ಮೈಸೂರು: ಆರೋಗ್ಯ ಕರ್ನಾಟಕ ಆಗಬೇಕೆಂಬುದು ಮುಖ್ಯಮಂತ್ರಿಗಳ ಕನಸು ಎಂದ ಡಾ.ಕೆ.ಸುಧಾಕರ್
ನಾಲ್ವಡಿ ನಾಯಕತ್ವದಲ್ಲಿಯೇ ಮೈಸೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗಿದ್ದು, ಇಡೀ ದೇಶದಲ್ಲಿಯೇ ಮೊದಲು ಆರಂಭವಾಗಿರುವ ಮೆಡಿಕಲ್ ಕಾಲೇಜು ಇದಾಗಿದೆ ಎಂದು ಮೈಸೂರಿನಲ್ಲಿ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಮೈಸೂರು: ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಬಹಳ ಮುಂದಿದ್ದು, ರಾಜ್ಯದ ಮೂಲೆ ಮೂಲೆಗೆ ಗುಣಮಟ್ಟದ ಚಿಕಿತ್ಸೆ ತಲುಪಿಸಲಾಗಿದೆ. ಆರೋಗ್ಯ ಕರ್ನಾಟಕ ಆಗಬೇಕೆಂಬುದು ಮುಖ್ಯಮಂತ್ರಿಗಳ ಕನಸು ಎಂದು ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಂಕ್ರಾಮಿಕ ರೋಗ ತಡೆಯಲು 30 ವರ್ಷ ಮೇಲ್ಪಟ್ಟವರಿಗೆ ತಪಾಸಣೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿಯೂ ನಮ್ಮ ಕ್ಲಿನಿಕ್ ಹೆಸರಲ್ಲಿ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದ್ದು, 60 ವರ್ಷ ಮೇಲ್ಪಟ್ಟವರಿಗೆ ಉಚಿತ ದೃಷ್ಟಿ ತಪಾಸಣೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಇನ್ನು ಆರೋಗ್ಯ ಕ್ಷೇತ್ರದಲ್ಲಿ ಮಕ್ಕಳಿಗೂ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಆರೋಗ್ಯವಾಗಿರಲು ವರ್ಷಕ್ಕೆ ಒಂದು ಬಾರಿಯಾದರೂ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು.
ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ಎಂದು ಸಿಎಂ ಬೊಮ್ಮಾಯಿ ಸಲಹೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ನಮ್ಮ ರಾಜ್ಯದಲ್ಲಿ ಓದಿರುವ ವೈದ್ಯರು, ಖಾಸಗಿ ಆಸ್ಪತ್ರೆಗೆ ಹೋಗದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಮಗೆ ಸವಾಲಾಗಿರುವ ಕೆಲಸ ಸಿಗುತ್ತದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಆದರೂ ಜ್ವರ ಬಂದರೆ ವೈದ್ಯರ ಬಳಿಗೆ ಬರಬೇಕು. ಪ್ರತಿಜ್ಞಾವಿಧಿಯಲ್ಲಿ ಬಡವರಿಗೆ ಸೇವೆ ಸಲ್ಲಿಸುವುದನ್ನು ಸೇರಿಸಿ, ಮನುಷ್ಯನಿಗೆ ಆರೋಗ್ಯ ಇಲ್ಲದಿದ್ದರೆ ಏನೂ ಪ್ರಯೋಜನ ಇಲ್ಲ. ಆರೋಗ್ಯ ಚೆನ್ನಾಗಿರಬೇಕಾದರೆ ಚಿಕಿತ್ಸೆ ತಲುಪಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ, ನನಗೆ ಚುನಾವಣೆ ಬಂದಾಗ ಒತ್ತಡವಾಗುತ್ತದೆ. ನಮಗೆ ಚುನಾವಣೆಯೇ ಒಂದು ರೀತಿ ಪರೀಕ್ಷೆ ಇದ್ದಂತೆ ಎಂದು ವಿದ್ಯಾರ್ಥಿಗಳಿಗೆ ಹಾಸ್ಯಾಸ್ಪದವಾಗಿ ಹೇಳಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:45 pm, Mon, 28 November 22