊಲೀಸರು ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನಂತೆ ಬೆಂಗಳೂರಿನಲ್ಲಿ ಬಾಡಿಗೆದಾರರ ಹಿನ್ನೆಲೆಯನ್ನು ಕಡ್ಡಾಯವಾಗಿ ಪೊಲೀಸರಿಂದ ಪರಿಶೀಲಿಸಬೇಕಿಲ್ಲ. ಆದರೆ, ಮಾಲೀಕರು ತಮ್ಮ ಸುರಕ್ಷೆಗಾಗಿ ಬಾಡಿಗೆದಾರರ ವಿವರ ಪಡೆದುಕೊಂಡಿರಬೇಕು ಎಂದು ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ ಎ.ಸುಬ್ರಹ್ಮಣ್ಯೇಶ್ವರ ರಾವ್, ಹಿನ್ನೆಲೆ ಪರಿಶೀಲನೆಯನ್ನು ಕಡ್ಡಾಯಗೊಳಿಸಿ, ಒಂದು ಆಯ್ಕೆಯಾಗಿ ಸಲಹೆ ಮಾಡಲಾಗಿದೆ. ಮಾಲೀಕರು ತಮ್ಮ ಬಾಡಿಗೆದಾರರ ಹಿನ್ನೆಲೆಯನ್ನು ಪರಿಶೀಲಿಸಿದರೆ ಸುರಕ್ಷಿತರಾಗಿರುತ್ತಾರೆ. ವಿದೇಶಿ ಪ್ರಜೆಗಳಾಗಿರುವ ಡ್ರಗ್ ಪೆಡ್ಲರ್‌ಗಳ ನಿವಾಸಗಳ ಮೇಲೆ ದಾಳಿ ನಡೆಸಿದಾಗ, ಬಾಡಿಗೆದಾರರ ಗುರುತಿನ ಪುರಾವೆ ಇಲ್ಲದಿದ್ದರೆ ಮಾಲೀಕರ ಮೇಲೆಯೂ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

Published On - 12:08 pm, Mon, 28 November 22