
ಮೈಸೂರು, ಡಿಸೆಂಬರ್ 29: ಹುಣಸೂರು ಪಟ್ಟಣದಲ್ಲಿ ಹಾಡಹಗಲೇ ಚಿನ್ನದಂಗಡಿ ದರೋಡೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಂಡಿದೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ʼಗೆ ನುಗ್ಗಿದ್ದ 5 ಜನರ ಗ್ಯಾಂಗ್, ಸಿಬ್ಬಂದಿಗೆ ಗನ್ ತೋರಿಸಿ 7 ಕೆಜಿ ಚಿನ್ನ ಮತ್ತು ವಜ್ರ ದರೋಡೆ ಮಾಡಿ ಪರಾರಿಯಾಗಿತ್ತು. ಆರೋಪಿಗಳ ಪತ್ತೆಗೆ ಮೈಸೂರು ಎಸ್ಪಿ 5 ತಂಡ ರಚಿಸಿದ್ದು, ಗ್ಯಾಂಗ್ಗೆ ಖಾಕಿ ಬಲೆ ಬೀಸಿದೆ.
ಚಿನ್ನದಂಗಡಿ ದರೋಡೆ ನಡೆಸಿ ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಕೇವಲ ಐದೇ ಐದು ನಿಮಿಷಗಳಲ್ಲಿ ಗೋಲ್ಡ್ ಶಾಪ್ ರಾಬರಿ ನಡೆಸಲಾಗಿದ್ದು, ಕೆಜಿಗಟ್ಟಲೆ ಚಿನ್ನ ಕದ್ದು ಚಾಲಾಕಿಗಳು ಪರಾರಿಯಾಗಿದ್ದಾರೆ. ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಅಂಗಡಿಗೆ ಎಂಟ್ರಿಕೊಟ್ಟಿದ್ದ ಗ್ಯಾಂಗ್ 2 ಗಂಟೆ 9 ನಿಮಿಷಕ್ಕೆ ಶಾಪ್ನಿಂದ ತೆರಳಿದೆ. ಚಿನ್ನ ತೆಗೆದುಕೊಂಡ ಹೋಗಲು ಎರಡು ಚೀಲದಂತಹ ಬ್ಯಾಗ್ ತಂದಿದ್ದ ದರೋಡೆಕೋರರು, ಶೋಕೆಸ್ನಲ್ಲಿಟ್ಟಿದ್ದ ದೊಡ್ಡ ದೊಡ್ಡ ಗಾತ್ರದ ಆಭರಣವನ್ನ ಎರಡಲೇ ನಿಮಿಷದಲ್ಲಿ ಒಂದು ಕಡೆ ರಾಶಿ ಹಾಕಿದ್ದಾರೆ. ಬಳಿಕ ಮತ್ತೆರಡು ನಿಮಿಷದಲ್ಲಿ ದೊಡ್ಡ ಬ್ಯಾಗ್ಗೆ ಅವನ್ನು ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಹುಣಸೂರಿನಲ್ಲಿ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮ್ಯಾನೇಜರ್, ಸಿಬ್ಬಂದಿ ಸಮಯಪ್ರಜ್ಞೆಯಿಂದ ಪೂರ್ತಿ ಅಂಗಡಿ ದರೋಡೆ ಆಗುವುದು ತಪ್ಪಿದೆ. ಮಡಿಕೇರಿ, ವಿರಾಜಪೇಟೆ, ನೆಲಮಂಗಲ, ಕೇರಳ ಮತ್ತು ಯುಎಇಯಲ್ಲಿ ಚಿನ್ನದಂಗಡಿಯ ಬ್ರ್ಯಾಂಚ್ ಇದ್ದು, ಇವುಗಳೆಲ್ಲದರ ಸಿಸಿ ಕ್ಯಾಮರಾ ವಿಡಿಯೋ ಕೇರಳದ ಕೇಂದ್ರ ಕಚೇರಿಯಲ್ಲಿ ಲಭ್ಯವಿವೆ. ವಿಡಿಯೋ ನೋಡಿ ಮ್ಯಾನೇಜರ್ ಅಸ್ಗರ್‌ಗೆ ಕೇಂದ್ರ ಕಚೇರಿಯಿಂದ ಮಾಹಿತಿ ನೀಡಲಾಗಿದ್ದು, ಆ ವೇಳೆ ಊಟ ಮಾಡುತ್ತಿದ್ದ ಮ್ಯಾನೇಜರ್ ಅರ್ಧಕ್ಕೆ ಊಟ ಬಿಟ್ಟು ಓಡಿ ಬಂದಿದ್ದಾರೆ. ಅಂಗಡಿ ಲಾಕ್ ಮಾಡಲು ಯತ್ನಿಸಿದ ಮ್ಯಾನೇಜರ್ ಮೇಲೆ ಫೈರ್ ಮಾಡಲು ಆರೋಪಿಗಳು ಯತ್ನಿಸಿದ್ದಾರೆ. ಅಲ್ಲಿಯವರೆಗೂ ಆರಾಮಾಗಿ ಭಯ ಇಲ್ಲದೆ ದರೋಡೆಗೆ ಮುಂದಾಗಿದ್ದ ಗ್ಯಾಂಗ್ ಮ್ಯಾನೇಜರ್ ಬಂದ ತಕ್ಷಣ ಆತುರಾತುರವಾಗಿ ಸಿಕ್ಕಷ್ಟು ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದೆ.
ದರೋಡೆ ನಡೆದಿರುವ ಚಿನ್ನಾಭರಣದ ಅಂಗಡಿಯನ್ನ ತಾತ್ಕಾಲಿಕವಾಗಿ ಪೊಲೀಸರು ಬಂದ್ ಮಾಡಿಸಿದ್ದಾರೆ. ಅಂಗಡಿ ಬಳಿ ತೆರಳದಂತೆ ನಿರ್ಬಂಧ ವಿಧಿಸಲಾಗಿದ್ದು, ಚಿನ್ನಾಭರಣ ಅಂಗಡಿ ಮಾಲೀಕ, ಮ್ಯಾನೇಜರ್, ಸಿಬ್ಬಂದಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:56 pm, Mon, 29 December 25